ADVERTISEMENT

ದಾವಣಗೆರೆ: ‘ವಿಶೇಷ ಬಸ್‌’ ಸೌಲಭ್ಯ ವಿಸ್ತರಣೆಗೆ ಒಲವು

ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೂ ವಿಶೇಷ ಬಸ್‌ ಸೌಲಭ್ಯ ಪ್ರಸ್ತಾವ

ರಾಮಮೂರ್ತಿ ಪಿ.
Published 3 ಆಗಸ್ಟ್ 2025, 6:06 IST
Last Updated 3 ಆಗಸ್ಟ್ 2025, 6:06 IST
ರಾಜಹಂಸ
ರಾಜಹಂಸ   

ದಾವಣಗೆರೆ: ಪ್ರಯಾಣಿಕರಿಗಾಗಿ ಪ್ರೇಕ್ಷಣೀಯ ಸ್ಥಳಗಳಿಗೆ ಕಡಿಮೆ ದರದಲ್ಲಿ ವಿಶೇಷ ಬಸ್ ಸೌಲಭ್ಯ ಕಲ್ಪಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ)ಯ ದಾವಣಗೆರೆ ವಿಭಾಗವು ವಿಶೇಷ ಸಾರಿಗೆ ಸೇವೆಯನ್ನು ಮತ್ತಷ್ಟು ಸ್ಥಳಗಳಿಗೆ ವಿಸ್ತರಿಸಲು ಮುಂದಾಗಿದೆ.

ಸದ್ಯ ಶಿರಸಿಯ ಮಾರಿಕಾಂಬಾ ದೇವಾಲಯ ಹಾಗೂ ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಕೆಎಸ್‌ಆರ್‌ಟಿಸಿ ಕಲ್ಪಿಸಿತ್ತು. ಪ್ರಯಾಣಿಕರ ಬೇಡಿಕೆಯಂತೆ ಇದೀಗ ರಾಮಭಕ್ತ ಹನುಮಂತನ ಜನ್ಮಸ್ಥಳವಾದ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ, ಉತ್ತರಕನ್ನಡ ಜಿಲ್ಲೆಯ ಇಡುಗುಂಜಿ ಮಹಾಗಣಪತಿ ದೇವಸ್ಥಾನ ಹಾಗೂ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೂ ವಿಶೇಷ ಬಸ್ ಸೇವೆ ಒದಗಿಸಲು ಸಂಸ್ಥೆ ಚಿಂತನೆ ನಡೆಸಿದೆ.

ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ತೆರಳುವ ಪ್ರಯಾಣಿಕರು ಹೊನ್ನಾವರದ ಅಪ್ಸರಕೊಂಡ ಫಾಲ್ಸ್‌, ಇಕೋ ಬೀಚ್‌ನಲ್ಲೂ ಸುಂದರ ಕ್ಷಣಗಳನ್ನು ಕಳೆಯಬಹುದಾಗಿದೆ. 

ADVERTISEMENT

ಇನ್ನು ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೂ ಇಲ್ಲಿಂದ ವಿಶೇಷ ನೇರ ಬಸ್‌ ಸೌಲಭ್ಯ ಕಲ್ಪಿಸಲು ಕೆಎಸ್‌ಆರ್‌ಟಿಸಿ ಚಿಂತನೆ ನಡೆಸಿದೆ. ಈ ಟ್ರಿಪ್‌ನಲ್ಲಿ ಪ್ರಯಾಣಿಕರು ಪ್ರಸಿದ್ಧ ಜೋಗ ಜಲಪಾತದ ದೃಶ್ಯ ವೈಭವವನ್ನು ಆನಂದಿಸಬಹುದು. ನೂತನ ಸೇತುವೆ ಲೋಕಾರ್ಪಣೆಗೊಂಡ ಬಳಿಕ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನೇರ ಬಸ್‌ ಸೌಲಭ್ಯ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದ್ದರಿಂದ ಅಲ್ಲಗೆ ಬಸ್‌ ಸೌಲಭ್ಯ ಒದಗಿಸಲು ಚಿಂತನೆ ನಡೆದಿದೆ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು.

ಪ್ರಯಾಣಿಕರ ಬೇಡಿಕೆ ಆಧರಿಸಿ ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಬಸ್‌ ಸೌಲಭ್ಯ ಸಲ್ಲಿಸುವ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ಅನುಮತಿ ದೊರೆತ ಕೂಡಲೇ ಬೇರೆ ಬೇರೆ ಸ್ಥಳಗಳಿಗೂ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿಯ ವಿಭಾಗೀಯ ಸಂಚಾರ ಅಧಿಕಾರಿ ಫಕ್ರುದ್ದೀನ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

5 ವರ್ಷಗಳಿಂದ ಮಳೆಗಾಲದ ವೇಳೆ ಪ್ರತೀ ಭಾನುವಾರ ಶಿರಸಿ ಹಾಗೂ ಜೋಗಕ್ಕೆ ವಿಶೇಷ ಬಸ್ ಸೌಲಭ್ಯ ಒದಗಿಸಲಾಗುತ್ತಿದೆ. ಈ ಬಾರಿ ಜುಲೈ 13ರಂದು ವಿಶೇಷ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ್ದು, ಈಗಾಗಲೇ 3 ವಾರ ಇಲ್ಲಿನ ಪ್ರಯಾಣಿಕರು ಮಾರಿಕಾಂಬಾ ದೇವಿ ದರ್ಶನ ಹಾಗೂ ವಿಶ್ವ ಪ್ರಸಿದ್ಧ ಜೋಗ ಜಲಪಾತದ ದೃಶ್ಯ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ. ಆಗಸ್ಟ್‌ 3ರಂದು 20ಕ್ಕೂ ಹೆಚ್ಚು ಪ್ರಯಾಣಿಕರು ‘ರಾಜಹಂಸ’ ಬಸ್‌ನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ.

ಬೆಳಿಗ್ಗೆ 7.15ಕ್ಕೆ ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಡುವ ವಿಶೇಷ ಬಸ್ 7.45ಕ್ಕೆ ಹರಿಹರ ತಲುಪುತ್ತದೆ. ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರನ್ನು ಅಲ್ಲಿಂದ ಹತ್ತಿಸಿಕೊಂಡು ಬೆಳಿಗ್ಗೆ 10.30ಕ್ಕೆ ಶಿರಸಿ ತಲುಪುತ್ತದೆ. ಪ್ರಯಾಣಿಕರು ಮಾರಿಕಾಂಬಾ ದೇವಿಯ ದರ್ಶನ ಪಡೆದ ಬಳಿಕ ಅಲ್ಲಿಂದ ಹೊರಡುವ ಬಸ್ ಮಧ್ಯಾಹ್ನ 1 ಗಂಟೆಗೆ ಜೋಗ ತಲುಪುತ್ತದೆ. ಅಲ್ಲಿಂದ ಸಂಜೆ 4.30ಕ್ಕೆ ಹೊರಡುವ ಬಸ್ ರಾತ್ರಿ 8.30ಕ್ಕೆ ದಾವಣಗೆರೆ ತಲುಪುತ್ತದೆ. ಒಂದು ದಿನದ ಟ್ರಿಪ್‌ಗೆ ವಯಸ್ಕರಿಗೆ ₹ 650 ಹಾಗೂ ಮಕ್ಕಳಿಗೆ ₹ 500 ಪ್ರಯಾಣ ದರ ನಿಗದಿ ಮಾಡಲಾಗಿದೆ.

ಜುಲೈ 13ರಂದು 37 ಜನ ಪ್ರಯಾಣಿಕರು, ಜುಲೈ 20ರಂದು 30 ಪ್ರಯಾಣಿಕರು ಹಾಗೂ 27ರಂದು 16 ಜನ ಪ್ರಯಾಣಿಕರು ವಿಶೇಷ ಬಸ್‌ನಲ್ಲಿ ಪ್ರಯಾಣ ಬೆಳೆಸಿ ಪ್ರವಾಸದ ಅನುಭವ ಪಡೆದಿದ್ದಾರೆ.

ಅಂಜನಾದ್ರಿಗೆ ಬೇಡಿಕೆ
‘ಹನುಮ ಜನಿಸಿದ ನಾಡು’ ಎಂದೇ ಖ್ಯಾತವಾಗಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿಗೆ ಪ್ರತೀ ಭಾನುವಾರ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಒಂದು ದಿನದ ಪ್ರಯಾಣದಲ್ಲಿ ಅಂಜನಾದ್ರಿ ಬೆಟ್ಟ ಹಂಪಿ ಹಾಗೂ ತುಂಗಭದ್ರಾ ಜಲಾಶಯವನ್ನೂ (ಟಿ.ಬಿ.ಡ್ಯಾಂ) ಪ್ರಯಾಣಿಕರು  ಕಣ್ತುಂಬಿಕೊಳ್ಳಲಿದ್ದಾರೆ. ಅಂಜನಾದ್ರಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲು ಅಧಿಕ ಸಂಖ್ಯೆಯ ಪ್ರಯಾಣಿಕರು ಬೇಡಿಕೆ ಇಟ್ಟಿದ್ದಾರೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.