ADVERTISEMENT

ರೈತರ ಪಂಪ್‌ಸೆಟ್‌ಗೆ ಇನ್ನು ಸೌರವಿದ್ಯುತ್‌

ಭರದಿಂದ ಸಾಗಿದ ಸೌರಶಕ್ತಿ ಉತ್ಪಾದನಾ ಘಟಕಗಳ ಕಾಮಗಾರಿ; ಕೃಷಿಕರಿಗೆ 8 ಗಂಟೆ ನಿರಂತರ ವಿದ್ಯುತ್ ಪೂರೈಕೆ ಗುರಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 5:17 IST
Last Updated 10 ಡಿಸೆಂಬರ್ 2025, 5:17 IST
<div class="paragraphs"><p>ನಲ್ಲೂರು ಬಳಿ ಸೌರ ವಿದ್ಯುತ್‌ ಉತ್ಪಾದನೆ ಆರಂಭಿಸಲು ಸಿದ್ಧಗೊಂಡಿರು ಘಟಕsbr</p></div>

ನಲ್ಲೂರು ಬಳಿ ಸೌರ ವಿದ್ಯುತ್‌ ಉತ್ಪಾದನೆ ಆರಂಭಿಸಲು ಸಿದ್ಧಗೊಂಡಿರು ಘಟಕsbr

   

ಚನ್ನಗಿರಿ/ ಸಂತೇಬೆನ್ನೂರು: ರೈತರಿಗೆ ಬೇಸಿಗೆಯಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಬೇಡಿಕೆ ಹೆಚ್ಚುವ ನಿರೀಕ್ಷೆಯಿಂದ ಚನ್ನಗಿರಿ ತಾಲ್ಲೂಕಿನ ಹಲವೆಡೆ ಸೌರ ವಿದ್ಯುತ್‌ ಉತ್ಪಾದನೆಗೆ ಬಿರುಸಿನ ಚಾಲನೆ ನೀಡಲಾಗಿದೆ.

ಈಗಾಗಲೇ ನಲ್ಲೂರಿನಲ್ಲಿ ಸೌರ ವಿದ್ಯುತ್‌ ಉತ್ಪಾದನೆ ಘಟಕದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆ ಬಾಕಿ ಇದೆ. ಹಿರೇಕೋಗಲೂರಿನಲ್ಲಿ ಕಾಮಗಾರಿ ಭರದಿಂದ ಸಾಗಿದೆ. ಸಂತೇಬೆನ್ನೂರಿನಲ್ಲಿ ಸೂಕ್ತ ನಿವೇಶನದ ಆಯ್ಕೆ ಪ್ರಗತಿಯಲ್ಲಿದೆ.

ಕೇಂದ್ರ ಸರ್ಕಾರದ ಕುಸುಮ್‌ ‘ಸಿ’ ಯೋಜನೆ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ನಲ್ಲೂರಿನಲ್ಲಿ 20 ಎಕರೆ ಜಮೀನಿನಲ್ಲಿ 5.8 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಹಿರೇಕೋಗಲೂರಿನ 26 ಎಕರೆ ಪ್ರದೇಶದಲ್ಲಿ 7.2 ಮೆಗಾ ವಾಟ್‌  ವಿದ್ಯುತ್‌ ಉತ್ಪಾದನೆಗೆ ಕಾಮಗಾರಿ ಸಾಗಿದೆ. ಸಂತೇಬೆನ್ನೂರು ಬಳಿಯ ಕಾಕನೂರು ಗೋಮಾಳದಲ್ಲಿ 40 ಎಕರೆಯಲ್ಲಿ 12.6 ಮೆಗಾ ವಾಟ್‌  ವಿದ್ಯುತ್‌ ಉತ್ಪಾದನಾ ಗುರಿ ಇದೆ. ಜಮೀನು ಗುತ್ತಿಗೆ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಒಟ್ಟು 25.6 ಮೆಗಾ ವಾಟ್‌ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.

‘ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್‌ ಪೂರೈಕೆ ಮಾಡುವ ಉದ್ದೇಶದಿಂದ ಸೌರ ವಿದ್ಯುತ್‌ ಯೋಜನೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿತ್ತು. ರಾತ್ರಿ ವೇಳೆ ಮೂರು ಫೇಸ್‌ ವಿದ್ಯುತ್‌ ನೀಡುವುದು ಅವಘಡಗಳಿಗೆ ಕಾರಣವಾಗಿದೆ. ನಿರಂತರ 7 ಗಂಟೆ ವಿದ್ಯುತ್‌ ಪ್ರಸರಣಕ್ಕೆ ಯೋಜನೆ ರೂಪಿಸಲಾಗಿದೆ. ಶಾಸಕನಾಗಿ ಆಯ್ಕೆಯಾದ ಆರಂಭದಲ್ಲಿಯೇ ರೈತರ ವಿದ್ಯುತ್‌ ಪೂರೈಕೆ ಸುಧಾರಿಸಲು ಭರವಸೆ ನೀಡಲಾಗಿತ್ತು. ಅದರಂತೆ ಮೂರು ಗ್ರಾಮದ ವ್ಯಾಪ್ತಿಯಲ್ಲಿ ವಿದ್ಯುತ್‌ ಉತ್ಪಾದನೆಗೆ ಯೋಜನೆ ರೂಪಿಸಲಾಗಿದೆ’ ಎಂದು ಶಾಸಕ ಬಸವರಾಜು ಶಿವಗಂಗಾ ಮಾಹಿತಿ ನೀಡಿದರು.

‘ಪ್ರತಿ ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆಗೆ ಮೂರು ಎಕರೆ ಜಮೀನಿನ ಅವ‍್ಯಕತೆ ಇದೆ. ತಾಲ್ಲೂಕಿನ ವಿವಿಧೆಡೆ ಜಮೀನಿನ ಲಭ್ಯತೆ ಇದ್ದಲ್ಲಿ ಇನ್ನೂ ಹೆಚ್ಚಿನ ಸೌರ ವಿದ್ಯುತ್‌ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು. ಸೋಲಾರ್‌ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಸೌರ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪನೆಗೆ ಗುತ್ತಿಗೆ ನೀಡಲಾಗಿದೆ. ರೈತರು ಜಮೀನು ನೀಡಿದರೆ ಒಪ್ಪಂದದ ಮೇರೆಗೆ ಸೌರ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸಲಾಗುವುದು. ಸೋಲಾರ್‌ ಪ್ಲೇಟ್‌ಗಳ ಕೆಳಗೆ ಬೆಳೆ ಹಾಕಬಹುದು’ ಎಂದು ಬೆಸ್ಕಾಂ ಎಇಇ ಟಿ.ನಾಗರಾಜ್‌ ಮಾಹಿತಿ ನೀಡಿದರು.

ಸಂತೇಬೆನ್ನೂರು ಸಮೀಪದ ಹಿರೇಕೋಗಲೂರಿನಲ್ಲಿ ಸೌರ ವಿದ್ಯುತ್‌ ಉತ್ಪಾದನಾ ಘಟಕ ಕಾಮಗಾರಿ ಪ್ರಗತಿಯಲ್ಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.