ADVERTISEMENT

ದಾವಣಗೆರೆ | ಹಕ್ಕಿ ಜ್ವರ.. ಕೋಳಿಮೊಟ್ಟೆಗೆ ತಿರಸ್ಕಾರ..!

ಸರ್ಕಾರಿ, ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ 6 ದಿನ ಮೊಟ್ಟೆ ವಿತರಣೆ

ಜಿ.ಬಿ.ನಾಗರಾಜ್
Published 11 ಮಾರ್ಚ್ 2025, 7:11 IST
Last Updated 11 ಮಾರ್ಚ್ 2025, 7:11 IST
ಮೊಟ್ಟೆ
ಮೊಟ್ಟೆ   

ದಾವಣಗೆರೆ: ಹಕ್ಕಿ ಜ್ವರದ ಭೀತಿಯಿಂದಾಗಿ ಬಿಸಿಯೂಟ ಯೋಜನೆಯಡಿ ನೀಡುವ ಮೊಟ್ಟೆಯನ್ನು ಸೇವಿಸಲು ಜಿಲ್ಲೆಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕೆಲವು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ವಿದ್ಯಾರ್ಥಿಗಳ ಮನವೊಲಿಸಿ ಮೊಟ್ಟೆ ವಿತರಿಸಲು ಶಿಕ್ಷಕರು ಕಷ್ಟಪಡುತ್ತಿದ್ದಾರೆ.

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ವಾರದ 6 ದಿನವೂ ಮೊಟ್ಟೆ ನೀಡಲಾಗುತ್ತಿದೆ. ಚಿಕ್ಕಬಳ್ಳಾಪುರ, ರಾಯಚೂರು ಮತ್ತು ಬಳ್ಳಾರಿಯಲ್ಲಿ ಹಕ್ಕಿಜ್ವರಕ್ಕೆ ಕೋಳಿಗಳು ಬಲಿಯಾದ ಬಳಿಕ ರೋಗದ ಭೀತಿ ಮಧ್ಯ ಕರ್ನಾಟಕದಲ್ಲೂ ಆವರಿಸಿದೆ.

‘ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಯಿಂದ ಹಕ್ಕಿ ಜ್ವರ ಹರಡುತ್ತದೆ’ ಎಂಬ ಭಾವನೆ ಕೆಲ ಪಾಲಕರು ಮತ್ತು ವಿದ್ಯಾರ್ಥಿಗಳಲ್ಲಿದೆ. ಈ ತಪ್ಪು ಗ್ರಹಿಕೆ ನಿವಾರಿಸಿ ಮೊಟ್ಟೆ ವಿತರಿಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಮೊಟ್ಟೆಯನ್ನು ಸರಿಯಾಗಿ ಬೇಯಿಸಿ ವಿತರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಬಿಸಿಯೂಟದ ಇತರ ಪದಾರ್ಥಗಳಿಂದ ಮೊಟ್ಟೆಯನ್ನು ದೂರ ಇಡುವಂತೆಯೂ ನಿರ್ದೇಶಿಸಲಾಗಿದೆ.

ADVERTISEMENT

‘ಮೊಟ್ಟೆ ಸೇವನೆ ಕಡ್ಡಾಯವಲ್ಲ. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡಲಾಗುತ್ತದೆ. ನಿತ್ಯ ಬೆಳಿಗ್ಗೆ ತರಗತಿ ಆರಂಭವಾದಾಗ ಅಕ್ಷರ ದಾಸೋಹ ಸಿಬ್ಬಂದಿ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸುತ್ತಾರೆ. ಮೊಟ್ಟೆ ಮತ್ತು ಬಾಳೆಹಣ್ಣು ಎಷ್ಟು ಬೇಕಾಗುತ್ತದೆ ಎಂಬ ಲೆಕ್ಕಹಾಕುತ್ತಾರೆ. ಇತ್ತೀಚಿನ ಕೆಲ ದಿನಗಳಿಂದ ಮೊಟ್ಟೆ ತಿರಸ್ಕರಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ 5ರಿಂದ ಶೇ 10ರಷ್ಟು ಏರಿಕೆ ಕಂಡಿದೆ’ ಎಂಬುದು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರ ಅಭಿಪ್ರಾಯ.

‘ಸ್ವಚ್ಛತೆಗೆ ಒತ್ತು ನೀಡುವಂತೆ ಸೂಚಿನೆ ಸಿಕ್ಕಿದೆ. ಕೈಗವಸು, ಮುಖಗವಸು ಬಳಸಲಾಗುತ್ತಿದೆ. ಬೇಯಿಸುವುದಕ್ಕೂ ಮುನ್ನ ಮೊಟ್ಟೆ ತೊಳೆಯುತ್ತೇವೆ. ಮೊಟ್ಟೆ ಮೇಲ್ಪದರ ಬಿಡಿಸಿದ ನಂತರವೂ ಕೈ ಶುಚಿಗೊಳಿಸಿಕೊಳ್ಳುತ್ತೇವೆ. ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ’ ಎಂದು ಅಕ್ಷರ ದಾಸೋಹ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಶೇ 90ರಷ್ಟು ವಿದ್ಯಾರ್ಥಿಗಳು ಮೊಟ್ಟೆ ತಿನ್ನುತ್ತಾರೆ. ಮನೆಯಲ್ಲಿ ಮೊಟ್ಟೆ ತಿನ್ನುವ ಅವಕಾಶ ಇದ್ದಾಗ ಅಥವಾ ಮೊಟ್ಟೆ ತಿಂದು ಬೇಸರವಾದಾಗ ಮಾತ್ರ ಪರ್ಯಾಯವಾಗಿ ಬಾಳೆಹಣ್ಣು ಕೇಳುತ್ತಾರೆ. ಅನಾರೋಗ್ಯಕ್ಕೆ ಒಳಗಾದಾಗಲೂ ಕೆಲ ಮಕ್ಕಳು ಮೊಟ್ಟೆ ತಿರಸ್ಕರಿಸಿದ್ದಾರೆ. ಮೊಟ್ಟೆ ತಿನ್ನುವ ಮಕ್ಕಳ ಪ್ರಮಾಣ ನಿತ್ಯ ಸರಾಸರಿ ಶೇ 5ರಿಂದ 10ರಷ್ಟು ವ್ಯತ್ಯಾಸವಾಗುತ್ತದೆ. ಕೆಲ ಹಳ್ಳಿಗಳಲ್ಲಿ ಶನಿವಾರ ಮಾತ್ರ ಮೊಟ್ಟೆ ವಿತರಿಸದಂತೆ ಗ್ರಾಮಸ್ಥರೇ ಸೂಚಿಸಿದ್ದಾರೆ. ಹಕ್ಕಿ ಜ್ವರದ ಕಾರಣಕ್ಕೆ ಮೊಟ್ಟೆ ತಿರಸ್ಕರಿಸಿರುವುದು ಗಮನಕ್ಕೆ ಬಂದಿಲ್ಲ’ ಎಂದು ಅಕ್ಷರ ದಾಸೋಹ ಅಧಿಕಾರಿ ಮಂಜುನಾಥಸ್ವಾಮಿ ತಿಳಿಸಿದರು.

ಮೊಟ್ಟೆ ಬೇಯಿಸಿ ತಿನ್ನುವುದರಿಂದ ಯಾವುದೇ ಸಮಸ್ಯೆ ಇಲ್ಲ. ಸರಿಯಾಗಿ ಬೇಯಿಸಿ ಮೊಟ್ಟೆ ನೀಡುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ
ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

ಹಾಸ್ಟೆಲ್‌ಗಳಿಗೂ ನಿರ್ದೇಶನ

ಸರ್ಕಾರಿ ಹಾಸ್ಟೆಲ್‌ ವಿದ್ಯಾರ್ಥಿಗಳಿಗೂ ಮೊಟ್ಟೆ ಮತ್ತು ಮಾಂಸವನ್ನು ನೀಡಲಾಗುತ್ತದೆ. ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಅಡುಗೆ ಸಿಬ್ಬಂದಿಗೆ ಕೆಲ ಸೂಚನೆಗಳನ್ನು ನೀಡಲಾಗಿದೆ. 70 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಸುಮಾರು 30 ನಿಮಿಷ ಮಾಂಸ ಮತ್ತು ಮೊಟ್ಟೆ ಬೇಯಿಸಿದರೆ ಸೋಂಕು ನಾಶವಾಗುತ್ತದೆ. ಈ ಮಾಂಸ ಮತ್ತು ಮೊಟ್ಟೆ ತಿನ್ನುವುದರಿಂದ ಯಾವುದೇ ತೊಂದರೆ ಇಲ್ಲ. ಕೋಳಿ ಮಾಂಸ ಮೊಟ್ಟೆ ಹಾಗೂ ಆಹಾರ ಸಾಮಗ್ರಿಯನ್ನು ಪ್ರತ್ಯೇಕವಾಗಿ ಇಡುವಂತೆಯೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಸಿಬ್ಬಂದಿಗೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.