
ಜಗಳೂರು: ದುಬೈ ಪ್ರವಾಸಕ್ಕೆ ತೆರಳಿದ್ದ ಪಟ್ಟಣದ ಹಾಗೂ ತಾಲ್ಲೂಕಿನ ತೋರಣಗಟ್ಟೆ ಗ್ರಾಮದ 14 ಜನ ಪ್ರವಾಸಿಗರು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಎರಡು ದಿನಗಳಿಂದ ಸಿಲುಕಿದ್ದು, ತಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಿಗದಿಯಂತೆ ಫೆ. 23ರಂದು ದುಬೈ ಮತ್ತು ಆಸುಪಾಸಿನ ದೇಶಗಳಿಗೆ ಪ್ರವಾಸ ತೆರಳಿದ್ದರು. ಭಾನುವಾರ ರಾತ್ರಿ ಬೆಂಗಳೂರಿಗೆ ವಾಪಸ್ ಬರಬೇಕಿತ್ತು. ಆದರೆ, ವೈಮಾನಿಕ ದಾಳಿಯ ಹಿನ್ನೆಲೆಯಲ್ಲಿ ವಿಮಾನ ಸಂಚಾರವನ್ನು ದಿಢೀರ್ ರದ್ದು ಮಾಡಿದ್ದರಿಂದ ಪ್ರವಾಸಿಗರು ಸ್ವದೇಶಕ್ಕೆ ಹಿಂದಿರುಗಲು ಸಾಧ್ಯವಾಗಿಲ್ಲ. ಅವರ ಸಂಬಂಧಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಶಾರ್ಜಾದಲ್ಲಿ ಡ್ರೋನ್ ಪ್ರತಾಪ್ ಸೇರಿದಂತೆ ಹಲವು ಕನ್ನಡಿಗರು ಅತಂತ್ರರಾಗಿದ್ದು, ಮಾಧ್ಯಮದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಹಾಗೂ ಪತ್ನಿ ಉಮಾದೇವಿ, ನಿವೃತ್ತ ಉಪನ್ಯಾಸಕ ಶಿವಕುಮಾರ್ ಹಾಗೂ ಪತ್ನಿ ವರಲಕ್ಷ್ಮಿ, ಎಂಜಿನಿಯರ್ ಮಲ್ಲಿಕಾರ್ಜುನ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರುದ್ರಪ್ಪ ಕುಟುಂಬದ ಸದಸ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
‘ನನ್ನ ಸಹೋದರ ಪ್ರೊ.ಚಂದ್ರಶೇಖರ್ ಅವರು ಭಾನುವಾರ ಬೆಳಿಗ್ಗೆ ನಮ್ಮ ಸಹೋದರಿ ಕಮಲಮ್ಮ ಅವರಿಗೆ ಕರೆ ಮಾಡಿದ್ದರು. ವಿಮಾನ ಸೌಲಭ್ಯ ಇಲ್ಲದ ಕಾರಣ ಸಮೀಪದ ವಸತಿಗೃಹದಲ್ಲಿ ತಂಗಲು ವ್ಯವಸ್ಥೆ ಮಾಡಿದ್ದಾರೆ. ಎಲ್ಲವೂ ದುಬಾರಿಯಾಗಿದೆ’ ಎಂದು ಹೇಳಿದ್ದಾರೆ ಎಂದು ತೋರಣಗಟ್ಟೆ ಗ್ರಾಮದ ಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮ್ಮ ಸಂಬಂಧಿ ರುದ್ರಪ್ಪ ನನಗೆ ಕರೆ ಮಾಡಿ, ಸಮೀಪದಲ್ಲಿ ಬಾಂಬ್ ದಾಳಿ ಸದ್ದಾಗುತ್ತಿದೆ. ಕಟ್ಟಡಗಳ ಮೇಲೆ ಬಾಂಬ್ ಸ್ಫೋಟದ ಸದ್ದು ಆಗಾಗ್ಗೆ ಕೇಳಿ ಬರುತ್ತಿದೆ. ಆತಂಕದ ವಾತಾವರಣ ಇದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ನಮ್ಮನ್ನು ಸುರಕ್ಷಿತವಾಗಿ ಕರೆ ತರಲು ಪ್ರಯತ್ನ ನಡೆಸಬೇಕು. ಆದಷ್ಟು ಬೇಗ ನಾವು ಮರಳಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ’ ಎಂದು ಅವರು ತಿಳಿಸಿದರು.
‘ಜಗಳೂರು ತಾಲ್ಲೂಕಿನ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಸಂಬಂಧಿಕರು ಆತಂಕ ಪಡಬೇಡಿ’ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.