ADVERTISEMENT

ಮಾಯಕೊಂಡ ಕ್ಷೇತ್ರ ಸ್ಥಿತಿ–ಗತಿ| ಕಾಂಗ್ರೆಸ್, ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟು

ಮಾಯಕೊಂಡ: ಆಕಾಂಕ್ಷಿಗಳ ಮಹಾಪೂರ- ಬಂಡಾಯ ತಡೆಯುವುದೇ ಸಮಸ್ಯೆ

ಬಾಲಕೃಷ್ಣ ಪಿ.ಎಚ್‌
Published 19 ಜನವರಿ 2023, 10:36 IST
Last Updated 19 ಜನವರಿ 2023, 10:36 IST
ಮಾಯಕೊಂಡ ವಿಧಾನಸಭಾ ಕ್ಷೇತ್ರ
ಮಾಯಕೊಂಡ ವಿಧಾನಸಭಾ ಕ್ಷೇತ್ರ   

ದಾವಣಗೆರೆ: ಜಿಲ್ಲೆಯ ಮತ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಕಂಡು ಬಾರದಷ್ಟು ಪ್ರಮಾಣದಲ್ಲಿ ಆಕಾಂಕ್ಷಿಗಳು ಇರುವ ಕ್ಷೇತ್ರವೇ ಮಾಯಕೊಂಡ. ಎಸ್‌ಸಿ ಮೀಸಲು ಕ್ಷೇತ್ರವಾದ ಇಲ್ಲಿ ಎಲ್ಲರೂ ಪ್ರಬಲ ಆಕಾಂಕ್ಷಿಗಳೆಂದೇ ಹೇಳಿಕೊಳ್ಳುತ್ತಿದ್ದಾರೆ. ಯಾರನ್ನು ಸಮಾಧಾನ ಮಾಡುವುದು, ಯಾರನ್ನು ಬಿಡುವುದು ಎಂಬುದೇ ಬಿಜೆಪಿ, ಕಾಂಗ್ರೆಸ್‌ಗೆ ಸಮಸ್ಯೆಯಾಗಿದೆ. ಯಾವಾಗಲೂ ಈ ಕ್ಷೇತ್ರದಲ್ಲಿ ಬಂಡಾಯ ಎದ್ದು ಸ್ಪರ್ಧಿಸುವವರು ಇರುವ ವಿಶಿಷ್ಟ ಕ್ಷೇತ್ರ ಇದು.

11 ಮಂದಿ ಬಿಜೆಪಿಯಿಂದ ಟಿಕೆಟ್‌ ಸದ್ಯ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಮುಂದೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಮಾಯಕೊಂಡ ಮೀಸಲು ಕ್ಷೇತ್ರವಾದ ಬಳಿಕ ಇದು ನಾಲ್ಕನೇ ಚುನಾವಣೆ. 2008ರಲ್ಲಿ ಬಿಜೆಪಿಯ ಬಸವರಾಜ ನಾಯ್ಕ್‌ ಗೆದ್ದರೆ, 2013ರಲ್ಲಿ ಕಾಂಗ್ರೆಸ್‌ನ ಕೆ. ಶಿವಮೂರ್ತಿ ಜಯ ಸಾಧಿಸಿದ್ದರು. ಆಗ ಪ್ರೊ. ಲಿಂಗಣ್ಣ ಕೆಜೆಪಿ ಅಭ್ಯರ್ಥಿ ಆಗಿ ಪ್ರಬಲ ಪೈಪೋಟಿ ನೀಡಿದ್ದರು. ಬಸವರಾಜ ನಾಯ್ಕ್ ಬಿಜೆಪಿಯಿಂದ ಕಣಕ್ಕಿಳಿದಿದ್ದರು. 2018ರಲ್ಲಿ ಮತ್ತೆ ಪ್ರೊ. ಲಿಂಗಣ್ಣ ಬಿಜೆಪಿಯಿಂದ ಅಭ್ಯರ್ಥಿಯಾದರೆ, ಬಸವರಾಜ ನಾಯ್ಕ್‌ ಜೆಡಿಯುನಿಂದ ಸ್ಪರ್ಧಿಸಿದ್ದರು. ಪ್ರೊ.ಲಿಂಗಣ್ಣ ಗೆದ್ದು ಬಂದರೆ, ಕಾಂಗ್ರೆಸ್‌ನ ಕೆ.ಎಸ್‌. ಬಸವರಾಜ್‌ (ಬಸವಂತಪ್ಪ) ನಿಕಟ ಸ್ಪರ್ಧೆ ಒಡ್ಡಿದ್ದರು.

ಈ ಬಾರಿ ಹಾಲಿ ಶಾಸಕ ಪ್ರೊ. ಎನ್‌. ಲಿಂಗಪ್ಪ, ಮಾಜಿ ಶಾಸಕ ಬಸವರಾಜ ನಾಯ್ಕ, 2008ರಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಆಲೂರು ನಿಂಗರಾಜ್‌, ಕಳೆದ ಬಾರಿಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ, ಪಕ್ಷದಿಂದ ಆಚೀಚೆ ಅಲ್ಲಾಡದ ಎಚ್‌.ಕೆ. ಬಸವರಾಜ್‌, ಹೊಸಮುಖಗಳಾದ ಟಿ. ತಿಮ್ಮೇಶ್‌, ಅನಿಲ್‌ ಕುಮಾರ್‌, ಶಾಮ್‌, ಶಿವಪ್ರಕಾಶ್‌ ಆರ್‌.ಎಲ್‌., ಹನುಮಂತನಾಯ್ಕ್‌, ಶಿವಾನಂದ ಆರ್‌. ಹೀಗೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಾ ಹೋಗಿದೆ.

ADVERTISEMENT

ಇದಲ್ಲದೇ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ವಾಗೀಶ ಸ್ವಾಮಿ ಟಿಕೆಟ್‌ಗಾಗಿ ಪ್ರಬಲ ಹಕ್ಕೊತ್ತಾಯ ಮಂಡಿಸಿದ್ದಾರೆ. ಈ ಬಾರಿ ಶತಾಯಗತಾಯ ಸ್ಪರ್ಧೆ ಮಾಡಲೇಬೇಕು ಎಂಬ ಛಲ ತೊಟ್ಟಿದ್ದಾರೆ.

ಕಾಂಗ್ರೆಸ್‌ನಿಂದ ಹಳೇ ಆಕಾಂಕ್ಷಿಗಳೂ ಹೊಸ ಆಕಾಂಕ್ಷಿಗಳೂ ಸೇರಿ 14 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಭರಮಸಾಗರ ಮೀಸಲು ಕ್ಷೇತ್ರವಾಗಿದ್ದಾಗ ನಾಲ್ಕು ಬಾರಿ, ಬಳಿಕ ಮಾಯಕೊಂಡದಿಂದ ಮೂರು ಬಾರಿ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದ ಡಿ. ಬಸವರಾಜ್‌ ಈಗ 8ನೇ ಬಾರಿಗೆ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಚುನಾವಣೆಗಳಲ್ಲೂ ಸ್ಪರ್ಧಿಸುವ ಹುಮ್ಮಸ್ಸು ತೋರಿ ಟಿಕೆಟ್ ಕೇಳುವ ಬಿ.ಎಚ್‌. ವೀರಭದ್ರಪ್ಪ ಅವರೂ ಮತ್ತೆ ಆಕಾಂಕ್ಷಿಯಾಗಿದ್ದಾರೆ. ಪಕ್ಷೇತರನಾಗಿ ನಿಂತು ಪ್ರಬಲ ಸ್ಪರ್ಧೆಯನ್ನು ಎರಡೆರಡು ಬಾರಿ ಒಡ್ಡಿದ್ದ ಎಚ್‌. ಆನಂದಪ್ಪ ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಬಾರಿ ನಿಕಟ ಸ್ಪರ್ಧೆ ಒಡ್ಡಿರುವ ಕೆ.ಎಸ್‌. ಬಸವರಾಜ್‌ (ಬಸವಂತಪ್ಪ) ಈ ಬಾರಿಯೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕೆಲವು ಸಮಯದಿಂದ ಈಚೆಗೆ ಸವಿತಾಬಾಯಿ ಮಲ್ಲೇಶ್‌ ನಾಯ್ಕ್‌ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. 2013ರಲ್ಲಿ ಸ್ಪರ್ಧಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಮತ್ತೆ ಟಿಕೆಟ್‌ ಬಯಸಿದ್ದಾರೆ. ಕಾಂಗ್ರೆಸ್‌ ಮುಖಂಡರಾದ ದುಗ್ಗಪ್ಪ ಎಚ್‌., ವೀರೇಶ್‌ ನಾಯ್ಕ್‌ ಬಿ.ಎನ್‌., ರಾಘವೇಂದ್ರ ನಾಯ್ಕ್‌, ಕಾಶಿನಾಥ ಯಂಕನಾಯ್ಕ, ಎಲ್‌.ಕೆ. ನಾಯ್ಕ, ವಕೀಲ ಅನಂತನಾಯ್ಕ ಎನ್‌., ಚಂದ್ರಶೇಖರಪ್ಪ ಬಿ.ಜಿ. ಟಿಕೆಟ್ ಬಯಸಿದ್ದಾರೆ.

ಜೆಡಿಎಸ್‌ನಿಂದ ಶಿಲಾ ನಾಯ್ಕ್‌ ಅವರ ಹೆಸರಿದೆ. ಜತೆಗೆ ಬೇರೆ ಪಕ್ಷಗಳಿಂದ ಕೊನೇ ಕ್ಷಣಕ್ಕೆ ಬಂಡಾಯ ಎದ್ದು ಜೆಡಿಎಸ್‌ಗೆ ಬರುವ ಸಾಧ್ಯತೆಯೂ ಇದೆ.

ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದೇ ಇದ್ದರೆ ಪಕ್ಷೇತರರಾಗಿ ಸ್ಪರ್ಧಿಸಲೂ ಹಿಂದೆ ಮುಂದೆ ನೋಡದವರು ಇದ್ದಾರೆ. ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅತಿ ಕಗ್ಗಂಟಾಗಿರುವ ಕ್ಷೇತ್ರವಾಗಿರುವ ಮಾಯಕೊಂಡ ಅತಿ ಕುತೂಹಲದ ಕ್ಷೇತ್ರವೂ ಆಗಿದೆ.

***

ಮಾಯಕೊಂಡದಲ್ಲಿ ಹಾಲಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಅನೇಕರು ಆಕಾಂಕ್ಷಿಗಳಿದ್ದಾರೆ. ಗೆಲ್ಲುವ ಅಭ್ಯರ್ಥಿಯನ್ನು ಬಿಜೆಪಿ ಆಯ್ಕೆ ಮಾಡಲಿದೆ.

- ಎಸ್.ಎಂ. ವೀರೇಶ್ ಹನಗವಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಮಾಯಕೊಂಡ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸಂಖ್ಯೆ ಉಳಿದೆಲ್ಲ ಕ್ಷೇತ್ರಗಳಿಗಿಂತ ಹೆಚ್ಚಿದೆ. ಜಿಲ್ಲಾ ನಾಯಕರು ಮತ್ತು ರಾಜ್ಯದ ನಾಯಕರು ಅಭ್ಯರ್ಥಿಯನ್ನು ತೀರ್ಮಾನಿಸಲಿದ್ದಾರೆ.

- ಎಚ್‌.ಬಿ. ಮಂಜಪ್ಪ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.