
ಮಾಯಕೊಂಡ: ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರದ ಜೊತೆ ಶುಭ ಕೋರಿ ಹಾಕಿರುವ ದೊಡ್ಡ ಫ್ಲೆಕ್ಸ್‌ಗಳು. ಮನೆಗಳಿಗೆ ಸುಣ್ಣ–ಬಣ್ಣ ಹಚ್ಚಿ, ಚೊಕ್ಕ ಮಾಡುತ್ತಿರುವ ಮನೆ ಮಂದಿ. ಶಾಮಿಯಾನ ಅಳಡಿಸುತ್ತಿರುವ ಕೆಲಸಗಾರರು. ಮಾರಾಟಕ್ಕೆ ಇಟ್ಟ ಥರಹೇವಾರಿ ವಸ್ತುಗಳನ್ನ ಖರೀದಿಸಲು ಮುಗಿಬೀಳುತ್ತಿರುವ ಜನ. ಪ್ರತಿ ಮನೆಯ ಮುಂದೆ ಕಟ್ಟಿ ಹಾಕಿರುವ ಕುರಿಗಳ ಸಾಲು ಈ ಗ್ರಾಮದಲ್ಲಿ ಆಚರಿಸಲಾಗುತ್ತಿರುವ ಜಾತ್ರೆಯ ಸಂಭ್ರಮವನ್ನ ಸಾರಿ ಸಾರಿ ಹೇಳುತ್ತಿದೆ.
ಹೋಬಳಿಯ ಹಿಂಡಸಕಟ್ಟೆ ಗ್ರಾಮದಲ್ಲಿ 29 ವರ್ಷಗಳ ನಂತರ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಾರಿ ತಯಾರಿ ನಡೆಯುತ್ತಿದೆ. ಗ್ರಾಮದಲ್ಲಿ ಸಂಭ್ರಮ ಮನೆಮಾಡಿದ್ದು, ಜಾತ್ರೆಗೆ ಬರುವ ಬೀಗರ ಆತಿಥ್ಯಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಮೂರು ದಶಕಗಳ ನಂತರ ಜಾತ್ರೆ ನಡೆಯುತ್ತಿರುವುದರಿಂದ ಹಿಂಡಸಕಟ್ಟೆ ಗ್ರಾಮಸ್ಥರಲ್ಲಿ ಸಂಭ್ರಮ ಜೋರಾಗಿದೆ.
ಜನವರಿ 6ರಿಂದ 9ರವರಗೆ ಜಾತ್ರೆ ನಡೆಯಲಿದೆ ಎಂದು ಗ್ರಾಮದ ಕೋಟೆಹಾಳ್ ನಾಗರಾಜಪ್ಪ, ರಾಮಚಂದ್ರಪ್ಪ, ಹನುಮಂತಪ್ಪ, ಕುಮಾರ, ಹನುಮಂತಪ್ಪ ಹಾಗೂ ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.
29 ವರ್ಷಗಳ ಹಿಂದೆ ಸಮರ್ಪಕವಾಗಿ ಮಳೆ–ಬೆಳೆ ಆಗದ ಕಾರಣ ಕರಿಯಮ್ಮ ದೇವಿ ಜಾತ್ರೆ ನಡೆಸದೇ ಸ್ಥಗಿತಗೊಳಿಸಲಾಗಿತ್ತು. ಎರಡು ವರ್ಷಗಳ ಹಿಂದೆ ಗ್ರಾಮದಲ್ಲಿ ನೂತನವಾಗಿ 6 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ್ದರಿಂದ ಈ ಬಾರಿ ದೇವಿಯ ಜಾತ್ರೆ ಆಚರಿಸಲು ಗ್ರಾಮಸ್ಥರು ಮುಂದಾಗಿದ್ದಾರೆ ಎನ್ನುತ್ತಾರೆ ಹುಚ್ಚವ್ವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಮಹಾಬಲೇಶ್.
ಜ. 6ರ ಬೆಳಿಗ್ಗೆ ಕರಿಯಮ್ಮ ದೇವಿಗೆ ವಾದ್ಯ ಮೇಳಗಳೊಂದಿಗೆ ಉಡಿ ತುಂಬುವ ಶಾಸ್ತ್ರ
ಜ. 7ರಂದು ಬೆಳಿಗ್ಗೆ ಸರಗ ಮಧ್ಯಾಹ್ನ ಬೇವು ಬೇಟೆ
ಜ. 8ರಂದು ಬೆಳಿಗ್ಗೆ 9.30ರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಅಡ್ಡ ಪಲ್ಲಕ್ಕಿ ಉತ್ಸವ
ಸಂಜೆ 7 ರಿಂದ ರಾತ್ರಿ 11ಗಂಟೆ ವರೆಗೆ ರಸಮಂಜರಿ ಕಾರ್ಯಕ್ರಮ ಬಳಿಕ ಪಾತಯ್ಯನ ಕುಣಿತ ನಡೆಯಲಿದೆ
ಜ. 9ರಂದು ಜಾತ್ರೆಯ ಸಮಾರೋಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.