
ದಾವಣಗೆರೆ: ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಟಿಕೆಟ್‌ಗೆ ಅಲ್ಪಸಂಖ್ಯಾತ ಸಮುದಾಯ ಪಟ್ಟು ಹಿಡಿದಿದೆ. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ತೆರೆಮರೆಯ ಲಾಬಿಯಲ್ಲಿ ನಿರತರಾಗಿದ್ದಾರೆ.
‘ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ಎದುರಾದ ನಾಲ್ಕು ಚುನಾವಣೆಗಳಲ್ಲಿ (2008, 2013, 2018, 2023) ಸತತವಾಗಿ ಗೆಲುವು ಸಾಧಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ಉತ್ತರಾಧಿಕಾರಿಯಾಗಿ ಕುಟುಂಬದಿಂದಲೇ ಯಾರಾದರೂ ಕಣಕ್ಕೆ ಇಳಿಯಬಹುದೇ?’, ‘ಪಕ್ಷದ ಹೈಕಮಾಂಡ್ ಒಂದೊಮ್ಮೆ ಕುಟುಂಬದತ್ತಲೇ ಒಲವು ತೋರಿದಲ್ಲಿ ಕಣಕ್ಕೆ ಇಳಿಯುವವರು ಯಾರು?’ ಎಂಬ ಕುತೂಹಲ ಮೂಡಿದೆ.
ಸಾವಿನ ಶೋಕದಲ್ಲಿರುವ ಕುಟುಂಬ ಇನ್ನೂ ಈ ಕುರಿತು ನಿರ್ಧಾರಕ್ಕೆ ಬಂದಿಲ್ಲ. ಉಪಚುನಾವಣೆ ಬಗ್ಗೆ ಬಹಿರಂಗ ಪ್ರತಿಕ್ರಿಯೆ ನೀಡುತ್ತಿಲ್ಲ.
ಕಾಂಗ್ರೆಸ್‌ನ ಭದ್ರ ಕೋಟೆಯಾಗಿರುವ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯೇ ಪ್ರಬಲ ಎದುರಾಳಿ. ಜೆಡಿಎಸ್, ಎಸ್‌ಡಿಪಿಐ, ಸಿಪಿಐ ಸೇರಿ ಇತರ ಪಕ್ಷಗಳಿಗೆ ಇಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕವಾಗಿವೆ.
ದಶಕದಿಂದ ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ ಇಡುತ್ತಿರುವ ಮುಸ್ಲಿಂ ಸಮುದಾಯದವರು ಈ ಬಾರಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಸಮುದಾಯದ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ವಸತಿ ಸಚಿವ ಜಮೀರ್ ಅಹಮ್ಮದ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿ ಈ ಕುರಿತು ಮನವಿ ಮಾಡಿಕೊಂಡಿದ್ದಾರೆ.
‘ಶಿವಶಂಕರಪ್ಪ ಅವರ ದ್ವಿತೀಯ ಪುತ್ರ ಎಸ್.ಎಸ್. ಗಣೇಶ್ ಅಭ್ಯರ್ಥಿಯಾಗಲಿ’ ಎಂಬ ಒತ್ತಾಯವೂ ಪಕ್ಷದಲ್ಲೇ ಕೇಳಿ ಬರುತ್ತಿದೆ. ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ.ಪ್ರಭಾ ದಂಪತಿ ಪುತ್ರ ಸಮರ್ಥ್ ಹೆಸರೂ ಚರ್ಚೆಯ ಮುನ್ನೆಲೆಗೆ ಬಂದಿದೆ. ಕುಟುಂಬದ ವತಿಯಿಂದ ಆಯೋಜಿಸಿದ್ದ ನುಡಿನಮನ ಸಮಾರಂಭದಲ್ಲಿ ಸಮರ್ಥ್ ಚಟುವಟಿಕೆಯಿಂದ ಕಾಣಿಸಿಕೊಂಡಿದ್ದು ಮುನ್ಸೂಚನೆಯಂತಿದೆ.
ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಯಶವಂತರಾವ್ ಜಾಧವ್, ಬಿ.ಜಿ. ಅಜಯ್‌ಕುಮಾರ್, ಶ್ರೀನಿವಾಸ ದಾಸಕರಿಯಪ್ಪ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಪುತ್ರ ಜಿ.ಎಸ್. ಅನಿತ್‌ಕುಮಾರ್ ಹೆಸರು ಹರಿದಾಡುತ್ತಿದೆ. ‘ಇನ್‌ಸೈಟ್’ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ‘ಅಚ್ಚರಿ’ಯ ಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.