ADVERTISEMENT

ಜನರಿಗೆ ಶಿವಮೊಗ್ಗವೇ ಅಚ್ಚುಮೆಚ್ಚು; ದಾವಣಗೆರೆ ಜಿಲ್ಲೆಗೆ ಹೊನ್ನಾಳಿ–ನ್ಯಾಮತಿ ಸೇರ್

ಎನ್.ಕೆ.ಆಂಜನೇಯ
Published 15 ಆಗಸ್ಟ್ 2022, 2:54 IST
Last Updated 15 ಆಗಸ್ಟ್ 2022, 2:54 IST
ಹೊನ್ನಾಳಿಯ ತುಂಗಭದ್ರಾ ಸೇತುವೆ
ಹೊನ್ನಾಳಿಯ ತುಂಗಭದ್ರಾ ಸೇತುವೆ   

ಹೊನ್ನಾಳಿ: 1997 ಆಗಸ್ಟ್ 15ರಂದು ಶಿವಮೊಗ್ಗ ಜಿಲ್ಲೆಯಿಂದ ಬೇರ್ಪಟ್ಟ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳ ಜನ ಮಾನಸಿಕವಾಗಿ ಶಿವಮೊಗ್ಗದ ಜತೆ ಬೆರೆತುಹೋಗಿದ್ದಾರೆ.

‘ದಾವಣಗೆರೆ ಜಿಲ್ಲೆ ರಚನೆಯಾದ ಉದ್ದೇಶ ಈಡೇರಿದೆಯಾ ಎಂದು ಹಿಂತಿರುಗಿ ನೋಡಿದರೆ, ಹೊನ್ನಾಳಿ, ನ್ಯಾಮತಿ ಭಾಗದವರಾದ ನಮಗೆ ಅಂತಹ ಸಂತೋಷವೇನೂ ಆಗಿಲ್ಲ’ ಎಂದು ತಾಲ್ಲೂಕಿನ ಜನರು ಹೇಳುತ್ತಾರೆ.

ಭೌಗೋಳಿಕವಾಗಿ ಶಿವಮೊಗ್ಗ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸವಳಂಗದವರಿಗೆ ಕೇವಲ 21 ಕಿ.ಮೀ ದೂರವಿದೆ. ನ್ಯಾಮತಿಯವರಿಗೆ 28 ಕಿ.ಮೀ ಅಷ್ಟೇ. ಹೊನ್ನಾಳಿಯವರಿಗೆ 40 ಕಿ.ಮೀ ದೂರದ ಅಂತರ. ಚೀಲೂರು ಭಾಗದವರಿಗೆ ಶಿವಮೊಗ್ಗ 18ರಿಂದ 20 ಕಿ.ಮೀ ದೂರ. ಹೀಗಿರುವಾಗ ಸವಳಂಗದಿಂದ ದಾವಣಗೆರೆಗೆ 80ರಿಂದ 90 ಕಿ.ಮೀ ದೂರ, ಹೊನ್ನಾಳಿಯಿಂದ 60 ಕಿ.ಮೀ ದೂರದ ಪ್ರಯಾಣವನ್ನು ಯಾರು ಇಷ್ಟ
ಪಡುತ್ತಾರೆ. ಇದು ಕೇವಲ ದೂರದ ಮಾತಷ್ಟೇ ಅಲ್ಲ. ಹೊನ್ನಾಳಿ ಅರೆಮಲೆನಾಡು ಎಂದು ಕರೆಸಿಕೊಂಡರೂ, ಮಲೆನಾಡು ಶಿವಮೊಗ್ಗದೊಂದಿಗೆ ಸಾಹಿತ್ಯಿಕವಾಗಿ, ಸಾಮಾಜಿಕವಾಗಿ, ಹೋರಾಟದ ಹಿನ್ನೆಲೆಯಲ್ಲಿಯೂ ಸಾಕಷ್ಟು ಬೆಸೆದುಕೊಂಡಿದೆ.

ADVERTISEMENT

ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರಕವಿ ಕುವೆಂಪು, ಯು.ಆರ್. ಅನಂತಮೂರ್ತಿ, ಡಾ. ಹಾ.ಮಾ. ನಾಯಕ್, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿಯಂತಹ ಘಟಾನುಘಟಿಗಳನ್ನು ಹೊಂದಿದ ಶಿವಮೊಗ್ಗ ಜಿಲ್ಲೆಯನ್ನು ಬಿಟ್ಟು ಬರಲು ಹೇಗೆ ಸಾಧ್ಯ. ರಂಗಕಲೆಯಲ್ಲಿ ವಿಶ್ವಪ್ರಸಿದ್ಧರಾದ ಸಾಗರದ ನಿನಾಸಂ ಹೆಗ್ಗೋಡು ಕೆ.ವಿ. ಸುಬ್ಬಣ್ಣ, ಗಾಯನದಲ್ಲಿ ಮಿಂಚಿ ಇಂದು ಮರೆಯಾದ ಶಿವಮೊಗ್ಗ ಸುಬ್ಬಣ್ಣ, ಚಳವಳಿ ಹಿನ್ನೆಲೆಯಲ್ಲಿ ನೋಡಿದರೆ ಶಾಂತವೇರಿ ಗೋಪಾಲಗೌಡರು, ಎಸ್. ಬಂಗಾರಪ್ಪ, ಕೋಣಂದೂರು ಲಿಂಗಪ್ಪ, ಜೆ.ಎಚ್. ಪಟೇಲ್ ಅವರಂತಹ ನಾಯಕರನ್ನು ಕಂಡ ಶಿವಮೊಗ್ಗ ಜಿಲ್ಲೆಯೊಂದಿಗೆ ಹೊನ್ನಾಳಿ ತಾಲ್ಲೂಕಿನ ಜನ ಬೆರೆತು ಹೋಗಿದ್ದರು. ಇವರೆಲ್ಲ ನಮ್ಮವರೇನೂ ಎನ್ನುವಷ್ಟರ ಮಟ್ಟಿಗೆ ಸಂಪರ್ಕ, ಬಾಂಧವ್ಯ ಈ ಭಾಗದ ಜನತೆಗಿತ್ತು.

ಸಿನಿಮಾ ನೋಡುವ ಗೀಳಿದ್ದ ಜನತೆಗೆ ಡಾ. ರಾಜ್‍ಕುಮಾರ್ ಸಿನಿಮಾ ಬಿಡುಗಡೆ ಸುದ್ದಿ ತಿಳಿದರೆ ಬಹುತೇಕ ಹೊನ್ನಾಳಿ ಜನ ಶಿವಮೊಗ್ಗದ ನಗರದೆಲ್ಲೆಡೆ ಓಡಾಡುವುದು ಕಂಡು ಬರುತ್ತಿತ್ತು. ಆಡಳಿತಾತ್ಮಕ ದೃಷ್ಟಿಯಿಂದಲೂ ಹೊನ್ನಾಳಿಯಿಂದ ಶಿವಮೊಗ್ಗದ ಯಾವುದೇ ಕಚೇರಿಗೆ ಸುಲಭವಾಗಿ ಹೋಗಿ ಬರುವಷ್ಟು ಸುಲಭವಾಗಿತ್ತು.

‘ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕ್ಷೇತ್ರ ಚನ್ನಗಿರಿಯೂ ಸೇರಿದಂತೆ ಹೊನ್ನಾಳಿಯನ್ನು ದಾವಣಗೆರೆಗೆ ಸೇರಿಸಿ ಜಿಲ್ಲೆಯನ್ನಾಗಿ ಘೋಷಿಸಿದರು. ಆ ಸಂದರ್ಭ ಹೊನ್ನಾಳಿ ಜನತೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ದೊಡ್ಡಮಟ್ಟದ ಹೋರಾಟವೂ ನಡೆದಿತ್ತು. ಆದರೂ ಸರ್ಕಾರದ ತೀರ್ಮಾನ ಗಟ್ಟಿಯಾಗಿದ್ದುದ್ದರಿಂದ ನಿಧಾನವಾಗಿ ಹೊಂದಿಕೊಳ್ಳಲೇಬೇಕಾಯಿತು. ದಾವಣಗೆರೆಗೆ ತಾಲ್ಲೂಕಿನ ಕುಂದೂರು, ಕೂಲಂಬಿ, ಕುಂಬಳೂರು ಭಾಗದ ಜನತೆಗೆ ಒಂದಿಷ್ಟು ಅನುಕೂಲವಾದೀತು ಎನ್ನುವುದು ಬಿಟ್ಟರೆ, ಉಳಿದ ಭಾಗದ ಜನರಿಗೆ ದಾವಣಗೆರೆ ಎಂದರೆ ಈಗಲೂ ಅಷ್ಟಕ್ಕಷ್ಟೆ’ ಎಂಬುದು ಜನರ ಅಭಿಪ್ರಾಯ.

‘ಶಿವಮೊಗ್ಗದ ಜೊತೆ ಬೆರೆತಿದ್ದೇವೆ’

ಹೊನ್ನಾಳಿ ನ್ಯಾಮತಿ ತಾಲ್ಲೂಕಿನ ಜನತೆ ಮಾನಸಿಕವಾಗಿ ಈಗಲೂ ಶಿವಮೊಗ್ಗದೊಂದಿಗೆ ಬೆರೆತುಕೊಂಡಿದ್ದೇವೆ. ಅಲ್ಲಿನ ಒಡನಾಟವೇ ಬೇರೆ. ಹೆಗ್ಗೋಡಿನ ಕೆ.ವಿ. ಸುಬ್ಬಣ್ಣ ಅವರ ಒಡನಾಟ ನಮಗೆ ಈಗಲೂ ಹಸಿ ಹಸಿಯಾಗಿಯೇ ಇದೆ. ನಾನು ಒಬ್ಬ ಕಲಾವಿದನಾಗಿ, ನಟನಾಗಿ ಶಿವಮೊಗ್ಗದಲ್ಲಿ ಸಾಕಷ್ಟು ಬೆರೆತುಕೊಂಡಿದ್ದೆ. ರೈತ ಚಳವಳಿಗಳು ಇಡೀ ದೇಶಕ್ಕೆ ಹಬ್ಬಿದ್ದು ಶಿವಮೊಗ್ಗದಿಂದಲೇ. ಎಲ್ಲಾ ರೀತಿಯಿಂದಲೂ ನಾನು ಹೆಚ್ಚು ಇಷ್ಟು ಪಡುವ ಜಿಲ್ಲೆ ಶಿವಮೊಗ್ಗ’ ಎಂಬುದು ರಂಗ ಕಲಾವಿದ ಪ್ರೇಂಕುಮಾರ್ ಬಂಡಿಗಡಿ ಅವರ ಅಭಿಪ್ರಾಯ.

‘ಶಿವಮೊಗ್ಗಕ್ಕೆ ಹೆಚ್ಚು ಅವಲಂಬನೆ’

‘ವ್ಯವಹಾರದ ದೃಷ್ಟಿಯಿಂದ ಏನೇ ಕೆಲಸ ಕಾರ್ಯಕ್ಕೆ ನಾವು ಅವಲಂಬಿಸಿರುವುದು ಶಿವಮೊಗ್ಗ ಜಿಲ್ಲೆಯನ್ನೇ. ಕೇವಲ ಒಂದರೆಡು ಗಂಟೆಯಲ್ಲಿ ನಮ್ಮ ಕೆಲಸ, ಕಾರ್ಯಗಳನ್ನು ಮುಗಿಸಿಕೊಂಡು ವಾಪಸ್ ಬರಬಹುದು. ಆದರೆ ದಾವಣಗೆರೆ ಜಿಲ್ಲೆಗೆ ಹೋದರೆ ಇಡೀ ದಿನ ಕಳೆಯಬೇಕಾಗುತ್ತದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನ್ಯಾಮತಿಯ ರವಿಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.