ADVERTISEMENT

ಹುಬ್ಬಳ್ಳಿ: ಜಿಲ್ಲೆಯ ಕೀರ್ತಿ ಬೆಳಗಿದ ‘ಹಾಕಿ ಸಹೋದರರು’

ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿರುವ ಹುಬ್ಬಳ್ಳಿಯ ಬಿಜವಾಡ ಕುಟುಂಬದವರು

ಪ್ರಮೋದ
Published 28 ಆಗಸ್ಟ್ 2020, 15:33 IST
Last Updated 28 ಆಗಸ್ಟ್ 2020, 15:33 IST
ಹಾಕಿ ಟೂರ್ನಿಯೊಂದರಲ್ಲಿ ಟ್ರೋಫಿಯೊಂದಿಗೆ ಅಭಿಷೇಕ, ವಿನಾಯಕ, ಸೂರಜ್‌ ಹಾಗೂ ಪ್ರಜ್ವಲ್‌ ಬಿಜವಾಡ
ಹಾಕಿ ಟೂರ್ನಿಯೊಂದರಲ್ಲಿ ಟ್ರೋಫಿಯೊಂದಿಗೆ ಅಭಿಷೇಕ, ವಿನಾಯಕ, ಸೂರಜ್‌ ಹಾಗೂ ಪ್ರಜ್ವಲ್‌ ಬಿಜವಾಡ   

ಹುಬ್ಬಳ್ಳಿ: ನಗರದ ಸೆಟ್ಲಮೆಂಟ್‌ ಬಡಾವಣೆಯಲ್ಲಿ ಮನೆಗೊಬ್ಬ ಹಾಕಿ ಆಟಗಾರ ಸಿಗುತ್ತಾನೆ. ಅಲ್ಲಿನ ಪ್ರತಿಮನೆಯ ಪೋಷಕರು ತಮ್ಮ ಮಕ್ಕಳು ಹಾಕಿ ಆಟಗಾರರಾಗಬೇಕೆಂದು ಬಯಸುತ್ತಾರೆ. ಹೀಗೆ ರಾಷ್ಟ್ರೀಯ ಕ್ರೀಡೆಯ ಬಗ್ಗೆ ಅತೀವವಾದ ಪ್ರೀತಿ ಹೊಂದಿರುವ ಆ ಬಡಾವಣೆಯಲ್ಲಿ ಬೆಳೆದ ಬಿಜವಾಡ ಕುಟುಂಬದ ಸಹೋದರರು ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡೆಯಲ್ಲಿ ಜಿಲ್ಲೆಯ ಕೀರ್ತಿ ಬೆಳಗಿದ್ದಾರೆ.

ವಿನಾಯಕ ಬಿಜವಾಡ, ಅಭಿಷೇಕ ಬಿಜವಾಡ, ಸೂರಜ್‌ ಬಿಜವಾಡ ಮತ್ತು ಪ್ರಜ್ವಲ್‌ ಬಿಜವಾಡ ಸಹೋದರರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಆಡಿದ್ದಾರೆ. ಇವರೆಲ್ಲರೂ ಸೆಟ್ಲಮೆಂಟ್‌ನ ಯಂಗ್‌ ಸ್ಟರ್ಸ್ ಹಾಕಿ ಕ್ಲಬ್‌ನಲ್ಲಿ ಪಳಗಿದವರು.

ಸದ್ಯ ಅಂಚೆ ಇಲಾಖೆಯಲ್ಲಿರುವ ವಿನಾಯಕ 20 ವರ್ಷಗಳಿಂದ ಹಾಕಿ ಆಡುತ್ತಿದ್ದಾರೆ. 2010ರಲ್ಲಿ ರಾಷ್ಟ್ರೀಯ ಜೂನಿಯರ್‌ ಟೂರ್ನಿಯಲ್ಲಿ ಕರ್ನಾಟಕ ಚಾಂಪಿಯನ್‌ ಆದಾಗ ತಂಡದಲ್ಲಿದ್ದರು. ಅದೇ ವರ್ಷ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಭಾರತ ತಂಡದ ಶಿಬಿರದಲ್ಲಿ ಪಾಲ್ಗೊಂಡಿದ್ದರು. ವಿಶ್ವ ಹಾಕಿ ಸರಣಿಯಲ್ಲಿ ಕರ್ನಾಟಕ ಲಯನ್ಸ್‌ ತಂಡದಲ್ಲಿದ್ದರು. ಫಾರ್ವರ್ಡ್‌ ಆಟಗಾರ ವಿನಾಯಕ 2013ರಲ್ಲಿ ಸೀನಿಯರ್‌ ರಾಷ್ಟ್ರೀಯ ಟೂರ್ನಿ ರಂಗಸ್ವಾಮಿ ಕಪ್‌ನಲ್ಲಿ ರಾಜ್ಯ ತಂಡ ಪ್ರಶಸ್ತಿ ಜಯಿಸಿದ್ದಾಗಲೂ ಆಡಿದ್ದರು.

ADVERTISEMENT

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದಲ್ಲಿದ್ದ ಸೂರಜ್‌, ಹಾಕಿಯಲ್ಲಿ ಉತ್ತಮ ಪ್ರದರ್ಶನ ತೋರಿ ಕ್ರೀಡಾ ಕೋಟಾದಡಿ ಅವಕಾಶ ಪಡೆದು ಅಹಮದಾಬಾದ್‌ನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ಪ್ರಜ್ವಲ್‌ ಕೂಡ ಯುವ ಸಬಲೀಕರಣದಲ್ಲಿ ತರಬೇತಿ ಪಡೆದವರು. ಅಭಿಷೇಕ 2010ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಮತ್ತು 2013ರಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಆಡಿದ್ದರು. ವಿನಾಯಕ ಅವರ ಚಿಕ್ಕಪ್ಪ ಭೀಮರಾವ ಬಿಜವಾಡ ಕೂಡ ಹಾಕಿ ಆಟಗಾರರು.

ಕುಟುಂಬದ ಹಾಕಿ ಪ್ರೇಮದ ಬಗ್ಗೆ ’ಪ್ರಜಾವಾಣಿ’ ಜೊತೆ ಖುಷಿ ಮಾತನಾಡಿದ ವಿನಾಯಕ ’ಸೆಟ್ಲಮೆಂಟ್‌ನವರು ಎಂದರೆ ಸಾಕು ಅವರು ಎಲ್ಲಿಯೇ ಇದ್ದರೂ ಹಾಕಿ ಆಟದ ಮೇಲೆ ಒಲವು ಇರುತ್ತದೆ. ನಮ್ಮ ಮನೆಯಲ್ಲಿ ಸದ್ಯಕ್ಕೆ ನಾಲ್ಕು ಜನ ಆಟಗಾರರು ಇದ್ದೇವೆ. ಟೂರ್ನಿಗಳಿದ್ದಾಗ ಪರಸ್ಪರ ಚರ್ಚಿಸುತ್ತೇವೆ, ಹೊಸ ಕೌಶಲಗಳನ್ನು ಕಲಿತುಕೊಳ್ಳುತ್ತೇವೆ. ರಾಷ್ಟ್ರೀಯ ಕ್ರೀಡೆ ಆಡಿದ್ದರಿಂದ ನಮ್ಮ ಬದುಕು ಹಸನಾಗಿದೆ’ ಎಂದರು.

ಫಾರ್ವರ್ಡ್‌ ಆಟಗಾರ ಅಭಿಷೇಕ ಮಾತನಾಡಿ ’ನಮ್ಮ ಕುಟುಂಬದವರಿಗೆ ಹಾಕಿ ಮೇಲೆ ಪ್ರೀತಿ ರಕ್ತಗತವಾಗಿ ಬಂದಿದೆ. ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಈ ಆಟದಿಂದ ಹೆಸರು ಹಾಗೂ ಕೀರ್ತಿ ಲಭಿಸಿದೆ’ ಎಂದರು.

ಶನಿವಾರ ರಾಷ್ಟ್ರೀಯ ಕ್ರೀಡಾ ದಿನ

ಹಾಕಿ ಮಾಂತ್ರಿಕ ಎಂದೇ ಹೆಸರಾದ ಮೇಜರ್‌ ಧ್ಯಾನಚಂದ್‌ ಅವರ ಜನ್ಮದಿನ (ಶನಿವಾರ) ಆಗಸ್ಟ್‌ 29ರಂದು. ಅವರ ಜನ್ಮದಿನವನ್ನು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತದೆ. ಧ್ಯಾನಚಂದ್‌ 1926ರಿಂದ 1948ರ ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ ಅವರು 400ಕ್ಕೂ ಹೆಚ್ಚು ಗೋಲುಗಳನ್ನು ಹೊಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.