ಹೊನ್ನಾಳಿ: ತಾಲ್ಲೂಕಿನಲ್ಲಿ ಕಳೆದ ಮೂರೂವರೆ ತಿಂಗಳಿನಿಂದ ನಿರಂತರ ಸುರಿಯುತ್ತಿರುವ ಮಳೆ ರೈತ ಸಮುದಾಯದಲ್ಲಿ ಸಿಹಿ–ಕಹಿ ಅನುಭವ ನೀಡಿದೆ.
ತಾಲ್ಲೂಕಿನ ಕುಂದೂರು, ಕೂಲಂಬಿ, ಕುಂಬಳೂರು, ಮುಕ್ತೇನಹಳ್ಳಿ, ಯಕ್ಕನಹಳ್ಳಿ, ಕೆಂಗಲಹಳ್ಳಿ ಭಾಗದಲ್ಲಿ ತೋಟಗಾರಿಕೆ ಬೆಳೆಗಳು ಪ್ರಧಾನವಾಗಿವೆ. ಈ ಭಾಗದಲ್ಲಿ ಸುರಿದ ಸತತ ಮಳೆಗೆ ಅಡಿಕೆ ತೋಟಗಳಲ್ಲಿ ನೀರು ನಿಂತು ಗಿಡಗಳಿಗೆ ಶೀತವಾಗಿದ್ದು, ಹರಳು ಕಟ್ಟುವ ಹಂತದಲ್ಲಿರುವ ಬೆಳೆಗೆ ತೊಂದರೆಯಾಗಿದೆ.
‘ಅಡಿಕೆ ಹರಳು ಬಲಿತರೆ ಯಾವುದೇ ಸಮಸ್ಯೆ ಇಲ್ಲ. ಅಲ್ಲಿಯವರೆಗೆ ಮಳೆ ಸ್ವಲ್ಪ ವಿರಾಮ ನೀಡಿದರೆ ಒಳ್ಳೆಯದು’ ಎಂದು ಕೂಲಂಬಿಯ ರೈತ ರೇವಣಸಿದ್ದಪ್ಪ ಹಾಗೂ ಕುಂಬಳೂರಿನ ರೈತ ರಂಗನಾಥ್ ‘ಪ್ರಜಾವಾಣಿ’ ಎದುರು ಆಶಾಭಾವ ವ್ಯಕ್ತಪಡಿಸಿದರು.
ಒಂದು ತಿಂಗಳಿನಿಂದ ಭತ್ತದ ಮಡಿ ಹಾಗೂ ನಾಟಿ ಕಾರ್ಯ ಚುರುಕಾಗಿದ್ದು, ಮಳೆಯಿಂದ ಈ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಮಳೆಯಿಂದ ಶೇ 20ರಷ್ಟು ಮೆಕ್ಕೆಜೋಳದ ಬೆಳೆ ಉತ್ತಮ ಸ್ಥಿತಿಯಲ್ಲಿದೆ. ಅಧಿಕ ಮಳೆಯಿಂದಾಗಿ ತೋಟದಲ್ಲಿನ ನೀರು ಬಸಿಯಲು ಹಿಟಾಚಿ ಯಂತ್ರ ಬಳಸಿ ಬಸಿಗಾಲುವೆ ತೆಗೆದು ನೀರನ್ನು ತಗ್ಗಿನ ಕಡೆಗೆ ಅಥವಾ ಹಳ್ಳಕ್ಕೆ ಹರಿಸುವ ಪ್ರಯತ್ನವನ್ನು ಕೆಲವು ರೈತರು ಮಾಡಿದ್ದಾರೆ ಎಂದು ಕುಂಬಳೂರಿನ ಕೃಷಿಕ ಅಣ್ಣಪ್ಪ ಹೇಳಿದರು.
ಮಾರಿಕೊಪ್ಪ, ಹತ್ತೂರು, ಎರೆಹಳ್ಳಿ, ಮಾದೇನಹಳ್ಳಿ, ಕತ್ತಿಗೆ ಮತ್ತಿತರ ಗ್ರಾಮಗಳ ಪ್ರಮುಖ ಬೆಳೆ ಮೆಕ್ಕೆಜೋಳ. ಆರಂಭದಲ್ಲಿ ಸುರಿದ ಮಳೆಗೆ ಬೆಳೆ ಚೆನ್ನಾಗಿತ್ತು. ನಿರಂತರ ಸುರಿಯುತ್ತಿರುವ ಮಳೆಯಿಂದ ಕಪ್ಪು ಮಣ್ಣು ಮತ್ತು ಜೌಗು ಪ್ರದೇಶದಲ್ಲಿನ ಬೆಳೆಗೆ ಶೀತವಾಗಿದ್ದು, ಶೇ 50ರಷ್ಟು ಬೆಳೆ ಹಾಳಾಗಿದೆ ಎಂದು ರೈತ ಮಾದೇನಹಳ್ಳಿ ನಾಗರಾಜ್ ಹೇಳಿದರು.
ಮೆಕ್ಕೆಜೋಳ ಕಾಳು ಕಟ್ಟುವ ಹಂತದಲ್ಲಿದ್ದು, ಮಳೆ ಕಡಿಮೆಯಾದರೆ ಲಾಭದ ಮುಖ ನೋಡಬಹುದು. ಕಪ್ಪು ಮಣ್ಣಿನಲ್ಲಿ ಹಾಗೂ ಕೆಂಪು ನೆಲದ ಜೌಗಿನಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆ ಕೈಗೆ ಸಿಗಲಾರದು. ಶೀತದಿಂದ ಕಾಳು ಕಟ್ಟುವುದು ಕಷ್ಟ ಎಂದು ರೈತ ಯೋಗೀಶ್ ಮಾಳಿಗೆ ಬೇಸರ ವ್ಯಕ್ತಪಡಿಸಿದರು.
ಸಾಸ್ವೇಹಳ್ಳಿ ಭಾಗದಲ್ಲಿ ಶೇ 80ರಷ್ಟು ರೈತರು ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿದ್ದು, ಹೆಚ್ಚಾಗಿ ಅಡಿಕೆ ನೆಚ್ಚಿಕೊಂಡಿದ್ದಾರೆ. ಸತತ ಮಳೆಯಿಂದ ಅಡಿಕೆ ಬೆಳೆಗೆ ಶೀತವಾಗಿದ್ದು, ಉತ್ತಮ ಇಳುವರಿ ಬರಲಾರದು ಎಂಬ ಆತಂಕ ಜಿ.ಪಂ. ಮಾಜಿ ಸದಸ್ಯ ಕುಳಗಟ್ಟೆ ಚಂದ್ರಶೇಖರ್ ಅವರದ್ದು.
ಬಲಮುರಿ, ಎಸ್. ಮಲ್ಲಾಪುರ, ಗೋಪಗೊಂಡನಹಳ್ಳಿ, ಗೋಪಗೊಂಡನಹಳ್ಳಿ ತಾಂಡಾ ಭಾಗದಲ್ಲಿ ಎಲೆಬಳ್ಳಿ ತೋಟ, ಅಡಿಕೆ, ತೆಂಗು, ಮೆಕ್ಕೆಜೋಳ, ಶುಂಠಿ ಸೇರಿ ಮಿಶ್ರ ಬೆಳೆ ಬೆಳೆಯಲಾಗುತ್ತದೆ. ಶೀತಕ್ಕೆ ಅಡಿಕೆ ಹರಳು ಉದುರುತ್ತಿದೆ. ಕೆಲವು ಕಡೆ ಮೆಕ್ಕೆಜೋಳದ ಬೆಳೆ ಸಮೃದ್ಧವಾಗಿದ್ದು, ಇನ್ನೂ ಕೆಲವೆಡೆ ಹಾಳಾಗಿದೆ. ಎಲೆಬಳ್ಳಿ ಶೀತಕ್ಕೆ ಸತ್ತುಹೋಗುತ್ತಿದೆ. ತೆಂಗಿನ ಮರಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಎಸ್. ಮಲ್ಲಾಪುರ ಗ್ರಾಮದ ರೈತ ಓಂಕಾರಪ್ಪ ವಿವರಿಸಿದರು.
ತಾಲ್ಲೂಕಿನಲ್ಲಿ ಜೂನ್‌ನಲ್ಲಿ ಶೇ 30ರಷ್ಟು ಜುಲೈನಲ್ಲಿ ಶೇ 70ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಈಗಾಗಲೇ ಮೆಕ್ಕೆಜೋಳದ ಸೂಲಂಗಿ ಹೊರಟಿದೆ. ಶೇ 80ರಷ್ಟು ಪ್ರದೇಶದಲ್ಲಿ ಬೆಳೆ ಉತ್ತಮವಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಅತೀಕ್ ಉಲ್ಲಾ ಮಾಹಿತಿ ನೀಡಿದರು.
ಕತ್ತಿಗೆ, ಮಾದೇನಹಳ್ಳಿ, ಎರೆಹಳ್ಳಿ ಭಾಗದ ಕಪ್ಪುಮಣ್ಣಿನಲ್ಲಿ ಜುಲೈ ಮಧ್ಯ ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಮಳೆಯಿಂದ ಆ ಬೆಳೆಗೆ ಸಮಸ್ಯೆ ಆಗಿರುವ ಬಗ್ಗೆ ರೈತರು ದೂರಿಲ್ಲ ಎಂದು ಅವರು ಹೇಳಿದರು.
ತಾಲ್ಲೂಕಿನಲ್ಲಿ ಶೀತಬಾಧೆಯಿಂದಾಗಿ ಅಡಿಕೆ ಮತ್ತು ಎಲೆಬಳ್ಳಿ ಇಳುವರಿ ಕುಂಠಿತವಾಗುವ ಲಕ್ಷಣವಿದೆ. ಮೆಕ್ಕೆಜೋಳ ಶೇ 80ರಷ್ಟು ಉತ್ತಮವಾಗಿದೆ. ಮಿಕ್ಕ ಬೆಳೆಗಳು ಚೆನ್ನಾಗಿವೆವಿಶ್ವನಾಥ್ ಸಹಾಯಕ ಕೃಷಿ ನಿರ್ದೇಶಕ ಹೊನ್ನಾಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.