ADVERTISEMENT

ಹರಿಹರದಲ್ಲಿ ವಾಲ್ಮೀಕಿ ಜಾತ್ರೆ: ನಟ ಸುದೀಪ್‌ ಗೈರು, ಅಭಿಮಾನಿಗಳ ಆಕ್ರೋಶ

ಮೂವರು ಪೊಲೀಸರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 4:34 IST
Last Updated 10 ಫೆಬ್ರುವರಿ 2023, 4:34 IST
ದಾವಣಗೆರೆ ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಬಾರದೇ ಇದ್ದಿದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳಿಂದ ಉಂಟಾದ ನೂಕುನೂಗ್ಗಲನ್ನು ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಬಾರದೇ ಇದ್ದಿದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳಿಂದ ಉಂಟಾದ ನೂಕುನೂಗ್ಗಲನ್ನು ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ಹರಿಹರ (ದಾವಣಗೆರೆ ಜಿಲ್ಲೆ): ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ಅಂಗವಾಗಿ ಗುರುವಾರ ಸಂಜೆ ನಡೆದ ಸಮಾರಂಭಕ್ಕೆ ನಟ ಕಿಚ್ಚ ಸುದೀಪ್‌ ಗೈರಾಗಿದ್ದರಿಂದ ಬೇಸರಗೊಂಡ ಅಭಿಮಾನಿಗಳು ವೇದಿಕೆ ಮುಂಭಾಗದ ಕುರ್ಚಿಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಬಳಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ನೆಲಕ್ಕುರುಳಿಸಿದ ಅಭಿಮಾನಿಗಳನ್ನು ನಿಯಂತ್ರಿಸಲು ಮುಂದಾದ ಪೊಲೀಸರ ಪೈಕಿ ಮೂವರು ಗಾಯಗೊಂಡರು.

ಕಾರ್ಯಕ್ರಮಕ್ಕೆ ಸುದೀಪ್‌ ಅವರನ್ನು ಆಹ್ವಾನಿಸಿದ್ದರಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಮಹರ್ಷಿ ವಾಲ್ಮೀಕಿ ಪೀಠದ ಸಭಾಂಗಣದೆದುರು ನೆರೆದಿದ್ದರು. ಬೆಳಿಗ್ಗೆ ಮತ್ತು ಮಧ್ಯಾಹ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲೂ ಅಭಿಮಾನಿಗಳು ಸುದೀಪ್‌ ಪರ ಜೈಕಾರ ಕೂಗಿ ಕೇಕೆ ಹಾಕಿದ್ದರು. ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಆಗಾಗ ಎಚ್ಚರಿಕೆ ನೀಡಿ ಅಭಿಮಾನಿಗಳನ್ನು ಸುಮ್ಮನಾಗಿಸುತ್ತಿದ್ದರು.

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಷಣ ಪೂರ್ಣಗೊಳಿಸಿ ತೆರಳಿದ ನಂತರವೂ ಸುದೀಪ್‌ ಬಾರದ್ದರಿಂದ ತಾಳ್ಮೆ ಕಳೆದುಕೊಂಡ ಅಭಿಮಾನಿಗಳು ಬ್ಯಾರಿಕೇಡ್‌ಗಳು ನೆಲಕ್ಕುರುಳಿಸಿ ವೇದಿಕೆಯತ್ತ ನುಗ್ಗತೊಡಗಿದರು. ಪ್ಲಾಸ್ಟಿಕ್‌ ಕುರ್ಚಿಗಳನ್ನು ಪುಡಿ
ಗಟ್ಟಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಬ್ಯಾರಿಕೇಡ್‌ಗಳನ್ನು ಎಸೆದಿದ್ದರಿಂದ ಗಾಯಗೊಂಡ ಮೂವರು ಪೊಲೀಸರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬೆಂಗಳೂರಿನಲ್ಲಿ ಆಯೋಜಿಸಿರುವ ಏರ್‌ಶೋ ಕಾರಣ ಹೆಲಿಕಾಪ್ಟರ್‌ ಹಾರಾಟಕ್ಕೆ ಅವಕಾಶ ದೊರೆಯದೇ ಸುದೀಪ್‌ ಜಾತ್ರಾ ಸಮಾರಂಭಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಆಯೋಜಕರು ಘೋಷಿಸಿದ್ದರಿಂದ ಅಭಿಮಾನಿಗಳು ನಿರಾಸೆಯಿಂದ ವಾಪಸ್ಸಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.