ದಾವಣಗೆರೆ: ಸ್ಥಳೀಯವಾಗಿ ಉತ್ಪಾದನೆಯಾಗುವ ಜೇನುತುಪ್ಪಕ್ಕೆ ಸರ್ಕಾರ ‘ಬ್ರ್ಯಾಂಡ್’ ಮೌಲ್ಯ ನೀಡಿದ್ದು, ರಾಜ್ಯದಲ್ಲಿ ಜೇನು ಕೃಷಿಯು ಉದ್ಯಮದ ರೂಪ ಪಡೆಯುವ ಎಲ್ಲ ಸಾಧ್ಯತೆಗಳಿವೆ.
ಕೃಷಿಕರು ಉತ್ಪಾದಿಸುವ ಜೇನನ್ನು ಸರ್ಕಾರ ನೋಂದಾಯಿಸಿರುವ ‘ಝೇಂಕಾರ’ ಹೆಸರಿನ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ತೋಟಗಾರಿಕೆ ಇಲಾಖೆಯು ಜಿಲ್ಲೆಯಲ್ಲೂ ಜೇನು ಕೃಷಿಕರನ್ನು ಪ್ರೋತ್ಸಾಹಿಸುತ್ತಿದೆ.
ದಾವಣಗೆರೆ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಜೇನು ಉದ್ಯಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ‘ಮಧುಬನ’ ಹೆಸರಿನ ಯೋಜನೆಯನ್ನು ಎರಡು ವರ್ಷಗಳ ಹಿಂದೆ ಜಾರಿಗೊಳಿಸಿದೆ. ಚನ್ನಗಿರಿ ಹಾಗೂ ದಾವಣಗೆರೆ ತಾಲ್ಲೂಕುಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ ಎರಡು ತಾಲ್ಲೂಕುಗಳಲ್ಲಿ 70ಕ್ಕೂ ಹೆಚ್ಚು ರೈತರು ಜೇನು ಕೃಷಿಯಲ್ಲಿ ತೊಡಗಿಸಿಕೊಂಡು ಆದಾಯ ಕಾಣುತ್ತಿದ್ದಾರೆ.
ಪ್ರತಿ ಕೆ.ಜಿ ಜೇನುತುಪ್ಪಕ್ಕೆ ಅಂದಾಜು ₹ 800 ದರ ಇದೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅಂದಾಜು 450 ಕೆ.ಜಿ. ಜೇನು ಉತ್ಪಾದನೆಯಾಗಿದೆ. ಜೇನು ಕೃಷಿಕರು ಅಂದಾಜು ₹ 3 ಲಕ್ಷದಿಂದ ₹ 3.50 ಲಕ್ಷ ಆದಾಯ ಕಂಡಿದ್ದಾರೆ. ಸರ್ಕಾರ ಪ್ರಚಲಿತಕ್ಕೆ ತಂದಿರುವ ‘ಝೇಂಕಾರ’ ಬ್ರ್ಯಾಂಡ್ ಅನ್ನು ಸ್ಥಳೀಯ ಜೇನು ಉತ್ಪಾದಕರೂ ಬಳಕೆ ಮಾಡುವುದರಿಂದ, ಅವರ ಉತ್ಪನ್ನಕ್ಕೆ ಸರ್ಕಾರದ ಗ್ಯಾರಂಟಿ ದೊರೆತು, ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಅವಕಾಶ ದೊರೆಯುತ್ತದೆ. ಇದರಿಂದ ಉತ್ಪಾದನೆ ಪ್ರಮಾಣ ಹೆಚ್ಚಿಲಿದೆ ಎಂಬುದು ತೋಟಗಾರಿಕೆ ಇಲಾಖೆಯ ದೃಢವಾದ ನಂಬಿಕೆ.
‘ಜೇನು ಉತ್ಪಾದನೆಗೆ ಆಸಕ್ತಿ ತೋರುವ ರೈತರಿಗೆ ಸರ್ಕಾರ ಸಬ್ಸಿಡಿ ದರದಲ್ಲಿ ಜೇನು ಪೆಟ್ಟಿಗೆಯನ್ನು ಪೂರೈಸುತ್ತಿದೆ. ಪೆಟ್ಟಿಗೆ, ಕಾಲೊನಿ, ಸ್ಟ್ಯಾಂಡ್ ಹಾಗೂ ಜೇನು ಹುಳು ಸೇರಿ ಪ್ರತಿ ಪೆಟ್ಟಿಗೆಗೆ ₹ 4,500 ವೆಚ್ಚವಾಗುತ್ತದೆ. ಸರ್ಕಾರ ಇದಕ್ಕೆ ಶೇ 75ರಷ್ಟು ಸಬ್ಸಿಡಿ ನೀಡುವುದರಿಂದ ಪ್ರತಿ ಪೆಟ್ಟಿಗೆಗೆ ಅಂದಾಜು ₹ 1,250 ವೆಚ್ಚವಾಗುತ್ತದೆ. ಮಧುಬನ ಯೋಜನೆಯಡಿ, ಜಮೀನು ಹೊಂದಿರುವ ಪ್ರತಿ ರೈತರು ಗರಿಷ್ಠ 10 ಪೆಟ್ಟಿಗೆಗಳನ್ನು, ಜಮೀನು ರಹಿತರು ಗರಿಷ್ಠ 4 ಪೆಟ್ಟಿಗೆಗಳಿಗೆ ಸಬ್ಸಿಡಿ ಪಡೆಯಬಹುದು. ಜೇನು ಕೃಷಿ ಕುರಿತು ಇಲಾಖೆಯಿಂದ ತರಬೇತಿಯನ್ನೂ ನೀಡಲಾಗುತ್ತಿದೆ. ಈವರೆಗೆ 250ಕ್ಕೂ ಹೆಚ್ಚು ಪೆಟ್ಟಿಗೆಗಳನ್ನು ನೀಡಿ ಪ್ರೋತ್ಸಾಹಿಸಲಾಗಿದೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ್ ಎಸ್.ಬಿ. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಝೇಂಕಾರ’ ಬ್ರ್ಯಾಂಡ್‌ಗೆ ನೋಂದಣಿ ಮಾಡಿಸಿದ್ದೇನೆ. ಅದೇ ಲೇಬಲ್‌ನಡಿ ಜೇನುತುಪ್ಪ ಮಾರಾಟಕ್ಕೆ ಉದ್ದೇಶಿಸಿದ್ದೇನೆ. ಶುದ್ಧ ಜೇನಿಗೆ ಜಿಲ್ಲೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಬೇಡಿಕೆಯಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲಶಶಿಕುಮಾರ್ ಜೇನು ಉತ್ಪಾದಕ ಸಂತೇಬೆನ್ನೂರು
ಜೇನು ಉತ್ಪಾದಕರು ಏನು ಮಾಡಬೇಕು?
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ರೈತರು ತಾವು ಉತ್ಪಾದಿಸಿದ ಜೇನು ತುಪ್ಪದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಖಾತರಿಪಡಿಸುವ ಪ್ರಮಾಣ ಪತ್ರವನ್ನು ಪಡೆಯಬೇಕು. ಈ ಪ್ರಮಾಣಪತ್ರದೊಂದಿಗೆ ತೋಟಗಾರಿಕೆ ಇಲಾಖೆಗೆ ಒಂದು ಬಾರಿ ₹ 2000 ಶುಲ್ಕ ಪಾವತಿಸಿ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸಿದವರಿಗೆ ಝೇಂಕಾರ ಬ್ರ್ಯಾಂಡ್‌ನ ಲೋಗೊ ಬಳಸಲು ಅಧಿಕೃತ ಅನುಮತಿ ನೀಡಲಾಗುತ್ತದೆ. ಝೇಂಕಾರ ಬ್ರ್ಯಾಂಡ್‌ಗಾಗಿ ಗೊತ್ತುಪಡಿಸಲಾದ ವಿವಿಧ ಮಾದರಿಯ ಜೇನು ಸಂಗ್ರಹ ಬಾಟಲ್ ಪ್ಯಾಕಿಂಗ್ ಲೊಗೊ ಸ್ಟಿಕ್ಕರ್ ಬಳಕೆ ವಿಧಾನವನ್ನು ಜೇನು ಉತ್ಪಾದಕರಿಗೆ ತಿಳಿಸಿಕೊಡಲಾಗುತ್ತದೆ. ಝೇಂಕಾರ ಲೊಗೊ ಬಳಿಸಿಕೊಂಡು ರೈತರು ಎಲ್ಲಿ ಬೇಕಾದರೂ ಉತ್ಪನ್ನವನ್ನು ಮಾರಾಟ ಮಾಡಬಹುದು. ಆಯಾ ಪ್ರದೇಶಕ್ಕೆ ತಕ್ಕಂತೆ ‘ಕಾಡಿನ ಜೇನು’ ‘ಸಾವಯವ ಜೇನು’ ಮೊದಲಾದ ಟ್ಯಾಗ್‌ಲೈನ್ ಹಾಗೂ ಉತ್ಪಾದಕರ ವಿಳಾಸವನ್ನು ಮುದ್ರಿಸಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.