ದಾವಣಗೆರೆ: ಬದುಕು ಕಟ್ಟಿಕೊಳ್ಳಲು ಬೀದಿ–ಬೀದಿಗಳಲ್ಲಿ ಹೆಣಗಾಡುತ್ತಿರುವ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯವನ್ನು ಬಲಾಢ್ಯರ ಜೊತೆಗೆ ಸೇರಿಸಿ ಒಳಮೀಸಲಾತಿ ಕಲ್ಪಿಸಿರುವುದು ನ್ಯಾಯಸಮ್ಮತವಲ್ಲ. ಸಾಮಾಜಿಕ ನ್ಯಾಯ ಕಲ್ಪಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣಕ್ಕೆ ತಲೆಬಾಗಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದರು.
‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಅಲೆಮಾರಿ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಮಾದಿಗ ಸಮುದಾಯಕ್ಕಿಂತಲೂ ಹಿಂದುಳಿದ ಅಲೆಮಾರಿಗಳಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣ ಪಡೆದವರ ಸಂಖ್ಯೆಯೂ ವಿರಳ. ಒಳಮೀಸಲಾತಿ ಕಲ್ಪಸುವಲ್ಲಿ ಅಲೆಮಾರಿ ಸಮುದಾಯಕ್ಕೆ ಮಾಡಿರುವ ಅನ್ಯಾಯಕ್ಕೆ ನನ್ನ ವಿರೋಧವಿದೆ. ಬಿಜೆಪಿ ವತಿಯಿಂದ ಹೋರಾಟ ರೂಪಿಸುವ ಬಗ್ಗೆ ಚರ್ಚಿಸಬೇಕಿದೆ’ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಶೇ 1ರಷ್ಟು ಮೀಸಲಾತಿ ನೀಡಲು ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಶಿಫಾರಸ್ಸು ಮಾಡಿತ್ತು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಮುದಾಯಗಳನ್ನು 5 ಗುಂಪುಗಳನ್ನಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಿತ್ತು. ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಆಧಾರದ ಮೇರೆಗೆ ವರ್ಗೀಕರಣ ಮಾಡಿತ್ತು. ಇದನ್ನು ಸರ್ಕಾರ 3 ಗುಂಪು ಮಾಡಿ ಒಳಮೀಸಲು ಹಂಚಿಕೆ ಮಾಡಿದ್ದು ಸರಿಯಲ್ಲ. ಇದಕ್ಕೆ ಪೂರಕ ದತ್ತಾಂಶಗಳನ್ನು ಸರ್ಕಾರ ಒದಗಿಸಿಲ್ಲ’ ಎಂದು ಹೇಳಿದರು.
‘ಅಲೆಮಾರಿಗಳನ್ನು ಮುಖ್ಯವಾಹಿನಿಗೆ ತರುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಮುಖ್ಯವಾಹಿನಿಗೆ ಬರಲು ಸಾಧ್ಯವಾಗದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಅಧಿಕಾರವೂ ರಾಜ್ಯ ಸರ್ಕಾರಕ್ಕಿದೆ. ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಏರಿಕೆ ಮಾಡುವ ಅವಕಾಶವಿದೆ. ನ್ಯಾಯಮೂರ್ತಿಗಳ ಅಭಿಪ್ರಾಯ ಪಡೆದು ಅಲೆಮಾರಿ ಸಮುದಾಯಕ್ಕೆ ನ್ಯಾಯ ಕಲ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು’ ಎಂದು ಆಗ್ರಹಿಸಿದರು.
‘ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ನೀಡಿತ್ತು. ಕೆಲ ವಿಚಾರಗಳಲ್ಲಿ ಸ್ಪಷ್ಟತೆಯನ್ನು ಪಡೆಯಲು ಬಿಜೆಪಿ ಅಧಿಕಾರವಧಿಯಲ್ಲಿ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ರಚಿಸಿತ್ತು. ಈ ಸಮಿತಿಯ ವರದಿ ಆಧಾರದ ಮೇರೆಗೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಏರಿಕೆ ಮಾಡಲಾಯಿತು. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ಪರಿಶ್ರಮವೂ ಇದರಲ್ಲಿದೆ’ ಎಂದು ಹೇಳಿದರು.
ಬಿಜೆಪಿ ಮುಖಂಡ ಆಲೂರು ನಿಂಗರಾಜ್ ಇದ್ದರು.
Highlights - ರಾಜಕಾರಣಕ್ಕೆ ತಲೆಬಾಗಿದ ಸಿದ್ದರಾಮಯ್ಯ 3 ಗುಂಪಾಗಿ ಪರಿವರ್ತಿಸಿದ್ದು ತಪ್ಪು ಹಿಂದುಳಿದಿರುವಿಕೆ ಆಧರಿಸಿ ವರ್ಗೀಕರಣ ಮಾಡಬೇಕಿತ್ತು
Quote - ಒಳಮೀಸಲಾತಿ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಗಹನ ಚರ್ಚೆಯಾಗಬೇಕಿತ್ತು. ತಮ್ಮ ಹುಳುಕು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆಗೆ ಅವಕಾಶ ನೀಡಲಿಲ್ಲ ಎ.ನಾರಾಯಣಸ್ವಾಮಿ ಕೇಂದ್ರದ ಮಾಜಿ ಸಚಿವ
Cut-off box - ‘ಸಮುದಾಯದ ಹಿತದೃಷ್ಟಿಯಿಂದ ಒಪ್ಪಿಗೆ’ ‘ಮಾದಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಸರ್ಕಾರ ಒಳಮೀಸಲಾತಿ ಕೊಟ್ಟಿಲ್ಲ. ಹಿಂದುಳಿದಿರುವಿಕೆ ಹಾಗೂ ದತ್ತಾಂಶದ ಆಧಾರದ ಮೇರೆಗೂ ಇದನ್ನು ನಿರ್ಧರಿಸಿಲ್ಲ. ಸಮುದಾಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಕಲ್ಪಿಸಿದ ಒಳಮೀಸಲಾತಿಯನ್ನು ಸ್ವಾಗತಿಸುತ್ತೇನೆ’ ಎಂದು ಎ.ನಾರಾಯಣಸ್ವಾಮಿ ತಿಳಿಸಿದರು. ‘ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಹೋರಾಟ ರೂಪಿಸಿದ್ದು ಮಾದಿಗ ಸಮುದಾಯ. ಹೀಗೆ ವರ್ಗೀಕರಣ ಮಾಡುವ ಬೇಡಿಕೆಯನ್ನು ಯಾವುದೇ ಸಮುದಾಯ ಸರ್ಕಾರದ ಮುಂದೆ ಇಟ್ಟಿರಲಿಲ್ಲ. ಉದ್ಯೋಗ ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಆಗಿರುವ ಅನ್ಯಾಯ ಸರಿಹೋಗಬಹುದು ಎಂಬ ನಿರೀಕ್ಷೆ ಇತ್ತು. ಮತ್ತೊಬ್ಬರಿಗೆ ಅನ್ಯಾಯ ಮಾಡಬೇಕು ಎಂಬುದು ಸಮುದಾಯದ ಉದ್ದೇಶ ಆಗಿರಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.