ADVERTISEMENT

ದಾವಣಗೆರೆ | ‘ಸೈಬರ್‌ ವಂಚಕ’ನ ಬಂಧನ: ₹ 150 ಕೋಟಿ ವಂಚನೆ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 20:01 IST
Last Updated 10 ಅಕ್ಟೋಬರ್ 2025, 20:01 IST
cyber crime
cyber crime   

ದಾವಣಗೆರೆ: ಇಲ್ಲಿನ ಸೈಬರ್ ಅಪರಾಧ ಠಾಣೆ ಪೊಲೀಸರು ಆನ್‌ಲೈನ್‌ ವಂಚನೆ ಪ್ರಕರಣದಲ್ಲಿ ಅಂತರರಾಜ್ಯ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆರೋಪಿ ನೂರಾರು ಕೋಟಿ ವಂಚಿಸಿದ್ದಾನೆ ಎನ್ನಲಾಗಿದ್ದು, ಈತನ ಬ್ಯಾಂಕ್‌ ಖಾತೆಯಲ್ಲಿ ₹ 18 ಕೋಟಿ ಇರುವುದು ಪತ್ತೆಯಾಗಿದೆ.

ಹಾಸನ ಜಿಲ್ಲೆಯ ಬೇಲೂರಿನ ಶಾಂತಿನಗರ ನಿವಾಸಿ ಸೈಯದ್ ಅರ್ಫಾತ್ ಪಾಷ (28) ಬಂಧಿತ. ಪ್ರಕರಣದ ಮೊದಲ ಆರೋಪಿ ಹೈದರಾಬಾದ್‌ ಮೂಲದ ಉಬೇದ್‌ ತಲೆಮರೆಸಿಕೊಂಡಿದ್ದಾನೆ. ಸೈಯ್ಯದ್‌ ಅರ್ಫಾತ್‌ ಸಿ.ಸಿ.ಟಿ.ವಿ ಅಳವಡಿಸುವ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದಾವಣಗೆರೆಯ ನಿಟುವಳ್ಳಿ ನಿವಾಸಿ, ಕಟ್ಟಡ ನಿರ್ಮಾಣ ವಲಯದ ಉದ್ಯಮಿ ಪ್ರಮೋದ್‌ ಎಚ್‌.ಎಚ್‌. ಅವರ ಬ್ಯಾಂಕ್‌ ಖಾತೆಯಲ್ಲಿದ್ದ ₹ 52.60 ಲಕ್ಷ ಹಣವನ್ನು ಆರೋಪಿಗಳು ನೆಟ್‌ ಬ್ಯಾಂಕಿಂಗ್‌ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಖಾತೆಯು ಬ್ಲಾಕ್‌ ಆಗಿದ್ದನ್ನು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಆನ್‌ಲೈನ್ ಮೂಲಕ ವಂಚನೆ ನಡೆದಿರುವುದು ಗೊತ್ತಾಗಿತ್ತು. ಈ ಬಗ್ಗೆ ಪ್ರಮೋದ್ ಅವರು ನೀಡಿದ ದೂರು ಆಧರಿಸಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 

ADVERTISEMENT

ಆರೋಪಿಗಳ ವಿರುದ್ಧ 127 ಪ್ರಕರಣ: 

ಆರೋಪಿಗಳಾದ ಸೈಯದ್ ಅರ್ಫಾತ್ ಹಾಗೂ ಉಬೇದ್‌ ವಿರುದ್ಧ ದೇಶದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 127 ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ಗೊತ್ತಾಗಿದೆ.

ಜುಲೈ 27 ರಿಂದ ಆಗಸ್ಟ್‌ 19ರ ವರೆಗೆ ಆರೋಪಿಗಳು ಬೇರೆಯವರ ಬ್ಯಾಂಕ್‌ ಖಾತೆಗಳಿಂದ ₹ 150 ಕೋಟಿ ಹಣವನ್ನು ತಮ್ಮ ಖಾತೆಗೆ ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ. ಈ ಪೈಕಿ ₹ 132 ಕೋಟಿ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಖಾತೆಯಲ್ಲಿ ಉಳಿದಿದ್ದ ₹18 ಕೋಟಿ ಹಣವನ್ನು ಪೊಲೀಸರು ಬ್ಯಾಂಕ್‌ ಮೂಲಕ ಫ್ರೀಜ್ ಮಾಡಿಸಿದ್ದಾರೆ.

‘₹ 18 ಕೋಟಿ ಪೈಕಿ ಕೋರ್ಟ್‌ ಆದೇಶದಂತೆ ದೂರುದಾರ ಪ್ರಮೋದ್‌ ಅವರಿಗೆ ₹ 52.60 ಲಕ್ಷ ಹಣ ಕೊಡಿಸಲಾಗಿದೆ. ಆರೋಪಿಗಳ ಬಗ್ಗೆ ದೇಶದ ವಿವಿಧ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಸೈಬರ್‌ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ.

‘ಇದೇ ಮೊದಲ ಬಾರಿ ಆರೋಪಿ ಸಿಕ್ಕಿಬಿದ್ದಿದ್ದು,ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ’ ಎಂದು ಸೈಬರ್ ಅಪರಾಧ ಠಾಣೆಯ ಡಿವೈಎಸ್‌ಪಿ ಬಂಕಾಳಿ ನಾಗಪ್ಪ ತಿಳಿಸಿದರು.  

ಇನ್ಸ್‌ಪೆಕ್ಟರ್‌ ವಸಂತ್, ಸಿಬ್ಬಂದಿ ಅಶೋಕ, ಸುರೇಶ್, ಮುತ್ತುರಾಜ್, ನಿಜಲಿಂಗಪ್ಪ, ಅಂಜಿನಪ್ಪ ಕಾರ್ಯಾಚರಣೆ ನಡೆಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.