ADVERTISEMENT

ದಾವಣಗೆರೆ: ಸುರಕ್ಷತಾ ಕಿಟ್‌ ಸಕಾಲಕ್ಕೆ ಒದಗಿಸುವ ಸವಾಲು

ಜಿಲ್ಲಾ ಫಾರ್ಮಸಿ ಅಧಿಕಾರಿ ಡಾ. ಶಿವಾನಂದ ದಳವಾಯಿ

ಬಾಲಕೃಷ್ಣ ಪಿ.ಎಚ್‌
Published 3 ಜುಲೈ 2020, 5:39 IST
Last Updated 3 ಜುಲೈ 2020, 5:39 IST
ಶಿವಾನಂದ ದಳವಾಯಿ
ಶಿವಾನಂದ ದಳವಾಯಿ   

ದಾವಣಗೆರೆ: ‘ಲಾಕ್‌ಡೌನ್‌ ಆದ ಆರಂಭದಲ್ಲಿ ಸಂಚಾರ ಸಮಸ್ಯೆ ಉಂಟಾಗಿತ್ತು. ಆಗ ಪಿಪಿಇ ಕಿಟ್‌, ವಿಟಿಎಂ ಕಿಟ್ಸ್‌ (ಪ್ರಯೋಗಾಲಯದ ಸಿಬ್ಬಂದಿಗೆ), ಗ್ಲೌಸ್‌ಗಳು ಬೆಂಗಳೂರಿನಿಂದ ಬರುವುದೂ ತಡವಾಗುತ್ತಿತ್ತು. ಅವೆಲ್ಲವನ್ನು ನಿರ್ವಹಿಸಿಕೊಂಡು ಒಮ್ಮೆಯೂ ಕಿಟ್‌ ಕೊರತೆಯಾಗದಂತೆ ನೋಡಿಕೊಂಡಿರುವುದೇ ದೊಡ್ಡ ಸಾಹಸ’.

ಕಿಟ್‌ ಒಗಿಸುವ ಜವಾಬ್ದಾರಿಯನ್ನು ಹೊತ್ತಿರುವ ವಾರಿಯರ್‌ ಜಿಲ್ಲಾ ಫಾರ್ಮಸಿ ಅಧಿಕಾರಿ ಡಾ. ಶಿವಾನಂದ ದಳವಾಯಿ ಅವರ ಮಾತಿದು.

‘ಫೀವರ್‌ ಕ್ಲಿನಿಕ್‌, ಚೆಕ್‌ಪೋಸ್ಟ್‌, ಕಂಟೈನ್‌ಮೆಂಟ್‌ ವಲಯ, ಬಫರ್‌ ಝೋನ್ ಹೀಗೆ ಎಲ್ಲ ಕಡೆ ಕೊರೊನಾ ವಿರುದ್ಧ ಕೆಲಸ ಮಾಡುವವರಿಗೆ ಸಕಾಲದಲ್ಲಿ ಕಿಟ್‌ ಒದಗಿಸಲೇಬೇಕು. ಕಿಟ್‌ ಇಲ್ಲದೆ ಕರ್ತವ್ಯ ನಿರ್ವಹಣೆ ಸಾಧ್ಯವಿಲ್ಲ. ಡಿಎಚ್‌ಒ ಅನುಮತಿ ಮತ್ತು ಮಾರ್ಗದರ್ಶನದಲ್ಲಿ ಇವೆಲ್ಲವನ್ನು ನಿರ್ವಹಿಸಿದೆ’ ಎಂದು ಸಂತೋಷಪಟ್ಟರು.

ADVERTISEMENT

ಒಂದು ಬಾರಿ ಸುರಕ್ಷಾ ಸಾಮಗ್ರಿಗಳನ್ನು ಹೊತ್ತ ಲಾರಿ ರಾತ್ರಿ 10.30ಕ್ಕೆ ಬಂದಿತ್ತು. ಅವೆಲ್ಲದರ ಗುಣಮಟ್ಟ ಮತ್ತು ಪ್ರಮಾಣ ಸರಿ ಇದೆಯೇ ಎಂದು ಪರಿಶೀಲಿಸಿ ದಾಸ್ತಾನು ಮಾಡುವ ಹೊತ್ತಿಗೆ 11.45 ದಾಟಿತ್ತು ಎಂದು ವಿವರಿಸಿದರು.

‘ಕೋವಿಡ್ ಆಸ್ಪತ್ರೆಯ ವೈದ್ಯರು, ಆರೋಗ್ಯ ಸಿಬ್ಬಂದಿ, ಕಂಟೈನ್‌ಮೆಂಟ್‌ ವಲಯ ಸೇರಿ ವಿವಿಧೆಡೆ ಕೆಲಸ ಮಾಡುವ ಪೊಲೀಸರು, ಇನ್ಸಿಡೆಂಟ್‌ ಕಮಾಂಡರ್‌ಗಳು, ಅಧಿಕಾರಿಗಳು, ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಸೇರಿ ಒಟ್ಟು 32 ಇಲಾಖೆಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಔಷಧ ಉಗ್ರಾಣದಿಂದ ಎನ್‌–95 ಮಾಸ್ಕ್‌, ಸ್ಯಾನಿಟೈಸರ್‌ ಸಹಿತ ಕಿಟ್‌ಗಳನ್ನು ನೀಡಬೇಕು. ಇದಲ್ಲದೆ ಲಾಡ್ಜ್‌, ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ ಆಗಿರುವವರಿಗೂ ಮಾಸ್ಕ್, ಸ್ಯಾನಿಟೈಸರ್‌ ಒದಗಿಸಬೇಕಿತ್ತು. ಡಾ. ನಟರಾಜ್‌ ಕರೆ ಮಾಡಿದಾಗ ಅವರಿಗೆಲ್ಲ ಸರಬರಾಜು ಮಾಡಿದ್ದೇವೆ. ಒಬ್ಬ ವಾರಿಯರ್‌ಗೆ ಒಂದು ಎನ್‌–95 ಮಾಸ್ಕ್‌ ನೀಡಿದರೆ ಅದರನ್ನು ಗರಿಷ್ಠ ಮೂರು ದಿನ ಬಳಸಬಹುದು. 100 ಎಂಎಲ್‌ನ ಸ್ಯಾನಿಟೈಸರ್‌ ಒಂದು ವಾರ ಬಳಸಬೇಕು. ಯಾವುದೂ ಕೊರತೆಯಾಗದಂತೆ ಜಿಲ್ಲಾಧಿಕಾರಿ ಎನ್‌ಡಿಆರ್‌ಎಫ್‌ನಿಂದ ಅನುದಾನ ಒದಗಿಸಿದ್ದರು’ ಎಂದು ಮಾಹಿತಿ ನೀಡಿದರು.

‘ಬಾಷಾನಾಗರ, ಜಾಲಿನಗರ, ಇಮಾಮ್‌ ನಗರದಲ್ಲಿ ಕೊರೊನಾ ಹೆಚ್ಚಾದಾಗ ಆರ್‌ಸಿಎಚ್‌ ಅಧಿಕಾರಿ ಡಾ. ಮೀನಾಕ್ಷಿ ಅವರು ಕಂಟೈನ್‌ಮೆಂಟ್‌ ವಲಯಕ್ಕೇ ಹೋಗಿ ಕಾರ್ಯನಿರ್ವಹಿಸುತ್ತಿದ್ದರು. ಯಾರಿಗೆ ಏನು ಬೇಕು ಎಂದು ನೋಡಿ ಅಲ್ಲಿಂದಲೇ ಕರೆ ಮಾಡಿ ಕಳುಹಿಸಲು ಸೂಚಿಸುತ್ತಿದ್ದರು. ನಾನು ಇಲ್ಲವೇ ಸಿಬ್ಬಂದಿ ಅಲ್ಲಿಗೆ ಹೋಗಿ ಕಿಟ್‌ಗಳನ್ನು ನೀಡಿ ಬರುತ್ತಿದ್ದೇವೆ’ ಎಂದು ನೆನಪಿಸಿಕೊಂಡರು.

‘ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್‌ ಅವರು ಶಾಂತ, ಸೌಮ್ಯ ಸ್ವಭಾವದವರು. ಅವರಿಗೆ ನಗುಮುಖದಿಂದಲೇ ಎಲ್ಲರಿಂದ ಹೇಗೆ ಕೆಲಸ ತೆಗೆದುಕೊಳ್ಳುವುದು ಎಂಬುದು ಗೊತ್ತು. ಅವರೂ ಮಾರ್ಗದರ್ಶನ ಮಾಡಿದರು. ನಮ್ಮ ಸಿಬ್ಬಂದಿ ಎನ್‌.ಕೆ. ಪ್ರಭುದೇವ, ಸುಜಾತಾ, ವೀಣಾ, ಚಂದ್ರಕಾಂತ ಎಂದೂ ಬೇಸರಿಸದೆ ಕೆಲಸ ಮಾಡುತ್ತಿದ್ದಾರೆ. ಡಿ. ಗ್ರೂಪ್‌ ನೌಕರ ಕುಮಾರನಾಯ್ಕ ನನ್ನ ಜತೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಅಪ್ಪ ಎಂದು ಓಡಿ ಬರುವ ಮಗ’

‘ಮನೆಯಲ್ಲಿ ಪತ್ನಿ, ಮಗಳು, ಮಗ ಪೂರ್ಣ ಸಹಕಾರ ನೀಡಿದ್ದಾರೆ. ಸುಮಾರು 3 ತಿಂಗಳು ಬೆಳಿಗ್ಗೆ ಎದ್ದು ಹೊರಟರೆ ರಾತ್ರಿಯೇ ಮನೆಗೆ ತಲುಪೋದು. ಆಗ ಅಪ್ಪಾ ಎಂದು ತಬ್ಬಿಕೊಳ್ಳಲು ಮಗ ಓಡಿ ಬರುತ್ತಿದ್ದ. ಅವನನ್ನು ಗದರಿಸಿ ದೂರ ಇರಿಸುತ್ತಿದ್ದೆ’ ಎಂದು ವೈಯಕ್ತಿಕ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.