ದಾವಣಗೆರೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೈ ಬಲಪಡಿಸಲು ಪಕ್ಷದ ಮೂರು ಜಿಲ್ಲೆಯ ವೀರಶೈವ ಲಿಂಗಾಯತ ನಾಯಕರು ಶನಿವಾರ ಆಯೋಜಿಸಿದ್ದ ಸಭೆಗೆ ಬಿ.ಎಸ್.ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಭೆಯ ಸ್ವರೂಪ ದಿಢೀರ್ ಬದಲಾಯಿತು.
ಸಮುದಾಯವನ್ನು ರಾಜಕೀಯವಾಗಿ ಸಂಘಟಿಸುವ ಉದ್ದೇಶದಿಂದ ಹಮ್ಮಿಕೊಳ್ಳುತ್ತಿರುವ ‘ವೀರಶೈವ ಲಿಂಗಾಯತ ಮಹಾಸಂಗಮ’ ಸಮಾವೇಶದ ಪೂರ್ವಭಾವಿ ಸಭೆಯಾಗಿ ಇದು ಮುಂದುವರಿಯಿತು. ರಾಜಕೀಯ ನಾಯಕರ ಬದಲಾಗಿ ಬಸವಣ್ಣ, ಶಿವ ಹಾಗೂ ಗುರು ರೇಣುಕಾಚಾರ್ಯರ ಚಿತ್ರಗಳು ವೇದಿಕೆಯ ಮೇಲಿದ್ದವು.
‘ಬಿ.ಎಸ್.ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಸಭೆ ನಡೆಸದಂತೆ ಸೂಚನೆ ನೀಡಿದ್ದು ನಿಜ. ರಾಜಕೀಯವಾಗಿ ಆಗಿರುವ ಅನ್ಯಾಯವನ್ನು ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಸಭೆ ನಡೆಸಿದ್ದೇವೆ. ಸಮುದಾಯವನ್ನು ರಾಜಕೀಯವಾಗಿ ಸಂಘಟಿಸುವ ಪ್ರಯತ್ನ ಮುಂದುವರಿಸುವಂತೆ ಮಠಾಧೀಶರು ನಿರ್ದೇಶನ ನೀಡಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆ ಪೂರ್ವಭಾವಿ ಸಭೆ ನಡೆಯಲಿದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಭೆಯಲ್ಲಿ ತಿಳಿಸಿದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಅರುಣ್‌ಕುಮಾರ್ ಪೂಜಾರ್ ಹಾಜರಿದ್ದರು.
‘ವೀರಶೈವ–ಲಿಂಗಾಯತ ಸಮುದಾಯದ ಹೆಸರಿನಲ್ಲಿ ಪಕ್ಷದ ಮುಖಂಡರು ಸಭೆ ಸಂಘಟಿಸುವ ಪ್ರಯತ್ನವನ್ನು ಕೂಡಲೇ ನಿಲ್ಲಿಸಬೇಕು. ಪಕ್ಷ ಸಂಘಟನೆಯತ್ತ ಗಮನ ಕೇಂದ್ರೀಕರಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚನೆ ನೀಡಿದ್ದಾರೆ.
‘ಇತ್ತೀಚಿನ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ನನ್ನ ಹಾಗೂ ಯಡಿಯೂರಪ್ಪ ಮೇಲಿನ ಅಭಿಮಾನದ ಕಾರಣಕ್ಕೆ ವೀರಶೈವ ಲಿಂಗಾಯತ ಸಮುದಾಯದ ಸರಣಿ ಸಭೆ ನಡೆಸಲು ಮುಂದಾಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಪಕ್ಷಕ್ಕೆ ಮುಜುಗರದ ಸನ್ನಿವೇಶ ಸೃಷ್ಟಿಯಾಗಲಿದೆ. ಇಂತಹ ಸಭೆಗಳನ್ನು ಕೂಡಲೇ ನಿಲ್ಲಿಸಿ’ ಎಂದು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.