ಚನ್ನಗಿರಿ: ಪಟ್ಟಣದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ– 13 ಹಾದು ಹೋಗಿದ್ದು, ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವುದನ್ನು ಮನಗಂಡು ಪಟ್ಟಣದ ಹೊರಗೆ ಹೆದ್ದಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಆದರೆ, ಆರಂಭಗೊಂಡು 2 ವರ್ಷಗಳಾದರೂ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ.
ಶಿವಮೊಗ್ಗ– ಚಿತ್ರದುರ್ಗ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ– 13ರಲ್ಲಿ ಈಗಾಗಲೇ ರಸ್ತೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಮಾತ್ರ ನಿಧಾನಗತಿಯಲ್ಲಿ ಸಾಗಿದೆ. ಪಟ್ಟಣದ ಹೊರ ವಲಯದ ಹರಿದ್ರಾವತಿ ಹಳ್ಳದ ಮೇಲ್ಸೇತುವೆ ಹಾಗೂ ಭದ್ರಾವತಿ ರಸ್ತೆಯಲ್ಲಿನ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಲೇ ಇದ್ದರೂ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ.
ಕಳೆದ ಸಾಲಿನ ಸೆಪ್ಟಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭ ‘ಒಂದೂವರೆ ತಿಂಗಳೊಳಗೆ ಮೇಲ್ಸೇತುವೆ ಹಾಗೂ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು’ ಎಂದು ಭರವಸೆ ನೀಡಿದ್ದರು. ಆದರೆ, ಅವರು ನೀಡಿದ ಭರವಸೆ ಇನ್ನು ಭರವಸೆಯಾಗಿಯೇ ಉಳಿದಿದೆ. 2025ರ ಮಾರ್ಚ್ ತಿಂಗಳು ಆರಂಭಗೊಂಡರೂ ಇನ್ನು ಕಾಮಗಾರಿ ಮುಕ್ತಾಯವಾಗಿಲ್ಲ.
ಹರಿದ್ರಾವತಿ ಹಳ್ಳಕ್ಕೆ ಅಡ್ಡವಾಗಿ ನಿರ್ಮಿಸುತ್ತಿರುವ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ವೇಗವನ್ನು ನೋಡಿದರೆ ಮುಕ್ತಾಯಗೊಳ್ಳಲು ಇನ್ನೂ ಮೂರು ತಿಂಗಳು ಬೇಕು. ಹಾಗಾಗಿ, ಪಟ್ಟಣದ ಪರಿಮಿತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆಯನ್ನು ಜನರು ಸಹಿಸಿಕೊಳ್ಳಬೇಕಾಗಿದೆ. ಇನ್ನು ಭದ್ರಾವತಿ ರಸ್ತೆಯಲ್ಲಿ ಫ್ಲೈ ಓವರ್ ಕಾಮಗಾರಿ ಕೂಡಾ ನಿರ್ಮಾಣದ ಹಂತದಲ್ಲಿದೆ. ಆದಷ್ಟು ಶೀಘ್ರ ಬೈಪಾಸ್ ಹೆದ್ದಾರಿಯಲ್ಲಿನ ಮೇಲ್ಸೇತುವೆಗಳ ಕಾಮಗಾರಿ ಮುಕ್ತಾಯಗೊಳಿಸಿ ಪಟ್ಟಣದ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎನ್ನುತ್ತಾರೆ ಪಟ್ಟಣದ ನಿವಾಸಿ ಬಿ. ನಾಗರಾಜ್.
ಮೂರು ತಿಂಗಳಲ್ಲಿ ಎರಡೂ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಸಾಲಿನಲ್ಲಿ ಡಿಸೆಂಬರ್‌ವರೆಗೂ ಮಳೆ ಬಂದಿದ್ದರಿಂದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುವಂತಾಯಿತು ಎಂದು ಶಿವಮೊಗ್ಗ ಹೆದ್ದಾರಿ ಪ್ರಾಧಿಕಾರದ ವ್ಯವಸ್ಥಾಪಕ ಕೆ. ನಟರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.