
ಕಾರ್ಯಕ್ರಮದಲ್ಲಿ ಜಿಯಾವುಲ್ಲಾ ಕೆ. ಜಿ.ಸಿ. ರಾಘವೇಂದ್ರ ಪ್ರಸಾದ್ ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕ ಲೋಕೇಶಪ್ಪ ಬಿ.ಪಾಲ್ಗೊಂಡಿದ್ದರು
ದಾವಣಗೆರೆ: ‘ಕೃಷಿಗಿಂತ ತೋಟಗಾರಿಕೆ ಬೆಳೆಗಳು ಹೆಚ್ಚು ಲಾಭದಾಯಕ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಜೊತೆಗೆ ರೇಷ್ಮೆ, ಹೈನುಗಾರಿಕೆ, ಮೀನು ಮತ್ತು ಜೇನು ಸಾಕಾಣಿಕೆ ಸೇರಿದಂತೆ ಸಮಗ್ರ ಹಾಗೂ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣುತ್ತದೆ..’
ಇದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್ ರೈತರಿಗೆ ನೀಡಿದ ಸಲಹೆ. ಬುಧವಾರ ಏರ್ಪಡಿಸಿದ್ದ ‘ಪ್ರಜಾವಾಣಿ’ ಫೋನ್‌ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೀರು ಮತ್ತು ಗೊಬ್ಬರ ನಿರ್ವಹಣೆ, ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
‘ಏಕ ಬೆಳೆ ಪದ್ಧತಿ ಭೂಮಿಯನ್ನು ಬರಡು ಮಾಡುತ್ತದೆ. ಬೆಲೆ ಏರಿಳಿತದಿಂದ ರೈತರು ಸಂಕಷ್ಟಕ್ಕೆ ಸಿಲುಕುವ ಅಪಾಯ ಹೆಚ್ಚು. ಕೃಷಿಯಲ್ಲಿ ಬಹುಬೆಳೆ, ತೋಟಗಾರಿಕೆಯಲ್ಲಿ ಬಹುಮಹಡಿ ಬೆಳೆ ಪದ್ಧತಿ ಅನುಸರಿಸಿದರೆ ಸುಸ್ಥಿರ ಲಾಭ ಗಳಿಕೆಗೆ ಸಹಕಾರಿಯಾಗಬಲ್ಲದು’ ಎಂದು ಜಿಯಾವುಲ್ಲಾ ಕೆ. ಹೇಳಿದರು.
‘ಜಿಲ್ಲೆಯಲ್ಲಿ 4.54 ಲಕ್ಷ ಹೆಕ್ಟೇರ್ ಭೂಪ್ರದೇಶವಿದೆ. ಇದರಲ್ಲಿ 3.29 ಲಕ್ಷ ಹೆಕ್ಟೇರ್ ಸಾಗುವಳಿ ಭೂಮಿ ಇದೆ. 1.96 ಲಕ್ಷ ಹೆಕ್ಟೇರ್ ಮುಂಗಾರು ಹಾಗೂ 20,000 ಹೆಕ್ಟೇರ್ ಹಿಂಗಾರು ಮತ್ತು 56,000 ಹೆಕ್ಟೇರ್ ಬೇಸಿಗೆ ಬೆಳೆ ಪ್ರದೇಶವಿದೆ. 1.10 ಲಕ್ಷ ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವಿದೆ. 3.25 ಲಕ್ಷ ರೈತರು ಜಿಲ್ಲೆಯಲ್ಲಿ ಇದ್ದಾರೆ’ ಎಂದು ವಿವರಿಸಿದರು.
‘ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ 1.20 ಲಕ್ಷ ಹೆಕ್ಟೇರ್. ಇದರಲ್ಲಿ 1.08 ಲಕ್ಷ ಹೆಕ್ಟೇರ್ ಅಡಿಕೆಯೇ ಇದೆ. ಕೃಷಿಗಿಂತ ತೋಟಗಾರಿಕೆ ಬೆಳೆಗಳತ್ತ ಒಲವು ಹೆಚ್ಚಾಗುತ್ತಿದೆ. 2,000 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು, ಕಾಫಿ, ಜಾಯಿಕಾಯಿ, ಏಲಕ್ಕಿ ಸೇರಿ ಹಲವು ಬೆಳೆಗಳನ್ನು ಬೆಳೆಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್ ಮಾಹಿತಿ ನೀಡಿದರು.
‘ಅಡಿಕೆ ತೋಟದಲ್ಲಿ ಅಂತರ ಬೆಳೆ ಬೆಳೆಯಲು ಸರ್ಕಾರ ಉತ್ತೇಜನ ನೀಡುತ್ತಿದೆ. ತೋಟಗಳಲ್ಲಿ ಬಹುಮಹಡಿ ಬೆಳೆಗಳು ಇದ್ದಾಗ ಸೂರ್ಯನ ಕಿರಣಗಳು ಸರಿಯಾಗಿ ಎಲ್ಲ ಬೆಳೆಗಳಿಗೆ ಸಿಗಲಿದೆ. ಪೋಷಕಾಂಶಕ್ಕೆ ಸ್ಪರ್ಧೆ ಕೂಡ ಇರುವುದಿಲ್ಲ’ ಎಂದು ವಿವರಿಸಿದರು.
ಜಗಳೂರು ತಾಲ್ಲೂಕಿನಲ್ಲಿ ಕೂರಿಗೆ ಭತ್ತ ಬೇಸಾಯ ಸಾಧ್ಯವೇ? ಇದಕ್ಕೆ ಕೃಷಿ ಇಲಾಖೆಯಿಂದ ಸಹಾಯಧನ ಸಿಗುತ್ತದೆಯೇ?
ಕಲ್ಲೇಶ್‌ರಾಜ್ ಪಟೇಲ್ ಜಗಳೂರು
ಕೂರಿಗೆ ಭತ್ತ ಬಿತ್ತನೆ ಇತ್ತೀಚೆಗೆ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿರುವ ಪರಿಕಲ್ಪನೆ. ಜಗಳೂರು ತಾಲ್ಲೂಕಿನಲ್ಲಿ ಕೂಡ ಈ ವಿಧಾನದಲ್ಲಿ ಭತ್ತ ಬೆಳೆಯಲು ಸಾಧ್ಯವಿದೆ. ಇವು ಬೇಗ ಬೆಳೆಯಲಿದ್ದು ಸಸಿ ಮಾಡುವ ಸಮಯದ ಉಳಿತಾಯ ಆಗಲಿದೆ. ರೈತರು ಕಳೆ ನಿರ್ವಹಣೆಗೆ ಹೆಚ್ಚು ಗಮನ ಕೊಡಬೇಕು. ಇಳುವರಿ ಕೂಡ ಹೆಚ್ಚು. ಬಿತ್ತನೆ ಬೀಜ ಹಾಗೂ ಕೀಟನಾಶಕ ಸಾವಯವ ಗೊಬ್ಬರಗಳು ಸಬ್ಸಿಡಿ ದರದಲ್ಲಿ ಸಿಗುತ್ತವೆ.
ಕೃಷಿ ಭೂಮಿಗೆ ಕೆರೆ ಮಣ್ಣು ಹಾಕುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ನಿಜಕ್ಕೂ ಪ್ರಯೋಜನವಾಗುತ್ತದೆಯೇ?
ಬಸವರಾಜ ಮರೇನಹಳ್ಳಿ ಜಗಳೂರು
ತಾಲ್ಲೂಕು ಕೆರೆ ಮಣ್ಣು ಶೇ 100ರಷ್ಟು ಫಲವತ್ತಾಗಿರುತ್ತದೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಕಪ್ಪು ಭೂಮಿಯಾಗಿದ್ದರೆ ಕೆಂಪು ಮಣ್ಣು ಹಾಕಿದಾಗ ಸಮತೋಲನ ಕಾಪಾಡಲು ಸಾಧ್ಯ. ಇಲ್ಲವಾದರೆ ಕೆರೆ ಮಣ್ಣು ಹಾಕಿಸಲು ವಿನಾಕಾರಣ ಹಣಪೋಲು ಮಾಡಿದಂತಾಗುತ್ತದೆ. ಕೆರೆಯ ಮೇಲ್ಭಾಗದ ಮಣ್ಣು ಮಾತ್ರ ಫಲವತ್ತಾಗಿರುತ್ತದೆ. ಇದರ ಬದಲು ಸಾವಯವ ಗೊಬ್ಬರ ಎರೆಹುಳು ಗೊಬ್ಬರದ ತೊಟ್ಟಿ ನಿರ್ಮಾಣ ಸೂಕ್ತ.
ಅಡಿಕೆ ಹಿಂಗಾರ ಒಣಗುತ್ತಿದ್ದು ಹರಳು ಉದುರುವ ಪ್ರಮಾಣ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕೆ ಏನು ಮಾಡಬೇಕು?
ಮಲ್ಲಿಕಾರ್ಜುನ್ ಬಲಮುರಿ ಹೊನ್ನಾಳಿ ತಾಲ್ಲೂಕು
ಲಘು ಪೋಷಕಾಂಶಗಳ ಕೊರತೆಯಿಂದ ಅಡಿಕೆ ಹಿಂಗಾರ ಒಣಗುತ್ತದೆ. ಸಾವಯವ ಹಾಗೂ ಹಸಿರೆಲೆ ಗೊಬ್ಬರ ನೀಡಿದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಮೆಕ್ಕೆಜೋಳದ ಬದಲು ಸೆಣಬು ದ್ವಿದಳ ಧಾನ್ಯ ಸೇರಿ ಇತರ ಬೆಳೆಗಳನ್ನು ಅಂತರ ಬೆಳೆಯಾಗಿ ಹಾಕಬೇಕು. ಆಗ ಹರಳು ಉದುರುವುದು ನಿಯಂತ್ರಣಕ್ಕೆ ಬರುತ್ತದೆ. ಎರೆಹುಳುಗಳ ಸಂಖ್ಯೆ ಹೆಚ್ಚಾಗಿ ಭೂಮಿಗೂ ಅನುಕೂಲವಾಗಲಿದೆ.
ಎಂಎಸ್‌ಪಿ ಅಡಿ ಮೆಕ್ಕೆಜೋಳ ಖರೀದಿ ಕೇಂದ್ರದ ಮಾಹಿತಿ ಕೊಡಿ.
ರಾಜು ಬಿ. ಲಕಂಪುರ
ಜಗಳೂರು ತಾಲ್ಲೂಕು ಜಿಲ್ಲೆಯ ಕುಕ್ಕುವಾಡದಲ್ಲಿ ಡಿಸ್ಟಿಲರಿ ಇರುವುದರಿಂದ ಅಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲಾಗಿದೆ. ರೈತರು ಅಲ್ಲಿಗೆ ತೆರಳಿ ಮಾರಾಟ ಮಾಡಬಹುದು. ಜಗಳೂರಿನವರಿಗೆ ಸ್ವಲ್ಪ ಸಮಸ್ಯೆಯಾಗಬಹುದು. ನ್ಯಾಮತಿ ಹೊನ್ನಾಳಿಯ ರೈತರು ಶಿಕಾರಿಪುರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೆಎಂಎಫ್‌ನವರು ಪೌಲ್ಟ್ರಿಯವರು ಖರೀದಿಸಲಿದ್ದಾರೆ. ಸ್ವಲ್ಪ ದಿನ ಕಾಯಬೇಕಾಗಬಹುದು. ರೈತರಿಗೆ ಗೊಬ್ಬರದ ಹೊರೆ ಜಾಸ್ತಿಯಾಗುತ್ತಿದೆ. ಇದಕ್ಕೆ ಪರಿಹಾರವೇನು? ತಿರುಮಲೇಶ್ ಭರಮಸಮುದ್ರ ಕಡಿಮೆ ಖರ್ಚಿನಲ್ಲಿ ಬಳಸಬಹುದಾದ ಜೀವಾಮೃತ ಗೋಕೃಪಾಮೃತ ಎಂಬ ಜೈವಿಕ ಗೊಬ್ಬರಗಳಿವೆ. ಉದಾಹರಣೆಗೆ ಅಡಿಕೆ ಸಸಿ ಪಕ್ಕದಲ್ಲೇ ಗ್ಲಿರಿಸಿಡಿಯಾ ಡಯಾಂಚ ಹಲಸಂದೆ ಸೇರಿದಂತೆ ಇತರೆ ಹಸಿರೆಲೆ ಗಿಡಗಳನ್ನು ಹಾಕಿಕೊಳ್ಳಿ. ಸ್ವಲ್ಪ ಬೆಳೆದ ಗಿಡವನ್ನು ಸವರಿ ಅಡಿಕೆ ಗಿಡದ ಬುಡದಲ್ಲಿ ಮುಚ್ಚಿಗೆ ಮಾಡಬೇಕು. ಬೇರೆ ಕಳೆಗಳು ಬೆಳೆದಿದ್ದರೆ ಕಳೆನಾಶಕ ಬಳಸಿ ನಾಶಪಡಿಸಬಾರದು.
ಅಡಿಕೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದರೆ ಪ್ರೋತ್ಸಾಹಧನ ಯಾವ ರೀತಿ ನೀಡಲಾಗುತ್ತದೆ? ಬಸವರಾಜಪ್ಪ ನ್ಯಾಮತಿ ಹಾಗೂ ಹೇಮಂತ್ ಮಲ್ಲನಾಯಕನಹಳ್ಳಿ ಅಡಿಕೆ ನಾಟಿ ಮಾಡಿದ ಎಲ್ಲ ವರ್ಗದ ರೈತರಿಗೂ ಶೇ 90ರಷ್ಟು ಸಹಾಯಧನ ನೀಡಲಾಗುತ್ತದೆ. ತೋಟಗಾರಿಕೆ ಇಲಾಖೆಯು 30 ಡೀಲರ್‌ಗಳನ್ನು ಗುರುತಿಸಿದೆ. ಈ ಪೈಕಿ ಯಾವುದಾದರೂ ಒಂದು ಕಂಪನಿಯಿಂದ ಹನಿ ನೀರಾವರಿ ಉಪಕರಣಗಳನ್ನು ಖರೀದಿಸಬೇಕು. ಶೇ 10ರಷ್ಟು ಹಣ ಕಟ್ಟಿದರೆ ಸಬ್ಸಿಡಿಯ ಬಾಕಿ ಮೊತ್ತವು ಡೀಲರ್‌ಗಳಿಗೆ ಪಾವತಿಯಾಗುತ್ತದೆ.
ಅಡಿಕೆ ವಿಮೆ ಪರಿಹಾರ ಹಣ ಬಂದಿಲ್ಲ. ಕಾರಣ ಏನು?
ಲಕ್ಷ್ಮಣ್ ಮಾಯಕೊಂಡ
2024–25ನೇ ಸಾಲಿನಲ್ಲಿ ಮಾಯಕೊಂಡ ಭಾಗಕ್ಕೆ ಈಗಾಗಲೇ ವಿಮೆ ಪರಿಹಾರ ನೀಡಲಾಗಿದೆ. ಪ್ರೀಮಿಯಂ ಪಾವತಿಸಿರುವ ದಾಖಲೆಯನ್ನು ಕಚೇರಿಗೆ ಸಲ್ಲಿಸಿದರೆ ವಿಮೆ ಪರಿಹಾರದ ಸ್ಥಿತಿ ಪರಿಶೀಲಿಸಲಾಗುವುದು.
ಅಡಿಕೆ ತೋಟಕ್ಕೆ ಹನಿ ನೀರಾವರಿ ಪದ್ಧತಿಯಲ್ಲಿ ಬೇಸಿಗೆಯಲ್ಲಿ ನೀರಿನ ನಿರ್ವಹಣೆ ಹೇಗೆ? ಷಣ್ಮುಖ ಹಳೆಬಾತಿ ಹರಿಹರ
ಹನಿ ನೀರಾವರಿ ಪದ್ಧತಿಯಿಂದ ನೀರು ಉಳಿತಾಯವಾಗುತ್ತದೆ. ಕಡ್ಡಾಯವಾಗಿ ಡ್ರಿಪ್ಪರ್ (ಹನಿಕೆ) ಮೂಲಕವೇ ನೀರು ನೀಡಬೇಕು. ಮೈಕ್ರೊಟ್ಯೂಬ್ ಮೂಲಕ ಹರಿಸಿದರೆ ಗಿಡಕ್ಕೆ ಎಷ್ಟು ಪ್ರಮಾಣದ ನೀರು ಹರಿಯುತ್ತದೆ ಎಂಬುದು ಗೊತ್ತಾಗುವುದಿಲ್ಲ. ವಾರಕ್ಕೆ ಒಮ್ಮೆ ಪ್ರತಿ ಗಿಡಕ್ಕೆ 18 ಲೀಟರ್ ನೀರು ನೀಡಿದರೆ ಸಾಕಾಗುತ್ತದೆ.
ಅಡಿಕೆಯ ಇಳುವರಿ ಕಡಿಮೆಯಾಗಲು ಕಾರಣವೇನು? ರುದ್ರೇಶ್ ಬಸವಾಪಟ್ಟಣ ಲೋಕೇಶಪ್ಪ ಬಿ. (ಸಹಾಯಕ ತೋಟಗಾರಿಕೆ ನಿರ್ದೇಶಕ):
ಗಿಡಗಳಿಗೆ ಸೂರ್ಯನ ಶಾಖ ಸಮರ್ಪಕವಾಗಿ ದೊರೆತರೆ ಮಾತ್ರ ಉತ್ತಮ ಇಳುವರಿ ಪಡೆಯಬಹುದು. ಇದಕ್ಕಾಗಿ ‘ಬಹುಮಹಡಿ ಬೆಳೆ ಪದ್ಧತಿ’ಯನ್ನು ಅನುಸರಿಸಬೇಕು. ಹೆಚ್ಚು ಎತ್ತರದ ಅಡಿಕೆ ಕಾಳುಮೆಣಸು ಜೊತೆಗೆ ಕಡಿಮೆ ಎತ್ತರದ ಕೊಕೊ ಜಾಯಿಕಾಯಿ ಏಲಕ್ಕಿ ಬೆಳೆಗಳನ್ನು ಬೆಳೆಯುವುದರಿಂದ ಸೂರ್ಯನ ಶಾಖ ಪೋಷಕಾಂಶ ಎಲ್ಲ ಗಿಡಗಳಿಗೂ ತಲುಪುತ್ತದೆ.
ಅಡಿಕೆ ಹಾಗೂ ಕಾಳುಮೆಣಸು ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ಸಿಗುವ ಪ್ರೋತ್ಸಾಹ ಧನ ಬಳಸಿಕೊಳ್ಳುವುದು ಹೇಗೆ?
ಉಮಾ ತಾವರೆಕೆರೆ ಲೋಕೇಶಪ್ಪ ಬಿ.
ಪ್ರತಿ ಹೆಕ್ಟೇರ್‌ಗೆ ₹24000 ಸಹಾಯಧನ ನೀಡಲಾಗುತ್ತದೆ. ನಿಮ್ಮ ಸಮೀಪದ ಚನ್ನಗಿರಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದು.
ಅಡಿಕೆಗೆ ಗೊಬ್ಬರವನ್ನು ಯಾವ ಸಂದರ್ಭದಲ್ಲಿ ನೀಡಿದರೆ ಅನುಕೂಲ? ಗುರುನಾಥ್ ಮಾಯಕೊಂಡ
ಅಡಿಕೆಗೆ ಮುಂಗಾರು ಹಂಗಾಮಿನಲ್ಲಿ ಮೇ ಜೂನ್‌ನಲ್ಲಿ ಹಾಗೂ ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್ ನವೆಂಬರ್‌ನಲ್ಲಿ ಗೊಬ್ಬರ ನೀಡಬೇಕು. ಇದರಿಂದ ಅಡಿಕೆ ಇಳುವರಿಗೆ ಅನುಕೂಲವಾಗುತ್ತದೆ.
ಸಪೋಟ ಮಾವು ತೆಂಗು ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ. ತೋಟಗಾರಿಕೆ ಇಲಾಖೆಯಿಂದ ಯಾವ ರೀತಿಯ ನೆರವು ಸಿಗಬಹುದು?
ಮೇಘಾನಂದ ಜೆ.ಆರ್. ಹೊಸಜೋಗ ಮತ್ತು ವಿವೇಕಾನಂದ ಸೂರಗೊಂಡನಕೊಪ್ಪ
ಈ ಬೆಳೆಗಳಿಗೆ ‘ವಿಬಿ–ಜಿ ರಾಮ್ ಜಿ’ (ಉದ್ಯೋಗ ಖಾತರಿ) ಯೋಜನೆಯಡಿ ಸಹಾಯಧನ ಸಿಗಲಿದೆ. ಜಾಬ್‌ಕಾರ್ಡ್ ಆಧರಿಸಿ ನೆರವು ಪಡೆಯಲು ಅವಕಾಶವಿದೆ. ಇವುಗಳಿಗೆ ಬ್ಯಾಂಕ್‌ಗಳಲ್ಲಿ ಬೆಳೆಸಾಲದ ಸೌಲಭ್ಯವೂ ಇದೆ.
ಡಯಾಂಚ ಹಾಗೂ ಸೆಣಬು ಬೀಜಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಸಿಗುತ್ತಿಲ್ಲ. ಪರಿಹಾರ ಏನು? ಮಹೇಶ್ವರಪ್ಪ ಮಾದೇನಹಳ್ಳಿ ಹೊನ್ನಾಳಿ
ಹಸಿರೆಲೆ ಗೊಬ್ಬರದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವಾಗ ಇಲಾಖೆಯ ವತಿಯಿಂದ ಬೀಜ ವಿತರಿಸಲಾಗುತ್ತಿತ್ತು. ರೈತರಲ್ಲಿ ಅರಿವು ಮೂಡಿದ್ದು ಒಲವು ಹೆಚ್ಚಾಗಿದೆ. ಈ ಬೀಜಗಳು ಕೃಷಿ ಉತ್ಪಾದಕರ ಕಂಪನಿ (ಎಫ್‌ಪಿಒ) ಹಾಗೂ ಖಾಸಗಿ ಅಂಗಡಿಗಳಲ್ಲಿ ಲಭ್ಯ ಇವೆ. ಹಸಿರೆಲೆ ಗೊಬ್ಬರದ ಬೀಜಗಳಿಗೆ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಾಗುವುದು. ರೈತರೇ ಬೀಜಗಳನ್ನು ಸಂರಕ್ಷಿಸಿ ಬಳಸುವುದು ಒಳಿತು.
ತೆಂಗಿನ ತೋಟಕ್ಕೆ ಕಪ್ಪುತಲೆ ಹುಳು ಬಾಧೆ ಹೆಚ್ಚಾಗಿದೆ. ಪರಿಹಾರ ಏನು? ಕುಂದೂರು ಮಂಜಪ್ಪ ಮತ್ತು ಶಿವಕುಮಾರ್ ಹೊಳೆಸಿರಿಗೆರೆ
ತೆಂಗು ಬೆಳೆಗೆ ಕಪ್ಪುತಲೆ ಹುಳು ಬಾಧೆ ಬಿಳಿ ನೊಣಗಳ ಹಾವಳಿ ಕಂಡುಬಂದಿದೆ. ರೋಗಬಾಧೆಯ ತೀವ್ರತೆಯನ್ನು ಅರಿಯಲು ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. 15000 ತೋಟಗಳ ಪೈಕಿ 5000 ತೋಟಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ಇದಕ್ಕೆ ಪರಿಹಾರವಾಗಿ ಪರಪಜೀವಿ ಹಾಗೂ ಜೈವಿಕ ಶಿಲೀಂದ್ರನಾಶಕವನ್ನು ಪ್ರಯೋಗಾಲಯಗಳಲ್ಲಿ ಉತ್ಪಾದಿಸಿ ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ.
ಅಡಿಕೆಗೆ ಎಲೆಚುಕ್ಕೆ ರೋಗ ಸುಳಿ ತಿಗಣಿ ಹೆಚ್ಚಾಗಿ ಬಾಧಿಸುತ್ತಿದೆ. ಏನು ಮಾಡಬೇಕು?
ದಿನೇಶ್‌ಕುಮಾರ್ ಬಸವಾಪಟ್ಟಣ; ಧನಂಜಯ್ ಮಾಯಕೊಂಡ ಮತ್ತು ದ್ಯಾಮಣ್ಣ ಹಾಲುವರ್ತಿ
ಅಡಿಕೆಗೆ ಆರಂಭಿಕ 5ರಿಂದ 6 ವರ್ಷದ ವರೆಗೆ ಈ ಎರಡು ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಹಸಿರೆಲೆ ಗೊಬ್ಬರ ಬೆಳೆಯುವುದು ಶಾಶ್ವತ ಪರಿಹಾರ. ತೊಗರಿ ಹಲಸಂದೆ ಸೇರಿದಂತೆ ಅಡಿಕೆಯಲ್ಲಿ ಅಂತರ ಬೆಳೆಗಳನ್ನು ಬೆಳೆಯಬೇಕು. ಇವು ಭೂಮಿಯ ತಾಪಮಾನ ನಿಯಂತ್ರಣ ಮಾಡಿ ರೋಗಬಾಧೆಯನ್ನು ತಪ್ಪಿಸುತ್ತವೆ. ರೋಗಗಳು ಇದ್ದಾಗ ಮಾತ್ರ ಕೀಟನಾಶಕ ಸಿಂಪಡಿಸಿ.
ರೋಗಬಾಧೆ ಹತೋಟಿಗೆ ಸಲಹೆ
ಅಡಿಕೆಯಲ್ಲಿ ಕೆಂಪು ನುಸಿ ಹತೋಟಿಗೆ ಈಥಿಯಾನ್ 3 ಮಿ.ಲೀ. ಮತ್ತು ಅಸಿಫೇಟ್ 2 ಗ್ರಾಂ ಔಷಧಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗಳ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ಸಿಂಪಡಣೆ ಮಾಡಬೇಕು. ಅಥವಾ ಹೆಕ್ಸಿತಿಯಾಜಾಕ್ಸ್ ಮತ್ತು ಪ್ರಾಪರ್ಜೈಟ್ ಔಷಧಿಗಳನ್ನು 1.5 ಮಿ.ಲೀ.ನಂತೆ ಪ್ರತಿ ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಬಹುದು.
ಸುಳಿ ತಿಗಣೆ ಬಾಧೆಗೆ ಥಯೊಮೆಕಾಥ್ಲಾಮ್ 0.25 ಗ್ರಾಂ ಮತ್ತು ಪ್ರಾಪಿಕೊನೊಜಾಲ್ 1 ಮಿ.ಲೀ. ಅನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಸುಳಿ ಭಾಗಕ್ಕೆ ಸಿಂಪಡಣೆ ಮಾಡಿ ಹತೋಟಿಗೆ ತರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.