
ದಾವಣಗೆರೆ: ಕೊಲೆ, ದರೋಡೆ, ಡಕಾಯತಿ, ಕಳವು ಸೇರಿದಂತೆ ಐದು ಪ್ರಕರಣಗಳನ್ನು ಭೇದಿಸಿದ ಜಿಲ್ಲಾ ಪೊಲೀಸರು ತಮಿಳುನಾಡಿನ ಐವರು ಸೇರಿದಂತೆ 11 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 534 ಗ್ರಾಂ ಚಿನ್ನಾಭರಣ, 639 ಗ್ರಾಂ ಬೆಳ್ಳಿ ಸಾಮಗ್ರಿ ಸೇರಿದಂತೆ ₹ 70.6 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.
ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ತೋಟದ ಮನೆ ಡಕಾಯತಿ, ನ್ಯಾಮತಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂಟಿ ಮಹಿಳೆಯ ಕೊಲೆ ಮತ್ತು ದರೋಡೆ, ಕೆಟಿಜೆ ನಗರ ಠಾಣೆ ವ್ಯಾಪ್ತಿಯ ಮನೆ ಕಳವು, ಚನ್ನಗಿರಿ ಠಾಣೆ ವ್ಯಾಪ್ತಿಯ ನಲ್ಲೂರು ಗ್ರಾಮದ ಮನೆಯೊಂದರಲ್ಲಿ ನಡೆದ ಚಿನ್ನಾಭರಣ ಕಳವು ಸೇರಿದಂತೆ ಇತರ ಪ್ರಕರಣಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಒಂಟಿ ಮನೆ ಡಕಾಯತಿ:
‘ಚನ್ನಗಿರಿ ತಾಲ್ಲೂಕಿನ ಕಾಕನೂರು ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ಸೆ.6ರಂದು ನಡೆದ ಡಕಾಯತಿ ಪ್ರಕರಣದಲ್ಲಿ ತಮಿಳುನಾಡಿನ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₹ 14 ಲಕ್ಷ ಮೌಲ್ಯದ 96 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ತನಿಖೆಗೆ ಸವಾಲಾಗಿದ್ದ ಈ ಪ್ರಕರಣವನ್ನು ಸಂತೆಬೆನ್ನೂರು ಠಾಣೆಯ ಪೊಲೀಸರು ಭೇದಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಚ್.ಟಿ. ಶೇಖರ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ತಮಿಳುನಾಡಿನ ಸೇಲಂ ಜಿಲ್ಲೆಯ ಸತೀಶ್ ಕುಮಾರ್ (40), ಕೇಶವನ್ (43), ಅರುಣ್ ಪ್ರಶಾಂತ್ (26), ಅರಸು (26) ಹಾಗೂ ಕಮಲಾದೇವಿ (38) ಬಂಧಿತರು. ರಾಜ್ಯ ಹೆದ್ದಾರಿ 76ಕ್ಕೆ ಹೊಂದಿಕೊಂಡಿರುವ ಮನೆಗೆ ರಾತ್ರಿ ವೇಳೆ ನುಗ್ಗಿದ ದುಷ್ಕರ್ಮಿಗಳು ಸಾವಿತ್ರಮ್ಮ ಹಾಗೂ ಮಾದಪ್ಪ ದಂಪತಿಯನ್ನು ಬೆದರಿಸಿ ಡಕಾಯತಿ ಮಾಡಿದ್ದರು. ಈ ತಂಡದ ವಿರುದ್ಧ ತಮಿಳುನಾಡು, ಬೆಂಗಳೂರು ಸೇರಿ ವಿವಿಧೆಡೆ ಹಲವು ಪ್ರಕರಣಗಳು ದಾಖಲಾಗಿವೆ’ ಎಂದರು.
ಜೈಲಿನಿಂದ ಹೊರಬಂದು ಕೃತ್ಯ:
‘ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ಗರ್ ಅಲಿ ಎಂಬುವರ ಮನೆಯಲ್ಲಿ ಫೆ.17ರಂದು ಹಗಲು ಹೊತ್ತು ನಡೆದ ಚಿನ್ನಾಭರಣ ಕಳವು ಪ್ರಕರಣದಲ್ಲಿ ಶಿವಮೊಗ್ಗದ ವಿನೋಬನಗರದ ಗೌತಮ್ ರಾಜ್ (35) ಬಂಧಿಸಲಾಗಿದೆ. ಆರೋಪಿ ಬಳಿಯಿಂದ ₹29 ಲಕ್ಷ ಮೌಲ್ಯದ 261 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಎಸ್‌ಪಿ ಶೇಖರ್ ತಿಳಿಸಿದರು.
‘ವೃತ್ತಿಯಲ್ಲಿ ಆಟೊ ಚಾಲಕನಾಗಿರುವ ಗೌತಮ್, ಬೀಗ ಹಾಕಿದ ಮನೆಗಳನ್ನು ಹುಡುಕುತ್ತಾನೆ. ಚಲನವಲನ ಗಮನಿಸಿ ಕೃತ್ಯ ಎಸಗುತ್ತಾನೆ. ಆರೋಪಿ ಬಂಧನದಿಂದ ಕೆಟಿಜೆ ಠಾಣೆ ವ್ಯಾಪ್ತಿಯ 3, ಬಸವನಗರ ಠಾಣೆಯ 1 ಹಾಗೂ ಹರಿಹರ ಠಾಣೆಯ 2 ಪ್ರಕರಣ ಬಗೆಹರಿದಿವೆ. ಆರೋಪಿ ವಿರುದ್ಧ ಶಿವಮೊಗ್ಗ, ಹಾವೇರಿ, ಕೊಪ್ಪಳ ಸೇರಿದಂತೆ ವಿವಿಧೆಡೆ 19 ಪ್ರಕರಣ ದಾಖಲಾಗಿವೆ. ಜೈಲಿನಿಂದ ಹೊರಬಂದು ಈ ಕೃತ್ಯ ಎಸಗುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದರು.
ಐಷಾರಾಮಿ ಜೀವನಕ್ಕೆ ಕಳವು:
‘ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಸೈಯದ್ ನಫೀಜ್ ಮನೆಯಲ್ಲಿ ಫೆ.14ರಂದು ನಡೆದ ಕಳವು ಕೃತ್ಯವನ್ನು ಭೇದಿಸಿದ ಪೊಲೀಸರು, ಬಾಡಿಗೆದಾರರನ್ನು ಬಂಧಿಸಿದ್ದಾರೆ. ಸೈಯದ್ ಮುದಾಸೀರ್ (19), ಸೈಯದ್ ಮುಜಾಮಿಲ್ (19) ಹಾಗೂ ಮಹಮ್ಮದ್ ಸಾಹಿಲ್ (24) ಬಂಧಿಸಿದ್ದು, ₹ 10 ಲಕ್ಷ ಮೌಲ್ಯದ 72 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ತಿಳಿಸಿದರು.
‘ಕೂಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಐಷಾರಾಮಿ ಜೀವನ ನಡೆಸಲು ಕಳವು ಕೃತ್ಯದಲ್ಲಿ ತೊಡಗಿದ್ದರು. ದುಬಾರಿ ಬೆಲೆಯ ಬೈಕ್, ಗೋವಾ ಪ್ರವಾಸಕ್ಕೆ ದುಂದುವೆಚ್ಚ ಮಾಡುತ್ತಿದ್ದರು. ಮನೆಯ ಮಾಲೀಕರು ಮುಂಬಾಗಿಲು ಕೀ ಇಡುತ್ತಿದ್ದ ಸ್ಥಳವನ್ನು ನೋಡಿಕೊಂಡು ಕೃತ್ಯ ಎಸಗಿದ್ದರು’ ಎಂದರು.
ಹಾವು ಹಿಡಿಯುವ ನೆಪದಲ್ಲಿ ಹೊಂಚು
‘ಚನ್ನಗಿರಿ ಪಟ್ಟಣದ ಗೋಪಾಲ್ ಪವಾರ್ ಎಂಬುವರ ಮನೆಯಲ್ಲಿ ಸೆ.2ರಂದು ನಡೆದ ಕಳವು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹಂಚಿನಸಿದ್ಧಾಪುರದ ಪರಶುರಾಮ (28) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಬಳಿಯಿಂದ ₹ 8 ಲಕ್ಷ ಮೌಲ್ಯದ 38 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಮಾಹಿತಿ ನೀಡಿದರು.
‘ಹಾವು ಹಿಡಿಯುವ ನೆಪದಲ್ಲಿ ಮನೆಗಳಿಗೆ ತೆರಳುತ್ತಿದ್ದ ಆರೋಪಿ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ. ಗೋಪಾಲ್ ಪವಾರ್ ಮನೆಗೆ ಹೀಗೆ ಬಂದು ಚಲನವಲನ ಗಮನಿಸಿ ಕೃತ್ಯ ಎಸಗಿದ್ದ’ ಎಂದು ವಿವರಿಸಿದರು.
ಆನ್‌ಲೈನ್ ಗೇಮ್‌ಗೆ ದರೋಡೆ
‘ನ್ಯಾಮತಿ ತಾಲ್ಲೂಕಿನ ಆರುಂಡಿ ಗ್ರಾಮದಲ್ಲಿ ಫೆ.3ರಂದು ನಡೆದ ಒಂಟಿ ಮಹಿಳೆ ಕಮಲಮ್ಮ (64) ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಾಳೇನಹಳ್ಳಿಯ ಅಭಿಷೇಕ್ ಕೆ. (23) ಎಂಬಾತನನ್ನು ಬಂಧಿಸಿದ್ದಾರೆ. ಕಳವು ಮಾಡಿದ್ದ ₹ 8.44 ಲಕ್ಷ ಮೌಲ್ಯದ 67 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ’ ಎಂದು ಎಚ್.ಟಿ. ಶೇಖರ್ ತಿಳಿಸಿದರು.
‘ಬಿ.ಕಾಂ ಪದವಿಯನ್ನು ಮೊಟಕುಗೊಳಿಸಿದ್ದ ಆರೋಪಿ ಅಡಿಕೆ ಖೇಣಿ ಮಾಡುತ್ತಿದ್ದ. ಇಲ್ಲಿ ಸಿಗುತ್ತಿದ್ದ ಹಣವನ್ನು ಆನ್‌ಲೈನ್ ಗೇಮ್‌ನಲ್ಲಿ ತೊಡಗಿಸುತ್ತಿದ್ದ. ಹಣ ಕಳೆದುಕೊಂಡು ಹಲವರ ಬಳಿ ಸಾಲ ಮಾಡಿಕೊಂಡು ಊರು ತೊರೆದಿದ್ದನು. ಫೆ.2ರಂದು ರಾತ್ರಿ ಆರುಂಡಿ ಗ್ರಾಮಕ್ಕೆ ಬಂದು ಕಮಲಮ್ಮ ಅವರ ಮನೆಯಲ್ಲಿ ಅವಿತು ಕುಳಿತು ಕೃತ್ಯ ಎಸಗಿದ್ದನು. ಕಳವು ಮಾಡಿದ ಚಿನ್ನಾಭರಣಗಳನ್ನು ಖಾಸಗಿ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಆನ್‌ಲೈನ್ ಗೇಮ್‌ಗೆ ತೊಡಗಿಸಿದ್ದನು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.