
ಹರಿಹರ: ನಗರದ ಹೊರವಲಯದಲ್ಲಿರುವ ಕಾರ್ಗಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕಾರ್ಮಿಕರ ಹಿತಾಸಕ್ತಿಯನ್ನು ಬಲಿಕೊಟ್ಟು ಕಾನೂನು ಬಾಹಿರವಾಗಿ ಕಾರ್ಖಾನೆಯ ಮಾಲೀಕತ್ವವನ್ನು ವರ್ಗಾವಣೆ ಮಾಡುತ್ತಿರುವುದನ್ನು ಖಂಡಿಸಿ, ಫೆ. 6ರಿಂದ ಕಂಪನಿಯ ಮುಂಭಾಗ ಅನಿರ್ದಿಷ್ಟಾವಧಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಕಾರ್ಗಿಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ.ಸಂಜಯ್ ತಿಳಿಸಿದರು.
‘10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಯಲ್ಲಿ 120 ಕಾಯಂ ಹಾಗೂ 273 ಗುತ್ತಿಗೆ ಕಾರ್ಮಿಕರಿದ್ದಾರೆ. 4 ತಿಂಗಳಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಕಾಯಂ ನೌಕರರಿಗೆ ಬಲವಂತವಾಗಿ ವಿ.ಎಸ್.ಎಸ್. (ಸ್ವಇಚ್ಛೆಯಿಂದ ಹೊರನಡೆಯುವ ಯೋಜನೆ) ನೀಡುವ ಮೂಲಕ 60ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ಹೊರದಬ್ಬಲಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಕಾರ್ಮಿಕ ಇಲಾಖೆಯಲ್ಲಿ ಕೈಗಾರಿಕಾ ವಿವಾದಗಳು ಬಾಕಿ ಇರುವಾಗಲೇ, ಕಂಪನಿಯ ಆಡಳಿತ ಮಂಡಳಿಯು ಗುಜರಾತ್ ಮೂಲದ 'ವೃದ್ಧಿ ಸಿದ್ಧಿ' ಎಂಬ ಕಂಪನಿಗೆ ಕಾರ್ಖಾನೆಯನ್ನು ಮಾರಾಟ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದೆ. ಈ ಮಾರಾಟ ಪ್ರಕ್ರಿಯೆಯಲ್ಲಿ ಕಾರ್ಮಿಕರ ಸೇವಾ ಭದ್ರತೆಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಕಂಪನಿಯ ಉನ್ನತ ಅಧಿಕಾರಿಗಳು ಹೊರ ರಾಜ್ಯದವರಾಗಿದ್ದು, ಸ್ಥಳೀಯ ಕಾರ್ಮಿಕರ ನೋವಿಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.
ಕಾರ್ಖಾನೆ ಮಾರಾಟ ಪ್ರಕ್ರಿಯೆಯಲ್ಲಿ ಸ್ಥಳೀಯ ಕಾರ್ಮಿಕರನ್ನು ಕೈಬಿಟ್ಟು ಹೊರರಾಜ್ಯದವರನ್ನು ನೇಮಿಸಿಕೊಳ್ಳುವ ಬಗ್ಗೆ ಸಂಶಯವಿದೆ. ವಿವಾದಗಳು ಇತ್ಯರ್ಥವಾಗುವವರೆಗೂ ಕಾರ್ಖಾನೆ ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಮುಷ್ಕರ ಆರಂಭಿಸಲಾಗುತ್ತಿದೆ. ಎಲ್ಲಾ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಭರವಸೆಯನ್ನು ಲಿಖಿತವಾಗಿ ನೀಡಬೇಕು. ಬಲವಂತದ ವಿ.ಎಸ್.ಎಸ್ ನೀತಿಯನ್ನು ಕೈಬಿಟ್ಟು, ನ್ಯಾಯಯುತ ವೇತನ ಹಾಗೂ ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಯೂನಿಯನ್‌ನ ಗೌರವಾಧ್ಯಕ್ಷ ಮಂಜುನಾಥ್ ಕೈದಾಳೆ, ಪ್ರಧಾನ ಕಾರ್ಯದರ್ಶಿ ಮೋಹನ್, ಕಾರ್ಮಿಕರಾದ ಬಸವರಾಜ ಕೆ.ಜಿ., ಅರುಣ್ ಮಾಕನೂರ್, ಬಸವರಾಜ್ ಬಿ.ಎಚ್., ಉದಯ್ ಕುಮಾರ್, ಪ್ರವೀಣ್ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.