ADVERTISEMENT

ಬರದ ‘ಹಣೆಪಟ್ಟಿ’ ಕಳಚಿಕೊಳ್ಳುವತ್ತ ಜಗಳೂರು

57 ಕೆರೆ ತುಂಬಿಸುವ ಯೋಜನೆ ಸಾಕಾರ: ಬಯಲುಸೀಮೆಯಲ್ಲಿ ನೀರಿನ ಕಲರವ

ಡಿ.ಶ್ರೀನಿವಾಸ
Published 11 ಸೆಪ್ಟೆಂಬರ್ 2025, 5:45 IST
Last Updated 11 ಸೆಪ್ಟೆಂಬರ್ 2025, 5:45 IST
ಜಗಳೂರು ಕೆರೆ ಕಳೆದ ಅರ್ಧ ಶತಮಾನದಲ್ಲಿ ಎರಡನೇ ಭಾರಿ ಭರ್ತಿಯಾಗಿ ಹರಿಯುತ್ತಿದೆ
ಜಗಳೂರು ಕೆರೆ ಕಳೆದ ಅರ್ಧ ಶತಮಾನದಲ್ಲಿ ಎರಡನೇ ಭಾರಿ ಭರ್ತಿಯಾಗಿ ಹರಿಯುತ್ತಿದೆ   

ಜಗಳೂರು: ದಾವಣಗೆರೆ ಜಿಲ್ಲೆಯಲ್ಲೇ ಅತ್ಯಂತ ಕಡಿಮೆ ಮಳೆ ಬೀಳುವ, ಶಾಶ್ವತ ಬರಪ್ರದೇಶ ಎಂದೇ ಹೆಸರಾದ ಜಗಳೂರು ತಾಲ್ಲೂಕಿನ ಬರಿದಾದ ಕೆರೆಗಳು ಏತ ನೀರಾವರಿ ಸಾಕಾರದಿಂದ ಎರಡು ವರ್ಷದಿಂದ ಮೈದುಂಬುತ್ತಿವೆ.

ಪ್ರಸ್ತುತ ಮುಂಗಾರಿನಲ್ಲಿ ಈವರೆಗೆ 16ಕ್ಕೂ ಹೆಚ್ಚು ಕೆರೆಗಳ ಕೋಡಿ ಬಿದ್ದಿದ್ದು, ಕೆಲವೇ ದಿನಗಳಲ್ಲಿ ಮತ್ತಷ್ಟು ಕೆರೆಗಳ ಕೋಡಿ ಹರಿಯುವ ಸಾಧ್ಯತೆಗಳಿವೆ. ತಾಲ್ಲೂಕಿನ ಎಲ್ಲೆಡೆ ಕೆರೆಗಳು ನೀರಿನ ಸಂಪೂರ್ಣ ಸಂಗ್ರಹದಿಂದ ಕಂಗೊಳಿಸುತ್ತಿವೆ.

ರಾಜ್ಯದಲ್ಲೇ ವಿನೂತನ ಯೋಜನೆ ಎನಿಸಿರುವ ಹರಿಹರ ತಾಲ್ಲೂಕಿನ ದೀಟೂರು ಬಳಿ ಹರಿದಿರುವ ತುಂಗಭದ್ರಾ ನದಿಯಿಂದ 57 ಕೆರೆ ತುಂಬಿಸುವ ₹ 660 ಕೋಟಿ ವೆಚ್ಚದ ಮಹತ್ವದ ಯೋಜನೆ ಎಲ್ಲ ರೀತಿಯ ಸಂದೇಹಗಳನ್ನೂ ಮೀರಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ.

ADVERTISEMENT

ದೀಟೂರಿನಿಂದ ಹರಪನಹಳ್ಳಿ ತಾಲ್ಲೂಕಿನ ಚಟ್ನಹಳ್ಳಿ ಗುಡ್ಡಕ್ಕೆ ದೈತ್ಯ ಮೋಟಾರ್‌ಗಳ ಮೂಲಕ ಪಂಪ್ ಮಾಡಿ ಬೆಟ್ಟದ ತುದಿಯಿಂದ ಕೇವಲ ಗುರುತ್ವಾಕರ್ಷಣೆಯ ಮೂಲಕ ಜಗಳೂರಿನ 57 ಕೆರೆಗಳಿಗೆ ಸರಾಗವಾಗಿ ನೀರು ಹರಿಸುವ ಯೋಜನೆಯ ಯಶಸ್ವಿ ಜಾರಿಯಿಂದ ಬಯಲುಸೀಮೆಯ ಚಿತ್ರಣವೇ ಬದಲಾಗುತ್ತಿದೆ.

ದಶಕಗಳ ಕಾಲ ನೀರಿಲ್ಲದೇ ಬರಿದಾಗಿ ಒತ್ತುವರಿಯಿಂದ ಬಹುತೇಕ ಕಣ್ಮರೆಯ ಹಂತದಲ್ಲಿದ್ದ ಬರದ ಸೀಮೆಯ ಅಮೂಲ್ಯ ಜಲಮೂಲಗಳಾಗಿರುವ ಕೆರೆಗಳು ಮೈದುಂಬಿಕೊಂಡಿದ್ದು, ಎಲ್ಲೆಡೆ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತಿದೆ. ಶತಮಾನಗಳ ಹಿಂದೆ ನಿರ್ಮಿಸಿರುವ ಐತಿಹಾಸಿಕ ಜಗಳೂರು ಕೆರೆ, ಭರಮಸಮುದ್ರ ಕೆರೆ ಹಾಗೂ ತುಪ್ಪದಹಳ್ಳಿ ಕೆರೆಗಳು ಸೇರಿ 50ಕ್ಕೂ ಹೆಚ್ಚು ಕೆರೆಗಳು ಅಂದಾಜು ಅರ್ಧ ಶತಮಾನದ ನಂತರ ಕಳೆದ ವರ್ಷವಷ್ಟೇ ತುಂಬಿದ್ದವು.

ಈ ಬಾರಿ ಮುಂಗಾರು ಹಂಗಾಮಿನ ಆರಂಭದಲ್ಲಿ ದೊಡ್ಡ ಪ್ರಮಾಣದ ಮಳೆ ಆಗದಿದ್ದರೂ ಆಗಸ್ಟ್ ಅಂತ್ಯದ ವೇಳೆಗೆ ತಾಲ್ಲೂಕಿನ 16ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ.

ಜಗಳೂರು ಕೆರೆ, ಭರಮಸಮುದ್ರ ಕೆರೆ, ಹೊಸಕೆರೆ, ಹಿರೇಮಲ್ಲನಹೊಳೆ, ಚಿಕ್ಕಮಲ್ಲನಹೊಳೆ, ಹುಚ್ಚವ್ವನಹಳ್ಳಿ, ಲಕ್ಕಂಪುರ, ಅಣಬೂರು, ಕೆಳಗೋಟೆ, ಹಿರೇ ಅರಕೆರೆ, ಲಕ್ಕಂಪುರ, ಕ್ಯಾಸೇನಹಳ್ಳಿ, ಕೊಡದಗುಡ್ಡ, ಮುಷ್ಟಿಗರಹಳ್ಳಿ, ಮಲೆ ಮಚಿಕೆರೆ ಸೇರಿ 16ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿವೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯಲಿದ್ದು, ಹಿಂದಿನ ವರ್ಷದಂತೆ ಎಲ್ಲ ಕೆರೆಗಳೂ ತುಂಬುವ ನಿರೀಕ್ಷೆ ಇದೆ.

ಜಗಳೂರು ಮತ್ತು ಭರಮಸಮುದ್ರ ಕೆರೆಗಳು ಕೋಡಿ ಬಿದ್ದು 20 ದಿನಗಳಿಂದ ಹಳ್ಳ ಹರಿಯುತ್ತಿದೆ. ಹೆಚ್ಚುವರಿ ನೀರು ಜಿನಿಗಿ ಹಳ್ಳದ ಮೂಲಕ 10ಕ್ಕೂ ಹೆಚ್ಚು ಚೆಕ್ ಡ್ಯಾಂ ಮತ್ತು ಬ್ಯಾರೇಜ್‌ಗಳು ತುಂಬಿ ಹರಿದು ಮುಂದೆ ಮೊಳಕಾಲ್ಮುರು ತಾಲ್ಲೂಕಿನ ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿದೆ. ಆ ಮೂಲಕ ಬತ್ತಿ ಬರಿದಾಗಿದ್ದ ನೂರಾರು ಕಿ.ಮೀ ಉದ್ದದ ಪುರಾತನ ಕಾಲದ ಚಿನ್ನಹಗರಿ ನದಿ ಎಂದು ಶಾಸನಗಳಲ್ಲಿ ದಾಖಲಾಗಿರುವ ಜಿನಿಗಿ ಹಳ್ಳದ ಚೆಲುವು ಮರುಕಳಿಸಿದೆ. ಹಳ್ಳದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಮರಳು ದಂಧೆಗೂ ಕಡಿವಾಣ ಬಿದ್ದಿದೆ.

‘57 ಕೆರೆ ತುಂಬಿಸುವ ಯೋಜನೆ ಯಶಸ್ಸಿನಿಂದ ಬರದ ಹಣೆಪಟ್ಟಿ ಹೊತ್ತಿದ್ದ ಜಗಳೂರು ಶಿಘ್ರವೇ ಅಡಿಕೆ ನಾಡಾಗುವುದರಲ್ಲಿ ಸಂಶಯವಿಲ್ಲ. ಬರದಿಂದ ವಿಫಲವಾಗಿದ್ದ ಸಹಸ್ರಾರು ಕೊಳವೆಬಾವಿಗಳಲ್ಲಿ ಅಂತರ್ಜಲದ ಮಟ್ಟ ಅಚ್ಚರಿಯ ರೀತಿಯಲ್ಲಿ ಹೆಚ್ಚಾಗಿದೆ. ನೀರಾವರಿ ಪ್ರದೇಶ ವಿಸ್ತಾರವಾಗುತ್ತಿದೆ. ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆದು ಲಾಭದಾಯಕ ಕೃಷಿ ಕೈಗೊಳ್ಳಲು ಸಹಾಯವಾಗಲಿದೆ ಎಂದು ಯುವ ರೈತರಾದ ಮರೇನಹಳ್ಳಿ ಬಸವರಾಜ್, ಜಗಳೂರು ಗೊಲ್ಲರಹಟ್ಟಿ ಗ್ರಾಮದ ವೆಂಕಟೇಶ್ ಹೇಳುತ್ತಾರೆ.

ಜಗಳೂರು ತಾಲ್ಲೂಕಿನ ಐತಿಹಾಸಿಕ ಭರಮಸಮುದ್ರ ಕೆರೆ ಕೋಡಿ ಬಿದ್ದು ಹರಿಯುತ್ತಿರುವ ಮನಮೋಹಕ ದೃಶ್ಯ
ಜಗಳೂರು ಕೆರೆ ಕಳೆದ ಅರ್ಧ ಶತಮಾನದಲ್ಲಿ ಎರಡನೇ ಭಾರಿ ಭರ್ತಿಯಾಗಿ ಹರಿಯುತ್ತಿದೆ

ಸತತ 2ನೇ ವರ್ಷವೂ ತುಂಬಿದ ಕೆರೆಗಳು ಮೈದುಂಬಿ ಹರಿಯುತ್ತಿರುವ ಪುರಾತನ ಹಳ್ಳಗಳು  ಮುಂಗಾರಿನಲ್ಲಿ ಕೋಡಿಬಿದ್ದಿರುವ 16 ಕೆರೆಗಳು

‘ಬಯಲುಸೀಮೆಗೆ ವರವಾದ ಏತ ನೀರಾವರಿ’
ಸಿರಿಗೆರೆ ಶ್ರೀ ಹಾಗೂ ಬಜೆಟ್‌ನಲ್ಲಿ ಯೋಜನೆಗೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿಯ ಫಲವಾಗಿ ಇಂದು ಬರಪೀಡಿತ ತಾಲ್ಲೂಕಿನ 50ಕ್ಕೂ ಹೆಚ್ಚು ಕೆರೆಗಳಿಗೆ ತುಂಗಭದ್ರಾ ನೀರು ಹರಿದು ಬರುತ್ತಿದೆ. ದಶಕಗಳ ಕಾಲ ಬರದಿಂದ ನಲುಗಿದ ತಾಲ್ಲೂಕಿನಲ್ಲಿ ಈ ಯೋಜನೆಯ ಯಶಸ್ಸು ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದೆ. ಶತಮಾನಗಳ ಇತಿಹಾಸವಿರುವ ದೊಡ್ಡ ಕೆರೆಗಳು ಅನೇಕ ವರ್ಷಗಳ ನಂತರ ಮೊದಲ ಬಾರಿಗೆ ಮೈದುಂಬುತ್ತಿವೆ. ಈ ಭಾಗದ ಹಿಂದುಳಿದ ಸಣ್ಣ ರೈತರು ಕೃಷಿಯ ಮೂಲಕ ಸುಸ್ಥಿರವಾದ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ. ನದಿಯಲ್ಲಿ ನೀರಿನ ಹರಿವು ಇರುವವರೆಗೆ ಕೆರೆಗಳಿಗೆ ನಿರಂತರವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಬಿ. ದೇವೇಂದ್ರಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.