ADVERTISEMENT

ದಾವಣಗೆರೆ: ಮಳೆಗೆ ಕೆಪಿಟಿಸಿಎಲ್ ಕಟ್ಟಡ ಜಲಾವೃತ; ಇಬ್ಬರು ಸಿಬ್ಬಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 4:58 IST
Last Updated 18 ಜುಲೈ 2021, 4:58 IST
ಕೆಪಿಟಿಸಿಎಲ್ ಸಿಬ್ಬಂದಿಯನ್ನು ರಕ್ಷಿಸುತ್ತಿರುವುದು
ಕೆಪಿಟಿಸಿಎಲ್ ಸಿಬ್ಬಂದಿಯನ್ನು ರಕ್ಷಿಸುತ್ತಿರುವುದು   

ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಇಲ್ಲಿನ ಕಾಡಜ್ಜಿ–ಆಲೂರು ಹಳ್ಳ ಭರ್ತಿಯಾಗಿದೆ. ಕಾಡಜ್ಜಿಯ ಕೆಪಿಟಿಸಿಎಲ್ ಉಪಕೇಂದ್ರದ ಕಟ್ಟಡದಲ್ಲಿ ನೀರು ತುಂಬಿದ್ದು, ಅಲ್ಲಿ ಸಿಲುಕಿದ್ದ ಇಬ್ಬರು ಸಿಬ್ಬಂದಿಯನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಿಸಿದ್ದಾರೆ.

ಶನಿವಾರ ಸಂಜೆಯಿಂದಲೇ ಶುರುವಾರ ಮಳೆ ಮಧ್ಯರಾತ್ರಿಯವರೆಗೂ ಧಾರಾಕಾರ ಸುರಿದ ಪರಿಣಾಮ ಕಾಡಜ್ಜಿಯಿಂದ 1.5 ಕಿ.ಮೀ ದೂರದಲ್ಲಿದ್ದ ಕೆಪಿಟಿಸಿಎಲ್ ಉಪಕೇಂದ್ರದ ಕಟ್ಟಡ ಮುಳುಗಡೆಯಾಗಿದೆ. ಈ ವೇಳೆ ಕಚೇರಿಯಲ್ಲಿ ಸಿಲುಕಿದ್ದ ಸ್ಟೇಷನ್ ಆಪರೇಟರ್ ಸಂತೋಷ್‌ಕುಮಾರ್ ಹಾಗೂ ಸಹಾಯಕ ಕೃಷ್ಣಪ್ರಸಾದ್ ಅವರನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ನಿರಂತರ ಎರಡು ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಕೆಪಿಟಿಸಿಎಲ್ ಸಿಬ್ಬಂದಿ ಸಿಲುಕಿರುವ ವಿಷಯವನ್ನು ಗ್ರಾಮಸ್ಥರು ಮಧ್ಯರಾತ್ರಿ ಒಂದು ಗಂಟೆಗೆ ತಿಳಿಸಿದ್ದಾರೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ನೇತೃತ್ವದಲ್ಲಿ ಹೊರಟ ತಂಡವು ಗ್ರಾಮಸ್ಥರ ಸಹಾಯ ಪಡೆದು ಕಾಡಜ್ಜಿಯ ಕೃಷಿ ಕೇಂದ್ರದವರೆಗೂ ಹೊರಟಿತು. ಕೃಷಿ ಕೇಂದ್ರದ ಬಳಿ ಮಳೆಯಿಂದಾಗಿ ಕಾಡಜ್ಜಿ ಹಳ್ಳ ತುಂಬಿದ್ದು, ಹಳ್ಳದಿಂದ 100 ಮೀಟರ್ ದೂರ ಇದ್ದ ಕೆಪಿಟಿಸಿಎಲ್ ಉಪಕೇಂದ್ರದ ಕಟ್ಟಡಕ್ಕೆ ಬರಲು ಗ್ರಾಮಸ್ಥರು ಹಿಂದೇಟು ಹಾಕಿದರು.

ADVERTISEMENT

ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷತಾ ಜಾಕೆಟ್ ಮೂಲಕ ಹಳ್ಳವನ್ನು ದಾಟಿ ಉಪಕೇಂದ್ರದ ಕಟ್ಟಡದಲ್ಲಿ ಇದ್ದ ಸಿಬ್ಬಂದಿಯನ್ನು ಹೊರಗೆ ಬರುವಂತೆ ಕರೆದರು. ಸಂತೋಷ್‌ ಕುಮಾರ್ ಹಾಗೂ ಕೃಷ್ಣಪ್ರಸಾದ್ 'ಸರ್ ಇಲ್ಲಿ ಹಾವುಗಳು ಇವೆ. ಭಯವಾಗುತ್ತಿದೆ. ನೀವೇ ಇಲ್ಲಿಗೆ ಬನ್ನಿ' ಎಂದು ಮನವಿ ಮಾಡಿದ್ದಾರೆ. ಆ ಬಳಿಕ ಅಗ್ನಿಶಾಮಕ ದಳದ ಒಬ್ಬರಿಗೆ ಹಗ್ಗದಿಂದ ಕಟ್ಟಿ ಸುರಕ್ಷತಾ ಜಾಕೆಟ್ ಧರಿಸಿ ಕಟ್ಟಡದ ಒಳಕ್ಕೆ ಕಳುಹಿಸಲಾಯಿತು. ಉಳಿದ ಸಿಬ್ಬಂದಿ ಅವರಿಗೆ ಸಹಾಯ ಮಾಡಿದರು. ಸಂತೋಷ್‌ಕುಮಾರ್ ಹಾಗೂ ಕೃಷ್ಣಪ್ರಸಾದ್ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು.

ಅಗ್ನಿಶಾಮಕದ ದಳದ ಸಿಬ್ಬಂದಿ ಅಶೋಕನಾಯ್ಕ, ಪರಶುರಾಮ್, ಚಂದ್ರೇಗೌಡ, ಆಂಜನೇಯ ತಂಡದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.