ಚನ್ನಗಿರಿ: ಪಟ್ಟಣದ ಕೆರೆ ಏರಿಯ ಪಕ್ಕದಲ್ಲಿರುವ ಕ್ವಾಲಿಟಿ ಬೇಕರಿ ಹತ್ತಿರ (ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಹೆದ್ದಾರಿಯಲ್ಲಿ) ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ತಾತ್ಕಾಲಿಕ ನಿಲ್ದಾಣವನ್ನು ಪೊಲೀಸ್ ಇಲಾಖೆ ಸೋಮವಾರ ವ್ಯವಸ್ಥೆ ಮಾಡಿದೆ.
ಪಟ್ಟಣದಲ್ಲಿ ಪುರಸಭೆಯಿಂದ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣವಿದ್ದು, ಈ ಬಸ್ ನಿಲ್ದಾಣದಲ್ಲಿ ಶಿವಮೊಗ್ಗ ಹಾಗೂ ಚಿತ್ರದುರ್ಗ ಕಡೆಗಳಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಮಾತ್ರ ನಿಲುಗಡೆ ಮಾಡಲು ಖಾಸಗಿ ಬಸ್‌ನವರು ಅವಕಾಶ ನೀಡಿದ್ದರಿಂದ ಆ ಕಡೆಗೆ ಹೋಗುವ ಬಸ್‌ಗಳು ರಾಷ್ಟ್ರೀಯ ಹೆದ್ದಾರಿಯ 13ರ ಬದಿಯಲ್ಲಿಯೇ ನಿಲುಗಡೆ ಮಾಡಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿದ್ದರು. ಪ್ರಯಾಣಿಕರು ಹೆದ್ದಾರಿ ಬದಿಯಲ್ಲಿ ಜೀವ ಭಯದಿಂದ ನಿಂತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪಟ್ಟಣದಲ್ಲಿ ಪುರಸಭೆಯಿಂದ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿಯವರು ತಮ್ಮ ಬಸ್‌ಗಳನ್ನು ನಿಲುಗಡೆ ಮಾಡಲು ಪುರಸಭೆಗೆ ಪ್ರತಿದಿನ ಒಂದು ಬಸ್‌ಗೆ ₹ 20 ಶುಲ್ಕವನ್ನು ಪಾವತಿಸುತ್ತಿದ್ದು, ಈ ಕಾರಣದಿಂದಾಗಿ ಶಿವಮೊಗ್ಗ ಹಾಗೂ ಚಿತ್ರದುರ್ಗ ಕಡೆಗಳಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗೆ ಅವರ ವಿರೋಧ ಇದೆ. ಹಾಗಾಗಿ ಖಾಸಗಿ ಬಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಚಾಲಕರು, ನಿರ್ವಾಹಕರ ಮಧ್ಯೆ ಜಗಳವಾಗುತ್ತಿತ್ತು. ಇದರಿಂದ ಎಲ್ಲೆಂದರಲ್ಲಿ ಬಸ್ ನಿಲ್ಲಿಸುವುದರಿಂದ ಪ್ರಯಾಣಿಕರಿಗೂ ತೊಂದರೆಯಾಗುತ್ತಿತ್ತು.
‘ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಡಿವೈಎಸ್‌ಪಿ ಸ್ಯಾಮ್ ವರ್ಗೀಸ್ ಅವರ ಮಾರ್ಗದರ್ಶನದಲ್ಲಿ ತಾತ್ಕಾಲಿಕ ಬಸ್ ನಿಲುಗಡೆ ವ್ಯವಸ್ಥೆ ಮಾಡಿದ್ದು, ಇಲ್ಲಿ ಯಾವುದೇ ಖಾಸಗಿ ವಾಹನಗಳ ನಿಲುಗಡೆಯನ್ನು ನಿಷೇಧಿಸಿದ್ದು, ಖಾಸಗಿ ವಾಹನ ನಿಲುಗಡೆ ಮಾಡಿದರೆ ದಂಡ ವಿಧಿಸಲಾಗುವುದು’ ಎಂದು ಪಿಐ ಕೆ.ಎನ್. ರವೀಶ್ ತಿಳಿಸಿದರು.
‘ಈಗ ಪೊಲೀಸ್ ಇಲಾಖೆ ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಮಾಡಿರುವುದು ಶ್ಲಾಘನೀಯವಾಗಿದೆ. ಹಾಗೆಯೇ ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಶಾಶ್ವತವಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಮಾಡಲು ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಿದರೆ ಎಲ್ಲ ಪ್ರಯಾಣಿಕರು ಅನುಕೂಲವಾಗುತ್ತದೆ’ ಎಂದು ಶಿವಮೊಗ್ಗದ ಪ್ರಯಾಣಿಕರಾದ ಶ್ವೇತಾ, ರಾಜೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.