ADVERTISEMENT

ಮರಳು ಅಕ್ರಮ ಗಣಿಗಾರಿಕೆ: ಎರಡು ರೈಲು ಸೇತುವೆಗಳ ಭದ್ರತೆಗೆ ಅಪಾಯ 

ಇನಾಯತ್ ಉಲ್ಲಾ ಟಿ.
Published 21 ಫೆಬ್ರುವರಿ 2026, 4:03 IST
Last Updated 21 ಫೆಬ್ರುವರಿ 2026, 4:03 IST
ಹರಿಹರದ ಕುಮಾರಪಟ್ಟಣಂ ಬಳಿಯ ತುಂಗಭದ್ರಾ ನದಿಯ ದಡದಲ್ಲಿ ರೈಲು ಸೇತುವೆ ಸಮೀಪದಲ್ಲೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ರಾಶಿ ಹಾಕಲಾಗಿದೆ
ಹರಿಹರದ ಕುಮಾರಪಟ್ಟಣಂ ಬಳಿಯ ತುಂಗಭದ್ರಾ ನದಿಯ ದಡದಲ್ಲಿ ರೈಲು ಸೇತುವೆ ಸಮೀಪದಲ್ಲೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ರಾಶಿ ಹಾಕಲಾಗಿದೆ   

ಹರಿಹರ: ಕದ್ದು ಮುಚ್ಚಿ ನಡೆಯುತ್ತಿರುವ ಮರಳು ಅಕ್ರಮ ಗಣಿಗಾರಿಕೆಯು ಇಲ್ಲಿನ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರೈಲು ಮಾರ್ಗದ ಎರಡು ಸೇತುವೆಗಳ ಭದ್ರತೆಗೆ ಅಪಾಯ ತಂದೊಡ್ಡಿದೆ.

ಶತಮಾನ ಕಂಡ ಒಂದು ಸೇತುವೆ ಹಾಗೂ ಹೊಸದೊಂದು ಸೇರಿ ರೈಲು ನದಿ ದಾಟಲು ಎರಡು ಸೇತುವೆಗಳು ಇಲ್ಲಿವೆ. ಸೂಪರ್ ಫಾಸ್ಟ್ ಸೇರಿದಂತೆ ನಿತ್ಯ 50ಕ್ಕೂ ಹೆಚ್ಚು ರೈಲುಗಳು ಈ ಸೇತುವೆಗಳ ಮೇಲೆ ಸಂಚರಿಸುತ್ತವೆ. ಸೇತುವೆಯ 50ರಿಂದ 60 ಮೀ. ಅಂತರದಲ್ಲೇ ರಾಣೆಬೆನ್ನೂರು ತಾಲ್ಲೂಕು ವ್ಯಾಪ್ತಿಯ ನದಿ ದಡದಲ್ಲಿ ಮರಳಿನ ರಾಶಿ ಕಾಣಿಸುತ್ತದೆ. ಇಲ್ಲಿ ನಡೆಯುತ್ತಿರುವ ಅಪಾಯಕಾರಿ ಮರಳು ಅಕ್ರಮ ಗಣಿಗಾರಿಕೆಗೆ ಇದು ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಯಂತ್ರಗಳ ಸಹಾಯವಿಲ್ಲದೆ ಕೂಲಿ ಕಾರ್ಮಿಕರ ಮೂಲಕ ನದಿ ಪಾತ್ರದಿಂದ ಮರಳು ಸಂಗ್ರಹಿಸಿ ದಡಕ್ಕೆ ಹಾಕಲಾಗುತ್ತದೆ. ನಂತರ ಸಿಮೆಂಟ್ ಚೀಲಗಳಲ್ಲಿ ತುಂಬಿ ಬೈಕ್‌ಗಳ ಮೂಲಕ ಸಾಗಿಸಲಾಗುತ್ತಿದೆ. ಈ ಚಟುವಟಿಕೆ ಹೆಚ್ಚಾಗಿ ರಾತ್ರಿ ಸಮಯದಲ್ಲಿ ನಡೆಯುತ್ತದೆ. ಮಳೆಗಾಲದಲ್ಲಿ ನೀರಿನೊಂದಿಗೆ ನದಿಯಲ್ಲಿ ಮರಳು ಹರಿದು ಬರುತ್ತದೆ. ಮಳೆಗಾಲದ ನಂತರ ನದಿಯಲ್ಲಿ ನೀರಿನ ಹರಿವು ಕಡಿಮೆಯಾದಾಗ ಈ ಸೇತುವೆಗಳ ಅಕ್ಕ, ಪಕ್ಕದಲ್ಲಿ ಮರಳಿನ ಅಕ್ರಮ ಗಣಿಗಾರಿಕೆಗೆ ಚಾಲನೆ ಸಿಗುತ್ತದೆ’ ಎಂದು ಕದಸಂಸ ಹರಿಹರ ತಾಲ್ಲೂಕು ಘಟಕದ ಸಂಚಾಲಕ ಪಿ. ಜೆ. ಮಹಾಂತೇಶ್ ಹೇಳಿದ್ದಾರೆ.

ADVERTISEMENT

ಗಣಿ ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ-1957 (ಎಂಎಂಡಿಆರ್), ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು (ಕೆಎಂಎಂಸಿಆರ್), ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ವಿಧಿಸಿದ ನಿರ್ದೇಶನ, ಸ್ಥಿರ ಮರಳು ಗಣಿಗಾರಿಕೆ ನಿರ್ವಹಣಾ ಮಾರ್ಗಸೂಚಿಗಳು-2016 (ಎಸ್‌ಎಸ್‌ಎಂಎಂಜಿ) ಮೊದಲಾದ ಕಾಯ್ದೆ, ನಿಯಮಗಳ ಸ್ಪಷ್ಟ ಉಲ್ಲಂಘನೆ ಆಗಿರುವುದು ಸ್ಪಷ್ಟ ಎಂದು ಅವರು ಆರೋಪಿಸಿದ್ದಾರೆ.

ನದಿ ದಡಕ್ಕೆ ಅಂಟಿಕೊಂಡ ಸೇತುವೆ ಮತ್ತು ಹೆದ್ದಾರಿಗಳ ಮೇಲ್ಮುಖ ಮತ್ತು ಕೆಳಮುಖ ಭಾಗದ 1 ಕಿ.ಮೀ. ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ಮಾಡಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ಇಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಲಾಗುತ್ತಿದೆ. ಮರಳು ಗಣಿಗಾರಿಕೆಯಿಂದಾಗಿ ಕ್ರಮೇಣ ಸೇತುವೆಗಳ ಬುನಾದಿಗೆ ಧಕ್ಕೆಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಈ ಪ್ರಕ್ರಿಯೆ ಮುಂದುವರಿದರೆ ಅವಘಡಗಳು ಸಂಭವಿಸುವ ಅಪಾಯ ಇದೆ. 2,000ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ರೈಲುಗಳು ಸಂಚರಿಸುವಾಗ ಅಪಾಯ ಎದುರಾದರೆ ಯಾರು ಹೊಣೆ? ಎಂದು ಅವರು ಪ್ರಶ್ನಿಸಿದ್ದಾರೆ.

ಸೇತುವೆ ಸಮೀಪ ಭಾಗದಲ್ಲಿ ಮರಳುಗಾರಿಕೆ ನಡೆಸುವುದು ಅಪಾಯಕಾರಿ. ಇದರಿಂದ ಸೇತುವೆಗಳ ಬುನಾದಿಗೆ ಧಕ್ಕೆಯಾಗುತ್ತದೆ. ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ.
ಸೋಮಿಯಾ ನಾಯಕ್, ಮೈಸೂರು ವಿಭಾಗದ ರೈಲ್ವೆ ಸೇತುವೆ ವಿಭಾಗದ ಸಹಾಯಕ ವಿಭಾಗೀಯ ಎಂಜಿನಿಯರ್
ಹರಿಹರದ ಕುಮಾರಪಟ್ಟಣಂ ಬಳಿಯ ತುಂಗಭದ್ರಾ ನದಿಯ ದಡದಲ್ಲಿ ರೈಲು ಸೇತುವೆ ಸಮೀಪದಲ್ಲೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ರಾಶಿ ಹಾಕಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.