ADVERTISEMENT

ದಾವಣಗೆರೆ: ಹೆದ್ದಾರಿ ವಾಹನ ತಪಾಸಣೆ ವೇಳೆ ಲಾರಿ ಡಿಕ್ಕಿ- ಕಾನ್‌ಸ್ಟೆಬಲ್‌ ಸಾವು

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಎಆರ್‌) ಕಾನ್‌ಸ್ಟೆಬಲ್‌ ರಾಮಪ್ಪ ಪೂಜಾರಿ (33) ಎಂಬುವರು ಮಂಗಳವಾರ ಮೃತಪಟ್ಟಿದ್ದಾರೆ.

​ಪ್ರಜಾವಾಣಿ ವಾರ್ತೆ
Published 13 ಮೇ 2025, 13:02 IST
Last Updated 13 ಮೇ 2025, 13:02 IST
<div class="paragraphs"><p>ರಾಮಪ್ಪ ಪೂಜಾರಿ</p></div>

ರಾಮಪ್ಪ ಪೂಜಾರಿ

   

ದಾವಣಗೆರೆ: ತಾಲ್ಲೂಕಿನ ಹೆಬ್ಬಾಳ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರ ಟೋಲ್‌ ಬಳಿ ವಾಹನ ತಪಾಸಣೆಯ ವೇಳೆ ಲಾರಿ ಡಿಕ್ಕಿ ಹೊಡೆದು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಎಆರ್‌) ಕಾನ್‌ಸ್ಟೆಬಲ್‌ ರಾಮಪ್ಪ ಪೂಜಾರಿ (33) ಎಂಬುವರು ಮಂಗಳವಾರ ಮೃತಪಟ್ಟಿದ್ದಾರೆ.

ದಾವಣಗೆರೆ ಕಡೆಯಿಂದ ಚಿತ್ರದುರ್ಗದತ್ತ ಸಾಗುತ್ತಿದ್ದ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಈ ವೇಳೆ ವೇಗವಾಗಿ ಬಂದ ಲಾರಿಯೊಂದು ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಕಾನ್‌ಸ್ಟೆಬಲ್‌ಗೆ ಡಿಕ್ಕಿ ಹೊಡೆದಿದೆ.

ADVERTISEMENT

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಮಪ್ಪ ಪೂಜಾರಿ ಅವರನ್ನು ತಕ್ಷಣ ಎಸ್‌.ಎಸ್‌.ಹೈಟೆಕ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೇ ಕಾನ್‌ಸ್ಟೆಬಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಹಿಬ್ಬರಗಿ ಇಂಡಿ ಗ್ರಾಮದ ರಾಮಪ್ಪ ಪೂಜಾರಿ, 2016ರಲ್ಲಿ ಪೊಲೀಸ್‌ ಇಲಾಖೆ ಸೇರಿದ್ದರು. ಇತ್ತೀಚೆಗೆ ಇವರನ್ನು ಹೆದ್ದಾರಿ ಪಥ ಶಿಸ್ತು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹೆದ್ದಾರಿಯಲ್ಲಿ ಪಥ ಶಿಸ್ತು ಉಲ್ಲಂಘಿಸಿ ಸಂಚರಿಸುವ ವಾಹನಗಳನ್ನು ತಡೆದು ದಂಡ ವಿಧಿಸಲಾಗುತ್ತಿತ್ತು. ಚಾಲನಾ ಪರವಾನಗಿ, ಸೀಟ್‌ ಬೆಲ್ಟ್‌ ಪರಿಶೀಲಿಸುವ ಕಾರ್ಯವನ್ನು ಕಾನ್‌ಸ್ಟೆಬಲ್‌ ಮಾಡುತ್ತಿದ್ದರು.

‘ಟೋಲ್‌ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಲಾರಿಯೊಂದು ಬಂದಿತು. ನಿಲುಗಡೆ ಮಾಡುವಂತೆ ಕಾನ್‌ಸ್ಟೆಬಲ್‌ ರಾಮಪ್ಪ ಸೂಚಿಸಿದ್ದಾರೆ. ನಿಲುಗಡೆ ಮಾಡುವುದಾಗಿ ನಟಿಸಿದ ಚಾಲಕ, ಲಾರಿ ಸಮೇತ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಲಾರಿ ಕಾನ್‌ಸ್ಟೆಬಲ್‌ ಮೇಲೆ ಹರಿದಿದೆ. ಚಾಲಕ ಪರಾರಿಯಾಗಿದ್ದಾನೆ’ ಎಂದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.