ADVERTISEMENT

ದಾವಣಗೆರೆ: ಹೆಚ್ಚುತ್ತಿದೆ ‘ಹಸಿರ ಹೊದಿಕೆ’

ಅರಣ್ಯ ಇಲಾಖೆ, ಸಂಘ–ಸಂಸ್ಥೆಗಳ ಕಾಳಜಿ.. ಜಾಗೃತಿ ಕಾರ್ಯಕ್ರಮದ ಫಲ...

ಚಂದ್ರಶೇಖರ ಆರ್‌.
Published 12 ಏಪ್ರಿಲ್ 2025, 7:15 IST
Last Updated 12 ಏಪ್ರಿಲ್ 2025, 7:15 IST
ದಾವಣಗೆರೆಯ ಉಪ ಅರಣ್ಯ ಸಂರಕ್ಷಾಧಿಕಾರಿ ಕಚೇರಿ ಆವರಣದ ಸಸ್ಯಕ್ಷೇತ್ರದಲ್ಲಿ ವಿವಿಧ ತಳಿಗಳ ಸಸಿಗಳನ್ನು ಪೋಷಿಸುತ್ತಿರುವ ಸಿಬ್ಬಂದಿ 
ದಾವಣಗೆರೆಯ ಉಪ ಅರಣ್ಯ ಸಂರಕ್ಷಾಧಿಕಾರಿ ಕಚೇರಿ ಆವರಣದ ಸಸ್ಯಕ್ಷೇತ್ರದಲ್ಲಿ ವಿವಿಧ ತಳಿಗಳ ಸಸಿಗಳನ್ನು ಪೋಷಿಸುತ್ತಿರುವ ಸಿಬ್ಬಂದಿ    

ದಾವಣಗೆರೆ: ಪರಿಸರ ಸಂರಕ್ಷಣೆಯ ಬಗ್ಗೆ ಅರಣ್ಯ ಇಲಾಖೆ, ಸಂಘ–ಸಂಸ್ಥೆಗಳು ಪ್ರಜ್ಞೆ ಮೂಡಿಸುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಭಾರತೀಯ ಅರಣ್ಯ ಸಮೀಕ್ಷಾ ವರದಿ (ಫಾರೆಸ್ಟ್‌ ಸರ್ವೆ ಆಫ್‌ ಇಂಡಿಯಾ) ಪ್ರಕಾರ 2023ರ ಅಂತ್ಯಕ್ಕೆ ಜಿಲ್ಲೆಯಲ್ಲಿ 3.42 ಚದರ ಕಿಲೊ ಮೀಟರ್‌ನಷ್ಟು ‘ಹಸಿರ ಹೊದಿಕೆ’ ಹೆಚ್ಚಿದೆ. ಇದು ಆಶಾದಾಯಕ ಬೆಳವಣಿಗೆ.

ರಾಷ್ಟ್ರೀಯ ಅರಣ್ಯ ನೀತಿಯ ಮಾರ್ಗಸೂಚಿ ಪ್ರಕಾರ ಒಟ್ಟು ಭೌಗೋಳಿಕ ಪ್ರದೇಶದ ಶೇ 33ರಷ್ಟು ಅರಣ್ಯ ಇರಬೇಕು. 2023ರ ಭಾರತೀಯ ಅರಣ್ಯ ಸಮೀಕ್ಷಾ ವರದಿಯಂತೆ ಜಿಲ್ಲೆಯಲ್ಲಿ ಶೇ 11.95ರಷ್ಟು ಅರಣ್ಯ ಪ್ರದೇಶವಿದೆ. ಒಟ್ಟು ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗದಷ್ಟು ಅರಣ್ಯ ಪ್ರದೇಶ ಹೊಂದುವ ಗುರಿ ಸಾಧಿಸಲು ‘ಹಸಿರ ದಾರಿ’ಯಲ್ಲಿ ಸಾಗಬೇಕಾದ ದೂರ ಇನ್ನೂ ಇದೆ. ಆದರೂ ಅಲ್ಲ ಪ್ರಮಾಣದ ಜಾಗೃತಿ ಮೂಡಿರುವುದು ಸಮಾಧಾನದ ಸಂಗತಿ.

ADVERTISEMENT

ಅರಣ್ಯ ಇಲಾಖೆಯ ಪರಿಶ್ರಮ, ನಾಗರಿಕರ, ಸಂಘ–ಸಂಸ್ಥೆಗಳ ಕಾಳಜಿಯಿಂದಾಗಿ ಕ್ರಮೇಣ ಅರಣ್ಯದ ಪ್ರಮಾಣ ಹೆಚ್ಚುತ್ತಿದೆ. 2021ರ ಭಾರತೀಯ ಅರಣ್ಯ ಸಮೀಕ್ಷಾ ವರದಿಗೆ ಹೋಲಿಸಿದರೆ 2023ರ ವೇಳೆಗೆ ಜಿಲ್ಲೆಯಲ್ಲಿ 3.42 ಚದರ ಕಿ.ಮೀ.ನಷ್ಟು ‘ಹಸಿರ ಹೊದಿಕೆ’ ಪ್ರಮಾಣ ಹೆಚ್ಚಾಗಿದೆ.

2023ರ ವರದಿ ಪ್ರಕಾರ ಒಟ್ಟು 5,924 ಚದರ ಕಿಲೊಮೀಟರ್‌ ಭೌಗೋಳಿಕ ಪ್ರದೇಶವಿದ್ದು, ಒಟ್ಟು 708.04 ಚದರ ಕಿ.ಮೀ. ಅರಣ್ಯ ‘ಹಸಿರ ಹೊದಿಕೆ’ ಇದೆ.

ದಾವಣಗೆರೆ ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ 57,129 ಹೆಕ್ಟೇರ್‌ ಅರಣ್ಯಭೂಮಿ ಇದೆ. ಇದರಲ್ಲಿ ಜಗಳೂರು ತಾಲ್ಲೂಕಿನಲ್ಲಿರುವ ಕೊಂಡುಕುರಿ ವನ್ಯಧಾಮದ 7,723 ಹೆಕ್ಟೇರ್‌ ಅರಣ್ಯ ಪ್ರದೇಶವೂ ಒಳಗೊಂಡಿದೆ. ಚನ್ನಗಿರಿ ವಲಯ ವ್ಯಾಪ್ತಿಯಲ್ಲಿ 25,217 ಹೆಕ್ಟೇರ್ ಹಾಗೂ ಸೂಳೆಕೆರೆ ವಲಯದಲ್ಲಿ 10,800 ಹೆಕ್ಟೇರ್ ಅರಣ್ಯ ಪ್ರದೇಶವಿದೆ.

ಸಂಘ–ಸಂಸ್ಥೆಗಳ ಒಲವು:

ಪರಿಸರ ವೇದಿಕೆ, ಸಂಘ–ಸಂಸ್ಥೆಗಳಿಂದ ಪರಿಸರ ಸಂರಕ್ಷಣೆಯ ಭಾಗವಾಗಿ ಜಿಲ್ಲೆಯಲ್ಲಿ ಸಸಿಗಳಿಗೆ ಬೇಡಿಕೆ ಇದೆ.  ಶ್ರೀಗಂಧ, ಹೆಬ್ಬೇವು, ಹಲಸು, ಬೇವು, ನೇರಳೆ, ನೆಲ್ಲಿ, ಮಹಾಘನಿ ಇನ್ನಿತರ ಪ್ರಬೇಧದ ಗಿಡಗಳನ್ನು ಇಲಾಖೆಯಿಂದ ಪಡೆದು ಬೆಳೆಸುವತ್ತ ರೈತರು ಚಿತ್ತ ಹರಿಸಿದ್ದಾರೆ. ಸಂಘ–ಸಂಸ್ಥೆಗಳು, ಇಲಾಖೆಯಿಂದ ಜೀಜದುಂಡೆ, ಶಾಲಾ–ಕಾಲೇಜುಗಳಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದೆ.

ಅರಣ್ಯ ಇಲಾಖೆಯಿಂದ ಈ ವರ್ಷವೂ ಎಲ್ಲ ಬಗೆಯ ಕಾಡು ಜಾತಿಯ ಗಿಡಗಳನ್ನು ನೆಡುವ ಯೋಜನೆ ಹೊಂದಲಾಗಿದೆ. ಕಾಡು ಮಾವು, ನೇರಳೆ, ಅರಳಿ, ಹತ್ತಿ, ಬಸರಿ, ಹೊಂಗೆ ಸೇರಿದಂತೆ ವಿವಿಧ ಗಿಡಗಳನ್ನು ನೆಡಲಾಗುತ್ತದೆ.

‘ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯ ವಿಭಾಗದಿಂದ ನರೇಗಾ, ಸಾಮಾಜಿಕ ಅರಣ್ಯ ಯೋಜನೆ, ಕೃಷಿ ವಿಕಾಸ್‌, ಹಸಿರು ಕರ್ನಾಟಕ, ಬೀಜದುಂಡೆ ಯೋಜನೆ (ಆರ್‌ಎಸ್‌ಬಿಡಿ) ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯ ವಲಯ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇವು ಅರಣ್ಯ ಪ್ರದೇಶ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿವೆ’ ಎಂದು ದಾವಣಗೆರೆ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಗೋಪ್ಯನಾಯ್ಕ ಮಾಹಿತಿ ನೀಡಿ‌ದರು.

‘ದೂಳು ಮುಕ್ತ ನಗರ ಯೋಜನೆಯಡಿ ಜಿಲ್ಲೆಯಲ್ಲಿ 2025–26ನೇ ಸಾಲಿನಲ್ಲಿ ₹ 20 ಲಕ್ಷ ಅನುದಾನ ಬಂದಿದ್ದು, 20,000 ಸಸಿಗಳನ್ನು ನೆಡಲು ತಯಾರಿ ಮಾಡಿಕೊಂಡಿದ್ದೇವೆ. ಸಾಮಾಜಿಕ ಅರಣ್ಯೀಕರಣ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಅನುಷ್ಠಾನ ಮಾಡುವ ಕುರಿತು ಜಿಲ್ಲಾಧಿಕಾರಿ, ಸಂಘ–ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಾಗಿದೆ’ ಎಂದು ವಿವರಿಸಿದರು.

‘ರೈತರಿಗೆ ನರೇಗಾ ಯೋಜನೆಯಡಿ ಸಸಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಮಳೆಗಾಲದಲ್ಲಿ 1,55,996 ಸಸಿ ನೆಡುವ ಗುರಿ ಹೊಂದಲಾಗಿದೆ’ ಎಂದರು.

‘ಗಿಡಗಳ ಪೋಷಣೆ, ನಿರ್ವಹಣೆಯೇ ದೊಡ್ಡ ಸವಾಲು. ಜಾನುವಾರು ಮೇಯಿಸುವವರು ರಸ್ತೆ ಬದಿಯ ಗಿಡಗಳ ಕಾಳಜಿ ವಹಿಸಬೇಕು. ಪೈಪ್‌ಲೈನ್‌, ಕೇಬಲ್‌ ಹಾಕಿಸುವ ವೇಳೆ ಗಿಡಗಳ ಬೇರಿಗೆ ಹಾನಿಯಾಗುತ್ತದೆ. ಗಿಡಗಳ ನಿರ್ವಹಣೆಗೆ ಜನರೂ ಕಾಳಜಿ ಮಾಡಬೇಕು’ ಎಂದು ಅವರು ಮನವಿ ಮಾಡಿದರು.

ದಾವಣಗೆರೆಯ ಬಾತಿ ಕೆರೆಯ ಬಳಿ ರಸ್ತೆಯ ಬದಿಯಲ್ಲಿ ಕಳೆದ ವರ್ಷದ ಮಳೆಗಾಲದ ಆರಂಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಿಡಗಳನ್ನು ನೆಡುತ್ತಿರುವುದು (ಸಂಗ್ರಹ ಚಿತ್ರ)
ಕುರುಚಲು ಕಾಡಿನಿಂದ ಆವೃತವಾದ ಮಲೇಬೆನ್ನೂರಿನ ಮನ್ನಾ ಜಂಗಲ್‌ ಪ್ರದೇಶ
ಅಂಕಿ–ಅಂಶ 5,924 ಚ.ಕಿ.ಮೀ. ಒಟ್ಟು ಭೌಗೋಳಿಕ ಪ್ರದೇಶ 10.63 ಚ.ಕಿ.ಮೀ. ದಟ್ಟ ಅರಣ್ಯ ಪ್ರದೇಶ 163.52 ಚ.ಕಿ.ಮೀ. ಮಧ್ಯಮ ಗಾತ್ರದ ಅರಣ್ಯ ಪ್ರದೇಶ 533.89 ಚ.ಕಿ.ಮೀ. ಸಾಮಾನ್ಯ ಅರಣ್ಯ ಪ್ರದೇಶ 708.04 ಚ.ಕಿ.ಮೀ. ಒಟ್ಟು ಪ್ರದೇಶ ಶೇ 3.42 2021ರ ಸಮೀಕ್ಷಾ ವರದಿಗೆ ಹೋಲಿಸಿದರೆ ಹೆಚ್ಚಾದ ಅರಣ್ಯ ಪ್ರದೇಶ (ಆಧಾರ 2023ರ ಭಾರತೀಯ ಅರಣ್ಯ ಸಮೀಕ್ಷಾ ವರದಿ)
ಅರಣ್ಯ ಹೆಚ್ಚಳಕ್ಕೆ ಇಲಾಖೆಯ ಯೋಜನೆಗಳು
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ: ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಪೋಷಿಸಿದ ಪ್ರತಿ ಸಸಿಗೆ ಪ್ರೋತ್ಸಾಹಧನ. ಮಗುವಿಗೊಂದು ಮರ ಶಾಲೆಗೊಂದು ವನ: ಶಾಲಾ ವಿದ್ಯಾರ್ಥಿಗಳ‌ಲ್ಲಿ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವುದು ಮತ್ತು ಉಚಿತ ಸಸಿ ಒದಗಿಸುವುದು. ವೃಕ್ಷೋದ್ಯಾನ: ಅರಣ್ಯ ಅಥವಾ ಅರಣ್ಯೇತರ ಪ್ರದೇಶ ಸರ್ಕಾರಿ ಜಾಗ ಮತ್ತು ಇತರೆ ಸಮುದಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನದ ಅಭಿವೃದ್ಧಿ. ದೈವೀವನ: ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಜನರಿಗೆ ಅನುಕೂಲವಾದ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ. ಚಿಣ್ಣರ ವನ ದರ್ಶನ: ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲು ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿಗೆ ಅವಕಾಶ.
‘ಅರಣ್ಯ ಪ್ರದೇಶ ಹೆಚ್ಚಳ ಆಶಾದಾಯಕ’
‘ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಳವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಅರಣ್ಯ ಇಲಾಖೆಯಿಂದಲೂ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಜನರಲ್ಲಿ ಅರಣ್ಯ ನಾಶ ತಡೆಯ ಬಗ್ಗೆ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಮೂಡಿಸಬೇಕು. ಪರಿಸರ ಸಂರಕ್ಷಣಾ ವೇದಿಕೆಯಿಂದ ಜಿಲ್ಲೆಯ ಗುಡ್ಡಗಾಡು ಪ್ರದೇಶ ಸೇರಿದಂತೆ ಎಲ್ಲಿ ಅಗತ್ಯವಿದೆಯೋ ಅಲ್ಲಿ ಸಸಿ ನೆಡಲು 5000 ಸಸಿಗಳನ್ನು ಪರಿಸರ ಕಾರ್ಯಕರ್ತರು ಬೇಡಿಕೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು’ ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ಎಸ್‌. ದೇವರಮನಿ ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.