ADVERTISEMENT

ಬಸವಾಪಟ್ಟಣ | ಬದಲಾದ ಹವಾಮಾನ: ಗಗನಕ್ಕೇರಿದ ವೀಳ್ಯದೆಲೆ ದರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:52 IST
Last Updated 6 ಜನವರಿ 2026, 2:52 IST
ಸಂತೆಯಲ್ಲಿ ಸೋಮವಾರ ವೀಳ್ಯದೆಲೆ ಮಾರುತ್ತಿರುವ ವ್ಯಾಪಾರಿ ಮೇಘರಾಜ
ಸಂತೆಯಲ್ಲಿ ಸೋಮವಾರ ವೀಳ್ಯದೆಲೆ ಮಾರುತ್ತಿರುವ ವ್ಯಾಪಾರಿ ಮೇಘರಾಜ   

ಬಸವಾಪಟ್ಟಣ: ಮೂಡುಗಾಳಿಗೆ ವೀಳ್ಯದೆಲೆ ಬಳ್ಳಿಗಳು ಒಣಗಲಾರಂಭಿಸಿದ್ದು, ಪೂರೈಕೆಯಲ್ಲಿ ಕುಸಿತವಾಗಿದೆ. ಇದರಿಂದಾಗಿ ದರ ಗಗನಕ್ಕೇರಿದ್ದು, ಗ್ರಾಹಕರು ಪರದಾಡುವಂತಾಗಿದೆ.

ದಾವಣಗೆರೆ ಸೇರಿದಂತೆ ಹಲವೆಡೆ ಹರಿಹರ ತಾಲ್ಲೂಕಿನ ಬೆಳ್ಳೂಡಿ, ಸಂಶಿಪುರ, ನಾಗೇನಹಳ್ಳಿ, ಹನಗವಾಡಿ, ರಾಮತೀರ್ಥ ಗ್ರಾಮಗಳಲ್ಲಿ ಬೆಳೆಯುವ ವೀಳೆದೆಲೆ ಸರಬರಾಜಾಗುತ್ತಿದ್ದು, ಬಳ್ಳಿಗಳು ಒಣಗಿ ಎಲೆಗಳು ಉದುರುತ್ತಿರುವುದರಿಂದ ವೀಳ್ಯದೆಲೆ ಉತ್ಪಾದನೆ ಕುಂಠಿತವಾಗಿದೆ.

₹ 60 ಇದ್ದ 100 ಎಲೆಗಳ ಒಂದು ಕಟ್ಟು ₹ 120 ರಿಂದ ₹ 150ರ ವರೆಗೆ ಮಾರಾಟವಾಗುತ್ತಿದೆ. 120 ಕಟ್ಟುಗಳಿರುವ ಒಂದು ಉತ್ತಮ ದರ್ಜೆಯ ಎಲೆಯ ಪಿಂಡಿಗೆ ಅಂದಾಜು ₹ 20,000ಕ್ಕೆ ಏರಿಕೆಯಾಗಿದೆ ಎನ್ನುತ್ತಾರೆ ಸಂಶಿಪುರದ ರೈತ ಅಶೋಕ್‌.

ADVERTISEMENT

ಈಗ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ದೇವತೆಯ ಹಬ್ಬಗಳು ಆರಂಭವಾಗಿರುವುದರಿಂದ ಎಲೆಯ ಬೇಡಿಕೆಯೂ ಹೆಚ್ಚಾಗಿದೆ. ಆದರೆ, ಉತ್ಪಾದನೆ ಕಡಿಮೆಯಾಗಿರುವುದರಿಂದ ದರ ಒಮ್ಮೆಗೆ ಹೆಚ್ಚಳವಾಗಿದೆ ಎನ್ನುತ್ತಾರೆ ಬೆಳೆಗಾರ ರಾಜಪ್ಪ.

ಹರಿಹರ ತಾಲ್ಲೂಕಿನಿಂದ ಹುಬ್ಬಳ್ಳಿ, ಬೆಳಗಾಂವ್‌, ಪೂನಾ, ಮುಂಬೈಗಳಿಗೂ ರವಾನೆಯಾಗುತ್ತಿರುವುದರಿಂದ ನಮ್ಮಂತಹ ಸಣ್ಣ ವ್ಯಾಪಾರಿಗಳು ದುಬಾರಿ ಬೆಲೆ ನೀಡಿ ರೈತರಿಂದ ಖರೀದಿಸಿ ಮಾರುವುದು ಕಷ್ಟವಾಗಿದೆ. ಬೆಲೆ ಕೇಳಿದ ಕೆಲ ಗ್ರಾಹಕರು ಬೇಡ ಎಂದು ಮುಂದೆ ಹೋಗುತ್ತಿದ್ದಾರೆ. ಫೆಬ್ರವರಿ ತಿಂಗಳು ಮುಗಿಯುವ ವರೆಗೆ ಬೆಲೆ ಏರಿಕೆ ಹೀಗಿಯೇ ಇರುತ್ತದೆ ಎನ್ನುತ್ತಾರೆ ಇಲ್ಲಿನ ವೀಳ್ಯದೆಲೆ ವ್ಯಾಪಾರಿ ಮೇಘರಾಜ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.