ADVERTISEMENT

ದಾವಣಗೆರೆ: ನಗರದ ಆರೋಗ್ಯ ಕೇಂದ್ರ ಹುಡುಕಿಕೊಡಿ ಪ್ಲೀಸ್...

ಬಾಡಿಗೆ ಕಟ್ಟಡದಲ್ಲಿ ನಡೆಯುವ ಕೇಂದ್ರಗಳು* ಒಂದೇ ಕೊಠಡಿಯಲ್ಲಿ ಆಸ್ಪತ್ರೆ* ಸಿಬ್ಬಂದಿ ಸಮಸ್ಯೆ

ಚಂದ್ರಶೇಖರ ಆರ್‌.
Published 19 ಜನವರಿ 2020, 19:30 IST
Last Updated 19 ಜನವರಿ 2020, 19:30 IST
 ದಾವಣಗೆರೆಯ ವಿನೋಬನಗರದ ಮಳಿಗೆಯೊಂದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಡೆಯುತ್ತಿರುವುದುಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
 ದಾವಣಗೆರೆಯ ವಿನೋಬನಗರದ ಮಳಿಗೆಯೊಂದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಡೆಯುತ್ತಿರುವುದುಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ನಗರದ ಬಹುತೇಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕ ಸೌಲಭ್ಯಗಳಿಲ್ಲ.ಬಾಡಿಗೆ ಕಟ್ಟಡದಲ್ಲಿ ನಡೆಯುವ ಕೇಂದ್ರಗಳು, ಸಿಬ್ಬಂದಿ ಕೊರತೆ, ಒಮ್ಮೆ ಬಂದರೆ ಮತ್ತೆ ಬಾರದ ವೈದ್ಯರು, ವೈದ್ಯರ ಗೈರುಹಾಜರಿಯಲ್ಲಿ ಚಿಕಿತ್ಸೆ ನೀಡುವ ಫಾರ್ಮಸಿಸ್ಟ್‌ಗಳು, ಚಿಕ್ಕ ಕೊಠಡಿಯಲ್ಲೇ ಚಿಕಿತ್ಸೆ ನೀಡುವ ಅನಿವಾರ್ಯತೆ, ಅಲ್ಲೇ ಎಲ್ಲ ಔಷಧ, ಲಸಿಕೆಗಳ ದಾಸ್ತಾನು, ಚಿಕಿತ್ಸಾ ಸಲಕರಣೆಗಳನ್ನು ಇಡಬೇಕಾದ ಸ್ಥಿತಿ, ಮಹಿಳೆಯರಿಗೂ, ಪುರುಷರಿಗೂ ಒಂದೇ ಬೆಡ್‌, ಕೊಠಡಿ ಹೊರವಲಯದಲ್ಲೇ ರೋಗಿಗಳಿಗೆ ಮೀಸಲಾದ ಹಾಸಿಗೆಗಳು... ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುಃಸ್ಥಿತಿಗೆ ಇವೆಲ್ಲ ಕನ್ನಡಿ ಹಿಡಿಯುತ್ತವೆ.

ಕೆಲವೆಡೆ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವುದೇ ಗೊತ್ತಾಗುವುದಿಲ್ಲ. ಯಾವುದೋ ಬಾಡಿಗೆ ಕಾಂಪ್ಲೆಕ್ಸ್‌ನಲ್ಲಿ ನಡೆಯುವ ಕಾರಣ ಕೇಂದ್ರ ಅಲ್ಲಿರುವ ಬಗ್ಗೆ ಸ್ಥಳೀಯರಿಗೇ ತಿಳಿದಿಲ್ಲ. ಹುಡುಕಿಕೊಂಡು ಹೋಗಬೇಕಾದ ಸ್ಥಿತಿ ಇದೆ.ಆಸ್ಪತ್ರೆಗಳು ಕೆಲವಡೆ ಸಂಜೆಯಾಗುತ್ತಲೇ ಬಾಗಿಲು ಬಂದ್‌ ಆಗುತ್ತವೆ.

ಆಜಾದ್‌ ನಗರ, ಬಾಷಾ ನಗರ, ವಿನೋಬ ನಗರ, ನಿಟುವಳ್ಳಿ, ಎಸ್‌.ಎಂ. ಕೃಷ್ಣ ನಗರ, ಭರತ್‌ ಕಾಲೊನಿ ಸೇರಿ ನಗರದ 9 ಕಡೆ ಇಂತಹ ಆರೋಗ್ಯ ಕೇಂದ್ರಗಳಿವೆ.

ADVERTISEMENT

ವಿನೋಬನಗರದ ಕೇಂದ್ರ ವಾಣಿಜ್ಯ ಮಳಿಗೆ ಸಂಕೀರ್ಣದಲ್ಲಿರುವ ಕಾರಣ ಅದು ಆರೋಗ್ಯ ಕೇಂದ್ರ ಎಂಬುದೇ ಬಹುತೇಕರಿಗೆ ತಿಳಿದಿಲ್ಲ. ಕೆಲವೆಡೆ ಪಾಳಿಯಲ್ಲಿ ಆಯುರ್ವೇದ ವೈದ್ಯರು ರಾತ್ರಿ 8ರವರೆಗೆ ಕಾರ್ಯನಿರ್ವಹಿಸುವುದೇ ಸಮಾಧಾನದ ಸಂಗತಿ.

ಪ್ರತ್ಯೇಕ ಹಾಸಿಗೆ ಇರದ ಕಾರಣ ತುರ್ತು ಚಿಕಿತ್ಸೆ ನೀಡಲು ಆಗದ ಪರಿಸ್ಥಿತಿ ಇದೆ. ಹೊರಗಡೆಯೇ ಹಾಸಿಗೆ. ಚಿಕ್ಕ ಮಂಚದ ಮೇಲೆ ಔಷಧಗಳು, ಲಸಿಕೆಗಳನ್ನು ಇಡಬೇಕಾದ ಅನಿವಾರ್ಯತೆ ಇದೆ. ಪ್ರತ್ಯೇಕ ಕೊಠಡಿ ಇದ್ದರೆ ರೋಗಿಗಳನ್ನು ಸರಿಯಾಗಿ ತಪಾಸಣೆ ಮಾಡಬಹುದು ಎಂಬುದನ್ನು ವೈದ್ಯಾಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಪ್ರತಿದಿನ 60ಕ್ಕೂ ಹೆಚ್ಚು ರೋಗಿಗಳು ಪ್ರತಿ ಕೇಂದ್ರದಲ್ಲಿ ತಪಾಸಣೆಗೆ ಬರುತ್ತಾರೆ. ಜ್ವರ, ನೆಗಡಿ, ರಕ್ತದೊತ್ತಡ ಪರೀಕ್ಷೆಗೆ, ಜಿಲ್ಲಾಸ್ಪತ್ರೆಯಲ್ಲಿ ಬರೆದು ಕೊಟ್ಟ ಚುಚ್ಚುಮದ್ದು ಪಡೆಯಲು, ಗರ್ಭಿಣಿಯರು, ಬಾಣಂತಿಯರು ನಿಯಮಿತ ತಪಾಸಣೆಗೆ ಈ ಕೇಂದ್ರಗಳಿಗೆ ಬರುತ್ತಾರೆ. ಜಿಲ್ಲಾ ಆಸ್ಪತ್ರೆ ದೂರವಾಗುವ ಕಾರಣ ಬಹುತೇಕ ಸ್ಥಳೀಯರು, ಕೂಲಿ ಕಾರ್ಮಿಕರು ಈ ಕೇಂದ್ರಗಳಿಗೆ ಬರುತ್ತಾರೆ.

ಎಲ್ಲ ಸೌಲಭ್ಯ ಇದ್ದರೂ ಕಟ್ಟಡ ಇಲ್ಲ. ಪ್ರಯೋಗಾಲಯ ಒಂದು ಕಡೆ, ಔಷಧ ಉಗ್ರಾಣ ಇನ್ನೊಂದೆಡೆ, ಲಸಿಕಾ ಕೊಠಡಿ ಮತ್ತೊಂದೆಡೆ... ಹೀಗೆ ಆರೋಗ್ಯ ಕೇಂದ್ರ ಹೀಗೂ ಇರಬಹುದೇ ಎಂದು ಅನಿಸುವಂತಿರುವುದು ವಿಪರ್ಯಾಸ.

ನಿಟುವಳ್ಳಿಯ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲ. ಇಲ್ಲಿ ಫಾರ್ಮಸಿಸ್ಟ್‌ಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವೆಡೆ ವೈದ್ಯರು ಸಮರ್ಪಕ ಚಿಕಿತ್ಸೆ ನೀಡುವುದಿಲ್ಲ ಎಂಬ ಆರೋಪ ಸಾರ್ವಜನಿಕರದ್ದು. ಕೆಲವೆಡೆ ವೈದ್ಯರು ಉತ್ತಮ ಚಿಕಿತ್ಸೆ ನೀಡುವುದನ್ನು ಕಂಡು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದು ಸಮಾಧಾನದ ಸಂಗತಿ. ಆದರೆ ಇಂತಹ ಕಡೆ ವೈದ್ಯರಿಗೆ ಸಮರ್ಪಕ ಸೌಲಭ್ಯಗಳಿಲ್ಲ.

ಆವರಗೆರೆ ಸುತ್ತಮುತ್ತ ಹಲವು ಹಳ್ಳಿಗಳು ಬರುತ್ತವೆ. ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಮಾತ್ರ ಇದ್ದಾರೆ. ಕಟ್ಟಡದ ಇದೆ ಹಿಂದೆ ವಿಶಾಲ ಜಾಗವೂ ಇದೆ. ಆದರೆ ವೈದ್ಯರು, ಹೆಚ್ಚಿನ ದಾದಿಯರು. ಇಲ್ಲ. ಇರುವುದು ಒಬ್ಬ ನರ್ಸ್‌ ಮಾತ್ರ. ಈ ಆರೋಗ್ಯ ಕೇಂದ್ರಕ್ಕೆ ಸೌಲಭ್ಯ ಕಲ್ಪಿಸಿ, ವೈದ್ಯರು ಹೆಚ್ಚಿನ ಸಿಬ್ಬಂದಿ ನೇಮಿಸುವಂತೆ ಹಲವು ಹೋರಾಟ, ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಗರ್ಭಿಣಿಯರು, ಬಾಣಂತಿಯರು ಪರದಾಡುವಂತಾಗಿದೆ. ಎಲ್ಲದಕ್ಕೂ ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ 7 ಕಿ.ಮೀ. ದೂರದ ಐಗೂರು ಕೇಂದ್ರಕ್ಕೆ ಹೋಗಬೇಕು.

ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ನರ್ಸ್‌ ಇರುವ ಕಾರಣ ಸಮಸ್ಯೆಯಾಗಿದೆ. ಕೂಲಿ ಕಾರ್ಮಿಕರು, ಬಡವರು ಇರುವ ಕಾರಣ ಕೇಂದ್ರಕ್ಕೆ ವೈದ್ಯರು, ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ವೆಂಕಟೇಶ್‌ ಒತ್ತಾಯಿಸಿದರು.

ನಿಟುವಳ್ಳಿಯ ಕೇಂದ್ರ ಕಾಂಪ್ಲೆಕ್ಸ್‌ನ ಒಳಗಡೆ ಇರುವ ಕಾರಣ ಬಹುತೇಕರಿಗೆ ಅದು ಆಸ್ಪತ್ರೆ ಎಂದು ತಿಳಿಯವುದೇ ಇಲ್ಲ. ಅದನ್ನು ಮುಖ್ಯರಸ್ತೆಯ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಬಾಬಣ್ಣ, ಮಲ್ಲಣ್ಣ, ಮೀನಾಕ್ಷಮ್ಮ ಒತ್ತಾಯಿಸಿದರು.

ಹೆಚ್ಚಿನ ಜನಸಂಖ್ಯೆ ಇರುವ ಕಾರಣ ಅಗತ್ಯವಾಗಿ ಇಲ್ಲಿ ಕೇಂದ್ರ ಬೇಕು. ಚಿಕ್ಕ ಆರೋಗ್ಯ ಸಮಸ್ಯೆಗೂ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಹೋಗುವುದು ಅನಿವಾರ್ಯವಾಗಿದೆ. ಈಗಿನ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಆವರಗೆರೆ ವಾಸು ಒತ್ತಾಯಿಸುತ್ತಾರೆ.

ಸೌಲಭ್ಯ ಕಲ್ಪಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ನೆರಳು ಬೀಡಿ ಕಾರ್ಮಿಕರ ಸಂಘದ ಜಬೀನಾ ಖಾನಂ ಒತ್ತಾಯಿಸುತ್ತಾರೆ.

ಹಂತ ಹಂತವಾಗಿ ಅಭಿವೃದ್ಧಿ

ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಕಾರಣ ಹೆಚ್ಚಿನ ಸೌಲಭ್ಯ ನಿರೀಕ್ಷಿಸುವಂತಿಲ್ಲ. ಕೆಲವೆಡೆ ಸಮಸ್ಯೆ ಇರುವುದು ನಿಜ. ಅದನ್ನು ಶೀಘ್ರ ಪರಿಹರಿಸಲಾಗುವುದು. ಕೇಂದ್ರದಲ್ಲಿ ಎಂಬಿಬಿಎಸ್‌ ಮಾಡಿರುವ ಒಬ್ಬ ವೈದ್ಯರು ಮಾತ್ರ ಇರುತ್ತಾರೆ. ಅವರಿಗೆ ಸಹಾಯಕ ದಾದಿಯರು ಇರುತ್ತಾರೆ. ಚಿಕ್ಕ ಕಾಯಿಲೆಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರಸ್ವಾಮಿ ಹೇಳಿದರು.

ನಿಟುವಳ್ಳಿಯ ಆರೋಗ್ಯ ಕೇಂದ್ರದ ವೈದ್ಯರು ರಜೆ ಮೇಲೆ ಹೋಗಿದ್ದಾರೆ. ಅಲ್ಲಿ ಕಾಯಂ ವೈದ್ಯರು ಇಲ್ಲ. ಈ ಬಗ್ಗೆ ಗಮನಹರಿಸಲಾಗುವುದು. ಆವರಗೆರೆ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಯಾವುದೇ ಪ್ರಸ್ತಾವ ಇಲ್ಲ.9 ಆರೋಗ್ಯ ಕೇಂದ್ರಗಳಲ್ಲೂ ಹಂತ ಹಂತವಾಗಿ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಅಂಕಿ ಅಂಶಗಳು..

9

ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು

60ಕ್ಕೂ ಹೆಚ್ಚು

ಪ್ರತಿದಿನ ತಪಾಸಣೆಗೆ ಬರುವ ಜನರು

90ಕ್ಕೂ ಹೆಚ್ಚು

ವಿನೋಬನಗರದ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನಕ್ಕೆ ಬರುವ ಜನರು

50000: 1

ಜನಸಂಖ್ಯೆಗೆ ಅನುಗುಣವಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅನುಪಾತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.