ದಾವಣಗೆರೆ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ₹ 37,000 ಕೋಟಿಯನ್ನು ಸರ್ಕಾರ ಏಕಕಂತಿನಲ್ಲಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮಾರ್ಚ್ 5ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ತಿಳಿಸಿದರು.
‘ದಾವಣಗೆರೆ ಜಿಲ್ಲೆಯೊಂದರಲ್ಲೇ ₹ 900 ಕೋಟಿ ಬಿಲ್ ಬಾಕಿ ಇದೆ. ಮೂರು ವರ್ಷಗಳಿಂದ ಕಾಮಗಾರಿ ನಡೆಸಿದ ಗುತ್ತಿಗೆದಾರರು ಚಿನ್ನಾಭರಣ, ಮನೆ, ಆಸ್ತಿಗಳನ್ನು ಅಡವಿಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಸ್ಪಂದಿಸದೇ ಇದ್ದರೆ ರಾಜ್ಯದಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
‘ಲೋಕೋಪಯೋಗಿ ಇಲಾಖೆಯಲ್ಲಿ ₹ 8,370 ಕೋಟಿ, ಜಲಸಂಪನ್ಮೂಲ ಇಲಾಖೆಯಲ್ಲಿ ₹ 13,000 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಲ್ಲಿ ₹ 3,800, ಸಣ್ಣ ನೀರಾವರಿ ಇಲಾಖೆಯಲ್ಲಿ ₹ 3,000 ಕೋಟಿ, ನಗರಾಭಿವೃದ್ಧಿ ಇಲಾಖೆಯಲ್ಲಿ 2,000 ಕೋಟಿ, ವಸತಿ ಇಲಾಖೆಯಲ್ಲಿ ₹ 2,600 ಕೋಟಿ, ಕಾರ್ಮಿಕ ಇಲಾಖೆ ₹ 2,000 ಕೋಟಿ ಬಾಕಿ ಇದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದರೂ ಸ್ಪಂದಿಸಿಲ್ಲ’ ಎಂದು ಆರೋಪಿಸಿದರು.
‘ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಕೆ. ಪಾಟೀಲ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಂದಿಸುತ್ತಿದ್ದಾರೆ. ಜೇಷ್ಠತೆ ಆಧಾರದ ಮೇರೆಗೆ ಬಿಲ್ ಬಾಕಿ ಪಾವತಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಸಭೆಯನ್ನು ಕರೆದಿಲ್ಲ. ಒಂದು ವೇಳೆ ಎಲ್ಲ ಇಲಾಖೆಗಳ ಸಚಿವರು ಮತ್ತು ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತಿದ್ದವು. ಮುಖ್ಯಮಂತ್ರಿ ಕಾರ್ಯವೈಖರಿ ಬೇಸರ ಮೂಡಿಸಿದೆ’ ಎಂದು ದೂರಿದರು.
ಪ್ಯಾಕೇಜ್ ಟೆಂಡರ್ ಬೇಡ
‘ಹಲವು ಜಿಲ್ಲೆಗಳ ಕಾಮಗಾರಿ ಸೇರಿಸಿ ಪ್ಯಾಕೇಜ್ ರೂಪದಲ್ಲಿ ಗುತ್ತಿಗೆ ನೀಡುವ ವ್ಯವಸ್ಥೆ ಬಿಜೆಪಿ ಅಧಿಕಾರಾವಧಿಯಲ್ಲಿ ಜಾರಿಗೆ ಬಂದಿತು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಈ ಪ್ಯಾಕೇಜ್ ಟೆಂಡರ್ ವ್ಯವಸ್ಥೆ ವಿರೋಧಿಸಿದ್ದರು. ಮುಖ್ಯಮಂತ್ರಿಯಾದ ಬಳಿಕ ಅವರೇ ಈ ವ್ಯವಸ್ಥೆ ಅನುಷ್ಠಾನಕ್ಕೆ ತಂದಿದ್ದಾರೆ. ಇದರಿಂದ ರಾಜ್ಯದ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ತೊಂದರೆ ಉಂಟಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಪ್ಯಾಕೇಜ್ ಗುತ್ತಿಗೆಯ ಟೆಂಡರ್ ಪಡೆಯುವ ಶಕ್ತಿ ರಾಜ್ಯದ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಲ್ಲಿ ಇಲ್ಲ. ಹೊರರಾಜ್ಯದ ದೊಡ್ಡ ಕಂಪನಿಗಳು ಮಾತ್ರ ಇಂತಹ ಕಾಮಗಾರಿ ನಡೆಸಬಲ್ಲವು. ಈ ಪ್ಯಾಕೇಜ್ ವ್ಯವಸ್ಥೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ರಾಜ್ಯಕ್ಕೆ ಬಾಕಿ ಉಳಿಸಿಕೊಂಡಿರುವ ₹ 9,830 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು’
ಸಂಘದ ಮುಖಂಡರಾದ ಲಕ್ಷ್ಮೀಪತಿ, ಸುಬ್ರಹ್ಮಣ್ಯ ದೇವನಹಳ್ಳಿ, ಜಿ.ಅರ್. ಜಗದೀಶ್, ಕೆ.ಎಸ್. ನಾಗರಾಜ್, ಹೇಮಂತ್, ದೇವರಾಜ್ ಹಾಜರಿದ್ದರು.
‘ಬಾಕಿ ಬಿಲ್‌ಗೂ ಕಮಿಷನ್’
‘ಹಳೆಯ ಬಿಲ್‌ಗಳನ್ನು ಬಿಡುಗಡೆ ಮಾಡಲು ಪರ್ಸೆಂಟೇಜ್ ಅಥವಾ ಕಮಿಷನ್ ಕೇಳಲಾಗುತ್ತಿದೆ’ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಆರೋಪಿಸಿದರು.
‘ಹಿಂದಿನ ಸರ್ಕಾರದಲ್ಲಿ 40 ಪರ್ಸಂಟೇಜ್ ಇದೆ ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದೆವು. ಈ ಪರ್ಸಂಟೇಜ್‌ಗೆ ಮುಕ್ತಿ ಇಂದಿಗೂ ಸಿಕ್ಕಿಲ್ಲ. ಹಳೆಯ ಬಿಲ್‌ಗಳ ಬಾಕಿ ಪಡೆಯಲು ಪರ್ಸಂಟೇಜ್ ಕೇಳಲಾಗುತ್ತಿದೆ. ಬಿಲ್ ಜೇಷ್ಠತೆಯನ್ನು ಉಲ್ಲಂಘಿಸಿ ಅನ್ಯಾಯ ಮಾಡಲಾಗುತ್ತಿದೆ’ ಎಂದು ದೂರಿದರು.
‘ಮಧ್ಯವರ್ತಿಗಳ ಹಾವಳಿ’
ನಗರಾಭಿವೃದ್ಧಿ ಹಾಗೂ ವಸತಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇಂತಹ ಸಚಿವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಸಹಿಸಿಕೊಂಡಿದ್ದಾರೊ ಗೊತ್ತಿಲ್ಲ ಎಂದು ಆರ್.ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
‘ಈ ಸಚಿವರ ಹೆಸರುಗಳನ್ನು ಉಲ್ಲೇಖಿಸಲು ಬೇಸರವಾಗುತ್ತದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಟೆಂಡರ್ ಪಡೆಯಲು ಮಧ್ಯವರ್ತಿಗಳನ್ನು ಸಂಪರ್ಕಿಸಬೇಕು. ವಸತಿ ಇಲಾಖೆಯಲ್ಲಿ ಸಚಿವರೇ ಕೆಲ ಗುತ್ತಿಗೆದಾರರನ್ನು ಇಟ್ಟುಕೊಂಡು ಅವರಿಗೆ ಮಾತ್ರ ಟೆಂಡರ್ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.