ADVERTISEMENT

ದಾವಣಗೆರೆ: ‘ಕಾಂತಾರ’ ಮುಗಿಯದ ಕಾತರ, 4 ವಾರ ಕಳೆದರೂ ಚಿತ್ರಮಂದಿರಗಳು ಹೌಸ್‌ಫುಲ್‌

ಬಾಲಕೃಷ್ಣ ಪಿ.ಎಚ್‌
Published 26 ಅಕ್ಟೋಬರ್ 2022, 4:37 IST
Last Updated 26 ಅಕ್ಟೋಬರ್ 2022, 4:37 IST
ಕಾಂತಾರ ಚಿತ್ರದ ಕಟೌಟ್‌ ಮುಂದೆ ವೀಕ್ಷಕರು
ಕಾಂತಾರ ಚಿತ್ರದ ಕಟೌಟ್‌ ಮುಂದೆ ವೀಕ್ಷಕರು   

ದಾವಣಗೆರೆ: ರಾಜ್ಯದಾದ್ಯಂತ ಎಲ್ಲ ದಾಖಲೆಗಳನ್ನೂ ಪುಡಿಗಟ್ಟಿ ಮುನ್ನುಗ್ಗುತ್ತಿರುವ ‘ಕಾಂತಾರ’ ಚಲನಚಿತ್ರವು ದಾವಣಗೆರೆಯಲ್ಲೂ ಎರಡು ಚಿತ್ರ ಮಂದಿರಗಳಲ್ಲಿ ‘ಹೌಸ್‌ಫುಲ್‌’ ಪ್ರದರ್ಶನ ಕಾಣುವುದು ಮುಂದುವರಿದಿದೆ. ನಗರದಲ್ಲಿ ಈಗಾಗಲೇ 1.20 ಲಕ್ಷ ಜನ ಚಿತ್ರ ವೀಕ್ಷಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ‘ಸ್ಟಾರ್‌’ ನಟರ ಚಿತ್ರಗಳು ಎರಡು ಅಥವಾ ಮೂರು ವಾರ ‘ಹೌಸ್‌ಫುಲ್‌’ ಇರುತ್ತವೆ. ನಂತರ ಪ್ರೇಕ್ಷಕರ ಸಾಲು ಕ್ಷೀಣಿಸುತ್ತದೆ. ಆದರೆ ‘ಕಾಂತಾರ’ ಬಿಡುಗಡೆಯಾಗಿ 25 ದಿನ ಕಳೆದರೂ ಈಗಲೂ ‘ಹೌಸ್‌ಫುಲ್‌’ ಪ್ರದರ್ಶನ ಮುಂದುವರಿದಿದೆ.

‘ಬಹುತೇಕರು ಆನ್‌ಲೈನ್‌ ಮೂಲಕವೇ ಟಿಕೆಟ್‌ ಬುಕ್ ಮಾಡುತ್ತಿದ್ದಾರೆ. ಬೆಳಗಿನ ಪ್ರದರ್ಶನಕ್ಕೆ ಮಾತ್ರ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಕಡಿಮೆ ಇರುತ್ತದೆ. ನಾಲ್ಕು ವಾರ ಕಳೆದರೂ ಪ್ರೇಕ್ಷಕರ ದಂಡು ಲಗ್ಗೆ ಇಡುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಸತತವಾಗಿ ಇಷ್ಟು ದಿನ ಹೌಸ್‌ಫುಲ್‌ ಪ್ರದರ್ಶನ ಕಂಡಿರುವ, ಮಹಿಳೆಯರು, ಮಕ್ಕಳನ್ನು ಆಕರ್ಷಿಸುತ್ತಿರುವ ಅಪರೂಪದ ಚಿತ್ರವಿದು’ ಎಂದು ನಗರದ ಗೀತಾಂಜಲಿ ಚಿತ್ರಮಂದಿರದ ಮುದ್ದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ನಿತ್ಯವೂ ನಾಲ್ಕು ಪ್ರದರ್ಶನ ಇವೆ. ಇಲ್ಲಿಯವರೆಗೆ ನಮ್ಮ ಚಿತ್ರಮಂದಿರದಲ್ಲಿ 70,000 ಜನ ಚಿತ್ರ ವೀಕ್ಷಿಸಿದ್ದಾರೆ. ಇನ್ನೂ ಕನಿಷ್ಠ ಒಂದು ತಿಂಗಳು ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಯಾವುದೇ ನಟರ ಚಿತ್ರ ಬಿಡುಗಡೆಯಾದಾಗ ಚಿತ್ರ ನೋಡುವ ಒಂದು ಅಭಿಮಾನಿಗಳ ಗುಂಪು ಇರುತ್ತದೆ. ಅವರು ಈಗಾಗಲೇ ಚಿತ್ರವನ್ನು ನೋಡಿಯಾಗಿದೆ. ಈಗ ಕುಟುಂಬಸಮೇತ ಬಂದು ನೋಡುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ಎಸ್‌.ಎಸ್‌. ಮಾಲ್‌ ‘ಮೂವಿ ಟೈಮ್‌’ನ ಪರಮೇಶ್‌ ಮಾಹಿತಿ ನೀಡಿದರು.

ದೈವವು ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಕಥೆಯ ಈ ಚಿತ್ರವನ್ನು ಹೊಂಬಾಳೆ ಫಿಲಮ್ಸ್‌ ನಿರ್ಮಿಸಿದೆ. ಆ ಬ್ಯಾನರ್‌ ಅಡಿ ಇಲ್ಲಿವರೆಗೆ ನಿರ್ಮಿಸಿರುವ ಎಲ್ಲ ಚಿತ್ರಗಳ ದಾಖಲೆಯನ್ನೂ ಹಿಂದಿಕ್ಕಿ ಈ ಚಿತ್ರ ಪ್ರದರ್ಶನಗೊಳ್ಳುತ್ತಿದೆ.

‘ಎಲ್ಲರೂ ‘ಕಾಂತಾರ’ ಚಿತ್ರದ ಬಗ್ಗೆಯೇ ಮಾತನಾಡುತ್ತಿದ್ದಾರೆ. ನಾನೂ ನೋಡಬೇಕು. ವಾರದ ಹಿಂದೆ ಹೋಗಬೇಕು ಎಂದು ಪ್ರಯತ್ನಿಸಿದಾಗ ಟಿಕೆಟ್‌ ಸಿಗಲಿಲ್ಲ. ದೀಪಾವಳಿ ಮುಗಿದ ಮೇಲೆ ಹೋಗುವೆ’ ಎಂದು ನಿಟುವಳ್ಳಿಯ ಮಹಾಂತೇಶ್‌ ಕೆ. ತಿಳಿಸಿದರು.

‘ಕಾಂತಾರ ಚಿತ್ರವನ್ನು ನೋಡಿದ್ದೇನೆ. ಆರಂಭದಿಂದ ಅಂತ್ಯದವರೆಗೆ ಹಿಡಿದಿಟ್ಟುಕೊಂಡಿದ್ದ ಚಿತ್ರ ಇದು. ರಾಜ್ಯ ಮಾತ್ರವಲ್ಲ, ದೇಶದ ಎಲ್ಲ ಕಡೆ ಈ ಚಿತ್ರ ಓಡುತ್ತಿದೆ. ಒಮ್ಮೆ ನೋಡಿದವರು ಮತ್ತೊಮ್ಮೆ ನೋಡಬೇಕು ಎಂದನ್ನಿಸುವ, ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದ ಚಿತ್ರ ಇದು’ ಎಂದು ಕೆಟಿಜೆ ನಗರದ ರವಿ ಚಿತ್ರದ ಬಗ್ಗೆ ಸಂಭ್ರಮದ ಅಭಿಪ್ರಾಯ ವ್ಯಕ್ತಪಡಿಸಿದರು.

ನಿರ್ಮಾಪಕರಿಗೆ ಹುಮ್ಮಸ್ಸು
ಓಟಿಟಿ ವೇದಿಕೆ ಕ್ರಿಯಾಶೀಲವಾದ ನಂತರ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುವುದೇ ಕಡಿಮೆಯಾಗಿದೆ. ಮಳೆ, ಹಬ್ಬಗಳ ಸಾಲು, ಕ್ರಿಕೆಟ್‌ ಪಂದ್ಯಾವಳಿಗಳ ನಡುವೆಯೂ ‘ಕಾಂತಾರ’ ಯಶಸ್ವಿಯಾಗಿ ಮುನ್ನಡೆದಿರುವುದು ಸದಭಿರುಚಿಯ ಚಿತ್ರ ನಿರ್ಮಿಸುವ ಸ್ಯಾಂಡಲ್‌ವುಡ್‌ ನಿರ್ಮಾಪಕರಿಗೆ ಹುಮ್ಮಸ್ಸು ತುಂಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.