ನ್ಯಾಮತಿ: ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಶಾಖೆಯಲ್ಲಿ ವರ್ಷದ ಹಿಂದೆ ನಡೆದಿದ್ದ ದರೋಡೆ ಪ್ರಕರಣದಲ್ಲಿ ಆರೋಪಿಗಳಿಂದ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಪೊಲೀಸರು ಶುಕ್ರವಾರ ಬ್ಯಾಂಕ್‌ಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಕೆಲ ಗ್ರಾಹಕರಿಗೆ ಚಿನ್ನಾಭರಣಗಳನ್ನು ಸಾಂಕೇತಿಕವಾಗಿ ವಿತರಿಸಿ ಕಾನೂನು ದೃಷ್ಟಿಯಿಂದ ಮರಳಿ ಪಡೆಯಲಾಯಿತು.
ಇಲ್ಲಿಗೆ ಸಮೀಪದ ಸುರಹೊನ್ನೆಯ ಬನಶಂಕರಿ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಿತು. ನೈಜ ವಾರಸುದಾರರನ್ನು ಪತ್ತೆ ಮಾಡಿ ಗ್ರಾಹಕರಿಗೆ ವಿತರಿಸುವ ಕಾರ್ಯ ಬಾಕಿ ಇದೆ.
ಎಸ್‌ಬಿಐನ ಪಟ್ಟಣ ಶಾಖೆಯಲ್ಲಿ 2024ರ ಅಕ್ಟೋಬರ್ 26ರಂದು ಚಿನ್ನಾಭರಣ ದರೋಡೆ ನಡೆದಿತ್ತು. 509 ಗ್ರಾಹಕರಿಗೆ ಸೇರಿದ್ದ 17 ಕೆ.ಜಿ. 705 ಗ್ರಾಂ ಚಿನ್ನಾಭರಣವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದರು. ಪ್ರಕರಣ ಭೇದಿಸಿದ್ದ ಪೊಲೀಸರು, ಮಾರ್ಚ್ 27 ರಂದು 6 ಆರೋಪಿಗಳನ್ನು ಬಂಧಿಸಿ 17ಕೆ.ಜಿ 100 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದರು.
ಜಪ್ತಿ ಮಾಡಿದ ಚಿನ್ನಾಭರಣದಲ್ಲಿ 1,246 ಬಗೆಯ ಆಭರಣಗಳಿವೆ. ಇದರಲ್ಲಿ 300 ಅಭರಣಗಳ ವಾರಸುದಾರರನ್ನು ಮಾತ್ರ ಗುರುತಿಸಲಾಗಿದೆ. ಉಳಿದ ಆರಭಣಗಳ ಪತ್ತೆ ಕಾರ್ಯವನ್ನು ಎಸ್‌ಬಿಐ ಮಾಡಲಿದೆ. ಪತ್ತೆ ಮತ್ತು ಗ್ರಾಹಕರಿಗೆ ವಿತರಿಸುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸಹಕಾರ ನೀಡುವುದಾಗಿ ಪೊಲೀಸರು ಆಶ್ವಾಸನೆ ನೀಡಿದರು.
‘ನ್ಯಾಮತಿ ಬ್ಯಾಂಕಿನ ಕಳವು ಪ್ರಕರಣ ಪತ್ತೆ ಹಚ್ಚುವ ಕೆಲಸದಲ್ಲಿ ಪೊಲೀಸ್ ಇಲಾಖೆಗೆ ಉತ್ತಮ ಅನುಭವವಾಗಿದೆ. ಬ್ಯಾಂಕಿನ ಅಧಿಕಾರಿಗಳಿಗೆ ಚಿನ್ನಾಭರಣ ಹಸ್ತಾಂತರ ಮಾಡಿದ್ದು, ಆದಷ್ಟು ಬೇಗನೆ ಅಧಿಕಾರಿಗಳು ನೈಜ ವಾರಸುದಾರರನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಾರೆ. ಅಲ್ಲಿಯವರೆಗೆ ಗ್ರಾಹಕರು ತಾಳ್ಮೆಯಿಂದ ಸಹಕರಿಸಬೇಕು. ಜಿಲ್ಲೆಯ ಬ್ಯಾಂಕ್‌ಗಳ ಭದ್ರತೆ ಬಗ್ಗೆ ಇಲಾಖೆಯಿಂದ ಕ್ರಮ ಕೈಗೊಂಡಿದೆ’ ಎಂದು ಎಸ್‌ಪಿ ಉಮಾ ಪ್ರಶಾಂತ್ ತಿಳಿಸಿದರು.
ಬ್ಯಾಂಕ್ ಅಧಿಕಾರಿ ಸುನೀಲ್ ಕುಮಾರ್, ‘ಪೊಲೀಸರಿಂದ ಪಡೆದಿರುವ ಚಿನ್ನಾಭರಣ ವಿಂಗಡಣೆ ಮಾಡಿ ವಾರಸುದಾರರನ್ನು ಗುರುತಿಸಲು ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಗ್ರಾಹಕರು ಸಹಕಾರ ನೀಡಬೇಕು. ನ್ಯಾಯಾಲಯದ ಆದೇಶದಂತೆ ವಶಪಡಿಸಿಕೊಂಡಿರುವ ಆಭರಣಗಳನ್ನು ಕೋರ್ಟ್ ಕೇಳಿದಾಗ ಹಾಜರು ಪಡಿಸಬೇಕಾಗುತ್ತದೆ. ಅದರ ಬಗ್ಗೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.
ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸ್ಯಾಮ್ ವರ್ಗಿಸ್, ತಹಶೀಲ್ದಾರ್ ಎಂ.ಪಿ. ಕವಿರಾಜ, ಬ್ಯಾಂಕ್ ವ್ಯವಸ್ಥಾಪಕ ಸುನೀಲ್‌ಕುಮಾರ್ ಯಾದವ್, ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ಹಾಜರಿದ್ದರು.
ಆಭರಣಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದಿದ್ದೆ. ಚಿನ್ನಾಭರಣ ಬ್ಯಾಂಕಿನಿಂದ ಕಳವಾದ ಬಳಿಕ ಆತಂಕವಾಗಿತ್ತು. ಆಭರಣ ಮರಳಿ ಸಿಗುವ ಭರವಸೆ ಮೂಡಿದೆನರಸಮ್ಮ ಗ್ರಾಹಕಿ
ಅಡವಿಡುವ ಚಿನ್ನಾಭರಣಕ್ಕೆ ಬ್ಯಾಂಕ್ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಬ್ಯಾಂಕ್ ಸುರಕ್ಷಿತ ಎಂಬ ಭಾವನೆ ಮೂಡಿಸಬೇಕು. ಚಿನ್ನಾಭರಣ ಪತ್ತೆ ಮಾಡಿದ ಪೊಲೀಸರ ಕಾರ್ಯ ಶ್ಲಾಘನೀಯಎನ್.ನಾಗರಾಜಪ್ಪ ನಿವೃತ್ತ ಉಪ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.