ದಾವಣಗೆರೆ ಜಿಲ್ಲಾ ಪೊಲೀಸ್
ದಾವಣಗೆರೆ: ಬ್ಯಾಂಕ್ ದರೋಡೆಗೆ ಸಂಬಂಧಿಸಿದ ‘ಮನಿ ಹೈಸ್ಟ್’ ವೆಬ್ ಸರಣಿಯು ನ್ಯಾಮತಿ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕಿನ (ಎಸ್‌ಬಿಐ) ನೆಹರೂ ರಸ್ತೆಯ ಶಾಖೆಯ ₹ 15.30 ಕೋಟಿ ಮೌಲ್ಯದ ಚಿನ್ನಾಭರಣದ ಕಳವಿಗೆ ಪ್ರೇರಣೆ ನೀಡಿತ್ತು ಎಂಬ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಒಟಿಟಿ ಹಾಗೂ ಯೂಟ್ಯೂಬ್‌ನಲ್ಲಿ ಬ್ಯಾಂಕ್ ಕಳವಿಗೆ ಸಂಬಂಧಿಸಿದ ವಿಡಿಯೊಗಳನ್ನು ಗಮನಿಸಿ 6 ಜನ ಆರೋಪಿಗಳು ವೃತ್ತಿಪರತೆ ಮೈಗೂಡಿಸಿಕೊಂಡ ಬಗೆಗೆ ಪೊಲೀಸರು ಅಚ್ಚರಿಗೊಂಡಿದ್ದಾರೆ. ಸಿನಿಮೀಯ ಮಾದರಿಯಲ್ಲಿ ಬ್ಯಾಂಕ್‌ನಿಂದ ಕಳವು ಮಾಡಿದ್ದ 17 ಕೆ.ಜಿ. 750 ಗ್ರಾಂ ಚಿನ್ನಾಭರಣದಲ್ಲಿ 17 ಕೆ.ಜಿ 100 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರ ಐವರನ್ನು ಬಂಧಿಸಿದ್ದ ಪೊಲೀಸರು, ವಿಚಾರಣೆಯ ನಂತರ ದೊರೆತ ಸುಳಿವಿನ ಮೇರೆಗೆ ತಮಿಳುನಾಡಿನ ಮಧುರೆಗೆ ತೆರಳಿ ಅಲ್ಲಿನ ಬಸ್ ನಿಲ್ದಾಣದಲ್ಲಿ ಇನ್ನೊಬ್ಬ ಆರೋಪಿ ಪರಮಾನಂದ (30) ಎಂಬವನನ್ನು ಸೆರೆ ಹಿಡಿದಿದ್ದಾರೆ.
‘ಪ್ರಮುಖ ಆರೋಪಿ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯ ವಿಜಯ್‌ಕುಮಾರ್ (30) ಮಹಾತ್ವಕಾಂಕ್ಷೆ ಹೊಂದಿದ್ದ ವ್ಯಾಪಾರಿ. ಬೇಕರಿ ವ್ಯವಹಾರದ ವಿಸ್ತರಣೆಗೆ ಸಾಲ ಸೌಲಭ್ಯ ಸಿಗದ ಬಳಿಕ ಬ್ಯಾಂಕ್ ಕಳವಿಗೆ ಆಲೋಚಿಸಿದ್ದ. ‘ಮನಿ ಹೈಸ್ಟ್’ ಸೇರಿದಂತೆ ಹಲವು ವೆಬ್ ಸರಣಿ, ಸಿನಿಮಾ ಹಾಗೂ ವಿಡಿಯೊಗಳನ್ನು 6 ತಿಂಗಳು ನೋಡಿ ಬ್ಯಾಂಕ್ ಕಳವಿಗೆ ಯೋಜನೆ ರೂಪಿಸಿದ್ದ’ ಎಂದು ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ದಿಢೀರ್ ಶ್ರೀಮಂತನಾಗುವ ಬಯಕೆ ವಿಜಯ್‌ಕುಮಾರ್‌ಗೆ ಇತ್ತು. ಇದಕ್ಕೆ ನ್ಯಾಮತಿಯ ಎಸ್‌ಬಿಐ ಶಾಖೆಯ ಕಳವಿನ ಆಲೋಚನೆಯನ್ನು ಸಹಚರರೊಂದಿಗೆ ಹಂಚಿಕೊಂಡು ಸಂಚು ರೂಪಿಸಿದ್ದ. ಅಗತ್ಯ ಸಾಮಗ್ರಿಗಳನ್ನು ಶಿವಮೊಗ್ಗ ಹಾಗೂ ನ್ಯಾಮತಿಯಲ್ಲಿ ಖರೀದಿಸಿದ್ದ. ಬ್ಯಾಂಕ್ ಬಳಿಗೆ ತೆರಳಿ ಸಿ.ಸಿ. ಟಿವಿ ಎಲ್ಲಿದೆ? ಕಟ್ಟಡಕ್ಕೆ ನುಗ್ಗಲು ಯಾವ ಸ್ಥಳ ಸುಲಭ? ಚಿನ್ನಾಭರಣವನ್ನು ಎಲ್ಲಿ ಭದ್ರಪಡಿಸಲಾಗಿದೆ? ಎಂಬ ವಿವರವನ್ನು ಅರಿತುಕೊಂಡಿದ್ದ’ ಎಂದು ಹೇಳಿದರು.
‘ಕೃತ್ಯ ಎಸಗುವುದಕ್ಕೂ 15 ದಿನಗಳ ಮುನ್ನ ವಿಜಯ್‌ಕುಮಾರ್ ಹಾಗೂ ಅಭಿಷೇಕ್ ಬ್ಯಾಂಕ್ ಕಳವಿಗೆ ಸಂಬಂಧಿಸಿದಂತೆ ಅಣಕು ಪ್ರದರ್ಶನ ನಡೆಸಿದ್ದರು. ಸಣ್ಣ ವಿಚಾರಕ್ಕೂ ಅಚ್ಚುಕಟ್ಟಾದ ಸಿದ್ಧತೆ ಮಾಡಿಕೊಂಡಿದ್ದರು. ರಾತ್ರಿ ವೇಳೆ ಯಾವ ಸಮಯದಲ್ಲಿ ಪೊಲೀಸರು ಬ್ಯಾಂಕ್ ಬಳಿಗೆ ಗಸ್ತಿಗೆ ಬರುತ್ತಾರೆ? ಎಂಬುದನ್ನೂ ಗಮನಿಸಿದ್ದರು. ಯಾರೊಬ್ಬರೂ ಮೊಬೈಲ್ ಫೋನ್ ಬಳಸಿರಲಿಲ್ಲ’ ಎಂದು ಮಾಹಿತಿ ನೀಡಿದರು.
‘ಕೃತ್ಯ ಎಸಗಿದ ಬಳಿಕ ಸಣ್ಣ ಸಾಕ್ಷ್ಯವೂ ಸಿಗದಂತೆ ಎಚ್ಚರವಹಿಸಿದ್ದರು. ಕೃತ್ಯಕ್ಕೆ ಬಳಸಿದ ವಸ್ತುಗಳಾದ ಮಂಕಿ ಕ್ಯಾಪ್, ಹ್ಯಾಂಡ್‌ಗ್ಲೌಸ್‍ಗಳನ್ನು ನಾಶಪಡಿಸಿದ್ದರು. ಹೈಡ್ರಾಲಿಕ್ ಕಟರ್, ಗ್ಯಾಸ್ ಸಿಲೆಂಡರ್ ಸೇರಿ ಇತರ ವಸ್ತುಗಳನ್ನು ಕೆರೆಗೆ ಎಸೆದಿದ್ದರು. ಬ್ಯಾಂಕಿನಿಂದ ತಂದಿದ್ದ ಹಾರ್ಡ್‌ಡಿಸ್ಕ್, ಡಿವಿಆರ್‌ಗಳನ್ನು ಕಲ್ಲಿನಿಂದ ಜಜ್ಜಿ ಹಾಳು ಮಾಡಿದ್ದರು’ ಎಂದರು.
ಸಿಕ್ಕಿಬಿದ್ದ ದರೋಡೆ ತಂಡ
‘ಕೃತ್ಯ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಾಕ್ಷ್ಯ ಸಂಗ್ರಹಕ್ಕೆ ಒತ್ತು ನೀಡಿದ್ದರು. ಬ್ಯಾಂಕ್ ಸುತ್ತಲಿನ 8 ಕಿ.ಮೀ ವ್ಯಾಪ್ತಿಯ ಇಂಚಿಂಚು ಸ್ಥಳವನ್ನು ಶೋಧಿಸಿದ್ದರು. ಸಣ್ಣ ಸುಳಿವು ಸಿಗದಿರುವದನ್ನು ನೋಡಿ ವೃತ್ತಿಪರ ದರೋಡೆಕೋರರು ಈ ಕೃತ್ಯ ಎಸಗಿರಬಹುದು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಬ್ಯಾಂಕಿನಲ್ಲಿ ನಡೆದ ಇದೇ ಮಾದರಿಯ ಕೃತ್ಯದ ಜಾಡು ಹಿಡಿದ ತಂಡ ಉತ್ತರಪ್ರದೇಶದ ಬದಾಯ್ ಜಿಲ್ಲೆಯ ಕಕ್ರಾಳ್ ಪಟ್ಟಣಕ್ಕೆ ತೆರಳಿತ್ತು’ ಎಂದು ರವಿಕಾಂತೇಗೌಡ ವಿವರಿಸಿದರು.
‘ಫೆಬ್ರುವರಿಯಲ್ಲಿ ಕೇರಳ, ಹಿಮಾಚಲ ಪ್ರದೇಶ, ಹರಿಯಾಣ, ಆಂಧ್ರಪ್ರದೇಶ ತಮಿಳುನಾಡಿಗೂ ತನಿಖಾ ತಂಡ ಭೇಟಿ ನೀಡಿತ್ತು. ಮಾರ್ಚ್‌ನಲ್ಲಿ ಮತ್ತೊಮ್ಮೆ ಉತ್ತರಪ್ರದೇಶದ ಕಕ್ರಾಳ್‌ಗೆ ತೆರಳಿತ್ತು. ಈ ಗ್ಯಾಂಗ್ ಕರ್ನಾಟಕಕ್ಕೆ ಬಂದಿರುವ ಸುಳಿವು ಲಭ್ಯವಾಗುತ್ತಿದ್ದಂತೆ ಮಾರ್ಚ್ 16ರಂದು ಜಿಲ್ಲೆಯ ಎಲ್ಲೆಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ನಿಗಾ ಇಡಲಾಗಿತ್ತು. ಆಗ ಉತ್ತರಪ್ರದೇಶದ ಗ್ಯಾಂಗ್ ಸಿಕ್ಕಿಬಿದ್ದಿತ್ತು’ ಎಂದರು.
‘ಬಂಧಿತರಾದ ಗುಡ್ಡು ಕಾಲಿಯಾ, ಅಸ್ಲಾಂ, ಹಜರತ್ ಅಲಿ ಹಾಗೂ ಕಮರುದ್ದೀನ್ ವಿಚಾರಣೆಗೆ ಒಳಪಡಿಸಿದಾಗ ನ್ಯಾಮತಿ ಬ್ಯಾಂಕ್ ಕಳವಿನಲ್ಲಿ ಇವರ ಪಾತ್ರವಿಲ್ಲ ಎಂಬ ಸಂಗತಿ ಗೊತ್ತಾಗಿತ್ತು. ಆ ಬಳಿಕ ಸ್ಥಳೀಯರ ಮೇಲೆ ಅನುಮಾನ ಮೂಡಿತು. ಕಳವು ಕೃತ್ಯದ ವೃತ್ತಿಪರತೆ ತನಿಖಾ ತಂಡದ ಗಮನವನ್ನು ಹೊರರಾಜ್ಯದತ್ತ ಸೆಳೆದಿದ್ದು ನಿಜ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಾವಿಯಲ್ಲಿದ್ದ ಚಿನ್ನ ವಶಕ್ಕೆ
‘ಕೃತ್ಯ ಎಸಗಿದ ಬಳಿಕ ಚಿನ್ನಾಭರಣವನ್ನು ಕಾರಿನ ಡಿಕ್ಕಿಯಲ್ಲಿ ಇಟ್ಟಿದ್ದರು. ಕೆಲ ದಿನಗಳ ಬಳಿಕ ವಿಜಯಕುಮಾರ್ ಈ ಚಿನ್ನವನ್ನು ತಮಿಳುನಾಡಿನ ಮಧುರೆ ಜಿಲ್ಲೆಯ ಸ್ವಗ್ರಾಮಕ್ಕೆ ಸಾಗಿಸಿದ್ದ. ಚಿನ್ನಾಭರಣಗಳನ್ನು ಲಾಕರ್‌ನಲ್ಲಿ ಭದ್ರಪಡಿಸಿ ಮನೆ ಸಮೀಪದ 30 ಅಡಿ ಆಳದ ಬಾವಿಗೆ ಎಸೆದಿದ್ದ’ ಎಂದು ರವಿಕಾಂತೇಗೌಡ ತಿಳಿಸಿದರು.
‘ಚಿನ್ನದ ಒಂದಷ್ಟು ಭಾಗವನ್ನು ಮಾತ್ರ ಬ್ಯಾಂಕ್ ಮತ್ತು ಚಿನ್ನಾಭರಣ ಮಳಿಗೆಗಳಲ್ಲಿ ಅಡಿವಿಟ್ಟಿದ್ದ. ಇದರಿಂದ ಬಂದ ಹಣದಲ್ಲಿ ಅಭಿಷೇಕ್, ಮಂಜುನಾಥ್ ಹಾಗೂ ಚಂದ್ರುಗೆ ತಲಾ ₹ 1 ಲಕ್ಷ ನೀಡಿದ್ದ. ಇನ್ನೂ ಒಂದೂವರೆ ವರ್ಷ ಅಥವಾ ಪ್ರಕರಣದ ತನಿಖೆ ಮುಗಿಯುವವರೆಗೂ ಚಿನ್ನಾಭರಣವನ್ನು ಬಾವಿಯಿಂದ ಹೊರತೆಗೆಯದಂತೆ ನಿರ್ಧರಿಸಿದ್ದ’ ಎಂದರು.
ಉದ್ಯಮಿ ಕನಸು ನಾಶಪಡಿಸಿದ ‘ಸಿಬಿಲ್’
ಬೇಕರಿ ವ್ಯವಹಾರದ ವಿಸ್ತರಣೆಗೆ ಆರೋಪಿ ವಿಜಯ್‌ಕುಮಾರ್ ಸಾಲ ಪಡೆಯಲು ಮುಂದಾಗಿದ್ದ. ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (ಪಿಎಂಇಜಿ) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಎಸ್‌ಬಿಐಗೆ ಶಿಫಾರಸುಗೊಂಡಿತ್ತು. ದೊಡ್ಡ ಉದ್ಯಮಿಯಾಗಬೇಕು ಎಂಬ ಆರೋಪಿಯ ಕನಸನ್ನು ‘ಸಿಬಿಲ್’ ಭಗ್ನಗೊಳಿಸಿತ್ತು.
‘2023ರಲ್ಲಿ ಆರೋಪಿ ₹ 15 ಲಕ್ಷ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ಸಿಬಿಲ್ ಸ್ಕೋರ್ ಇರದಿರುವ ಕಾರಣಕ್ಕೆ ಅರ್ಜಿ ತಿರಸ್ಕೃತಗೊಂಡಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
10 ಪೊಲೀಸರಿಗೆ ಸಿಎಂ ಪದಕ
ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ನಡೆದ ತನಿಖೆಯ ಕಾರ್ಯಕ್ಕೆ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ. ಗ್ರಾಮಾಂತರ ಉಪವಿಭಾಗದ ಡಿವೈಎಸ್‌ಪಿ ಬಿ.ಎಸ್. ಬಸವರಾಜ್ ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ತನಿಖಾ ತಂಡದ 10 ಜನರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.
‘ಡಿಜಿ ಮತ್ತು ಐಜಿಪಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಡಿಜಿಪಿ ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ. ತಂಡಕ್ಕೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿದ್ದಾರೆ’ ಎಂದು ರವಿಕಾಂತೇಗೌಡ ತಿಳಿಸಿದರು.
ಬ್ಯಾಂಕ್ ಕಳವಿನ ಕೃತ್ಯ ಮತ್ತೊಬ್ಬರಿಗೆ ಗೊತ್ತಾಗದಂತೆ ಎಚ್ಚರವಹಿಸಿದ್ದರು. ಕುಟುಂಬದ ಸದಸ್ಯರಿಗೂ ಈ ಮಾಹಿತಿ ತಿಳಿದಿರಲಿಲ್ಲ. ಎಲ್ಲ ಆರೋಪಿಗಳಿಂದ ವಿಜಯಕುಮಾರ್ ಪ್ರಮಾಣ ಮಾಡಿಸಿಕೊಂಡಿದ್ದನು.-ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.