ADVERTISEMENT

ದಾವಣಗೆರೆ: ಕ್ಷಯ ನಿವಾರಣೆಗೆ JSW ಕಂಪನಿಯ ಸಿಎಸ್‌ಆರ್‌ ನಿಧಿಯಿಂದ ನೆರವು

ರಾಮಮೂರ್ತಿ ಪಿ.
Published 19 ಸೆಪ್ಟೆಂಬರ್ 2025, 6:48 IST
Last Updated 19 ಸೆಪ್ಟೆಂಬರ್ 2025, 6:48 IST
ದಾವಣಗೆರೆ ಜಿಲ್ಲೆಯ ಕ್ಷಯರೋಗಿಯೊಬ್ಬರಿಗೆ ಅಧಿಕಾರಿಗಳು ‘ಫುಡ್‌ ಕಿಟ್’ ವಿತರಿಸುತ್ತಿರುವುದು
ದಾವಣಗೆರೆ ಜಿಲ್ಲೆಯ ಕ್ಷಯರೋಗಿಯೊಬ್ಬರಿಗೆ ಅಧಿಕಾರಿಗಳು ‘ಫುಡ್‌ ಕಿಟ್’ ವಿತರಿಸುತ್ತಿರುವುದು   

ದಾವಣಗೆರೆ: ಜಿಲ್ಲೆಯಲ್ಲಿನ 1,248 ಕ್ಷಯ (ಟಿ.ಬಿ.) ರೋಗಿಗಳಿಗೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದಲ್ಲಿರುವ ‘ಜೆಎಸ್‌ಡಬ್ಲ್ಯೂ ಸ್ಟೀಲ್ಸ್‌’   ಕಂಪನಿಯು ತನ್ನ ಸಿಎಸ್‌ಆರ್‌ (ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ) ನಿಧಿ ಅಡಿ, ‘ಜೆಎಸ್‌ಡಬ್ಲ್ಯೂ ಪ್ರತಿಷ್ಠಾನ’ದ ಮೂಲಕ ಪ್ರತೀ ತಿಂಗಳು ಆಹಾರದ ಕಿಟ್ ವಿತರಿಸುತ್ತಿದೆ.

ಈ ಮೂಲಕ ಪೌಷ್ಟಿಕಾಂಶ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ನೆರವು ನೀಡುತ್ತಿದೆ. 

ಬಳ್ಳಾರಿ ಜಿಲ್ಲೆಯಲ್ಲಿನ ಕ್ಷಯ ರೋಗಿಗಳಿಗೆ 2–3 ವರ್ಷಗಳಿಂದ ಫುಡ್ ಕಿಟ್ ವಿತರಿಸುತ್ತಿದ್ದ ಜೆಎಸ್‌ಡಬ್ಲ್ಯೂ ಪ್ರತಿಷ್ಠಾನವು ಈ ವರ್ಷ ದಾವಣಗೆರೆ ಜಿಲ್ಲೆಯಲ್ಲೂ ಫುಡ್ ಕಿಟ್ ವಿತರಿಸಲು ಶುರು ಮಾಡಿದೆ. 3 ಕೆ.ಜಿ. ಅಕ್ಕಿ, ಹೆಸರು ಬೇಳೆ, ತೊಗರಿ ಬೇಳೆ, ಶೇಂಗಾ, ಬೆಲ್ಲ ಹಾಗೂ ಅಡುಗೆ ಎಣ್ಣೆಯನ್ನು ಫುಡ್‌ ಕಿಟ್‌ ಹೊಂದಿದೆ.

ADVERTISEMENT

‘ಈ ಹಿಂದೆ ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ, ಪ್ರಾದೇಶಿಕ ಆಯುಕ್ತ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರ ಸಹಕಾರದೊಂದಿಗೆ ಜೆಎಸ್‌ಡಬ್ಲ್ಯೂ ಪ್ರತಿಷ್ಠಾನದೊಂದಿಗೆ ಚರ್ಚಿಸಿದ್ದೆವು. ಫುಡ್‌ ಕಿಟ್‌ ವಿತರಣೆಯನ್ನು ನಮ್ಮ ಜಿಲ್ಲೆಗೂ ವಿಸ್ತರಿಸಲು ಅವರು ಒಪ್ಪಿದರು. ಇದರಿಂದ ಕ್ಷಯ ರೋಗಿಗಳಿಗೆ ಸಾಕಷ್ಟು ಸಹಾಯವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಜಿಲ್ಲೆಯಲ್ಲಿ 18 ನ್ಯಾಟ್‌ ಯಂತ್ರಗಳು: ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 18 ನ್ಯಾಟ್‌ ಯಂತ್ರಗಳಿವೆ. ಇವುಗಳ ಸಹಾಯದಿಂದ ಕ್ಷಯ ರೋಗವನ್ನು ಪತ್ತೆ ಹಚ್ಚಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತೀ ತಿಂಗಳು ಸರಾಸರಿ 4,000ದಿಂದ 5,000 ಕಫ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕಾಗಿ ₹ 1,500ರಿಂದ ₹ 2,000 ಭರಿಸಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.

ಸಂಪರ್ಕದಲ್ಲಿರುವವರಿಗೂ ಚಿಕಿತ್ಸೆ: ಕ್ಷಯ ರೋಗಿಗಳ ಸಂಪರ್ಕದಲ್ಲಿರುವವರಿಗೂ (ಕುಟುಂಬದ ಸದಸ್ಯರು) ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ನೀಡಲಾಗುತ್ತದೆ. ಕ್ಷಯ ರೋಗಿಯು ಕೆಮ್ಮಿದಾಗ ಗಾಳಿ ಮುಖಾಂತರ ಬ್ಯಾಕ್ಟೀರಿಯಾಗಳು ಬೇರೆಯವರಿಗೂ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ರೋಗಿಗಳೊಂದಿಗೆ ಸಂಪರ್ಕದಲ್ಲಿರುವವರಿಗೂ 12 ವಾರಗಳ ಚಿಕಿತ್ಸೆ ನೀಡಲಾಗುತ್ತಿದೆ.

Quote - ಕ್ಷಯ ರೋಗಿಗಳಿಗೆ ಒಂದು ವರ್ಷದ ಅವಧಿಗೆ ಪ್ರತೀ ತಿಂಗಳು ಫುಡ್ ಕಿಟ್ ವಿತರಿಸಲು ಜೆಎಸ್‌ಡಬ್ಲ್ಯೂ ಪ್ರತಿಷ್ಠಾನ ಮುಂದಾಗಿದೆ. ಅವಶ್ಯವಿದ್ದರೆ ಮುಂದಿನ ದಿನಗಳಲ್ಲೂ ನೆರವು ಪಡೆಯಲಾಗುತ್ತದೆ. ಅಂದಾಜು ₹ 1 ಕೋಟಿ ಮೊತ್ತದ ಕಾರ್ಯಕ್ರಮ ಇದಾಗಿದೆ ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

Quote - ಕ್ಷಯವು ವಾಸಿ ಮಾಡಬಹುದಾದ ಕಾಯಿಲೆ. ದೃಢಪಟ್ಟ ಕೂಡಲೇ ಚಿಕಿತ್ಸೆ ಪಡೆದರೆ ನಿರ್ಮೂಲನೆ ಮಾಡಬಹುದು. ಚಿಕಿತ್ಸೆ ಸೌಲಭ್ಯ ನೀಡುವ ಜತೆಗೆ ಕ್ಷಯ ರೋಗಿಗಳು ಬಯಸಿದರೆ ಅವರ ಗೋಪ್ಯತೆಯನ್ನೂ ಕಾಪಾಡಲಾಗುವುದು ಡಾ.ಮುರಳೀಧರ್ ಪಿ.ಡಿ. ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ

Quote - ಫುಡ್‌ ಕಿಟ್ ವಿತರಣೆಯಿಂದ ಪೌಷ್ಟಿಕ ಆಹಾರ ದೊರೆಯುತ್ತಿದೆ. ಇದರಿಂದಾಗಿ ತೂಕವೂ ಹೆಚ್ಚುತ್ತಿದೆ. ಸರ್ಕಾರದಿಂದ ಉಚಿತವಾಗಿ ಔಷಧಿ ದೊರೆಯುತ್ತಿರುವುದರಿಂದ ಅನುಕೂಲ ಆಗುತ್ತಿದೆ ಹಾಲೇಶ್ ಕುಳಂಬಿ ಕ್ಷಯ ರೋಗಿ

ದತ್ತು ಪಡೆಯಲು ಅವಕಾಶ ಕ್ಷಯ
ರೋಗಿಗಳಿಗೆ ಸಾರ್ವಜನಿಕರು ಉದ್ಯಮಿಗಳು ದಾನಿಗಳ ನೆರವಿನಿಂದ ಪೌಷ್ಟಿಕ ಆಹಾರ ಒದಗಿಸಲು ಕೇಂದ್ರ ಸರ್ಕಾರ ‘ನಿಕ್ಷಯ್‌ ಮಿತ್ರ’ ಅಭಿಯಾನ ಆರಂಭಿಸಿದೆ. ಈ ಅಭಿಯಾನದಡಿ ಜಿಲ್ಲೆಯಲ್ಲಿ 300 ದಾನಿಗಳು ಹೆಸರು ನೋಂದಾಯಿಸಿ ಕ್ಷಯ ರೋಗಿಗಳಿಗೆ ನೆರವು ನೀಡುತ್ತಿದ್ದಾರೆ. ಅಭಿಯಾನದಡಿ ಕ್ಷಯ ರೋಗಿಗಳನ್ನು ದತ್ತು ಪಡೆಯಲು ಅಥವ ಅವರಿಗೆ ಅವಶ್ಯವಾದ ಪೌಷ್ಟಿಕ ಆಹಾರ ಒಗಿಸಲು ಅವಕಾಶವಿದ್ದು ಕೆಲವು ದಾನಿಗಳು ನಿಯಮಿತವಾಗಿ ನೆರವು ನೀಡುತ್ತಿದ್ದಾರೆ.  ‘ಕ್ಷಯ ರೋಗಿಗಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ಒದಗಿಸಿದರೆ ಅವರು ಶೀಘ್ರವೇ ಗುಣಮುಖರಾಗಬಹುದಾಗಿದೆ ಆದರೆ ಅನೇಕರು ಬಡತನದ ಕಾರಣಕ್ಕೆ ಪೌಷ್ಟಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳೊಂದಿಗೆ ದಾನಿಗಳು ಸಂಘ– ಸಂಸ್ಥೆಗಳ ನೆರವಿನ ಮೂಲಕ ಕ್ಷಯ ರೋಗಿಗಳಿಗೆ ಅಗತ್ಯ ಚಿಕಿತ್ಸೆಯೊಂದಿಗೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನೂ ವಿತರಿಸಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ ಡಾ. ಪಿ.ಡಿ.ಮುರಳೀಧರ್.
ಕ್ಷಯ ರೋಗಿಗಳಿಗೆ ವರ್ಷದ ಅವಧಿಗೆ ಪ್ರತೀ ತಿಂಗಳು ಫುಡ್ ಕಿಟ್ ವಿತರಿಸಲು ಜೆಎಸ್‌ಡಬ್ಲ್ಯೂ ಪ್ರತಿಷ್ಠಾನ ಮುಂದಾಗಿದೆ. ಅವಶ್ಯವಿದ್ದರೆ ಮುಂದಿನ ದಿನಗಳಲ್ಲೂ ನೆರವು ಪಡೆಯ ಲಾಗುತ್ತದೆ. ಅಂದಾಜು ₹ 1 ಕೋಟಿ ಮೊತ್ತದ ಕಾರ್ಯಕ್ರಮ ಇದಾಗಿದೆ
ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಕ್ಷಯವು ವಾಸಿ ಮಾಡಬಹುದಾದ ಕಾಯಿಲೆ. ದೃಢಪಟ್ಟ ಕೂಡಲೇ ಚಿಕಿತ್ಸೆ ಪಡೆದರೆ ನಿರ್ಮೂಲನೆ ಮಾಡಬಹುದು. ಚಿಕಿತ್ಸೆ, ಸೌಲಭ್ಯ ನೀಡುವ ಜತೆಗೆ ರೋಗಿಗಳು ಬಯಸಿ ದರೆ ಅವರ ಗೋಪ್ಯತೆ ಕಾಪಾಡಲಾಗುವುದು
ಡಾ.ಮುರಳೀಧರ್ ಪಿ.ಡಿ., ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ
ಫುಡ್‌ ಕಿಟ್ ವಿತರಣೆಯಿಂದ ಪೌಷ್ಟಿಕ ಆಹಾರ ದೊರೆಯುತ್ತಿದೆ. ಇದರಿಂದಾಗಿ ತೂಕವೂ ಹೆಚ್ಚುತ್ತಿದೆ. ಸರ್ಕಾರದಿಂದ ಉಚಿತವಾಗಿ ಔಷಧಿ ದೊರೆಯುತ್ತಿರುವುದರಿಂದ ಅನುಕೂಲ ಆಗುತ್ತಿದೆ
ಹಾಲೇಶ್ ಕುಳಂಬಿ, ಕ್ಷಯ ರೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.