ADVERTISEMENT

ದಾವಣಗೆರೆ: 2 ವರ್ಷದ ಹಿಂದೆಯೂ ಕಾಣಿಸಿಕೊಂಡಿತ್ತು ಚರ್ಮಗಂಟು ರೋಗ!

ರೋಗ ನಿರೋಧಕ ಶಕ್ತಿ ಇದ್ದರೆ ಇಲ್ಲ ಅಪಾಯ

ಬಾಲಕೃಷ್ಣ ಪಿ.ಎಚ್‌
Published 22 ಅಕ್ಟೋಬರ್ 2022, 4:02 IST
Last Updated 22 ಅಕ್ಟೋಬರ್ 2022, 4:02 IST
ಜಾನುವಾರುಗಳಿಗೆ ಹುಲ್ಲು ತಿನ್ನಿಸುತ್ತಿರುವ ನಾಗನೂರು ವಿಜಯಕುಮಾರ್‌ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌
ಜಾನುವಾರುಗಳಿಗೆ ಹುಲ್ಲು ತಿನ್ನಿಸುತ್ತಿರುವ ನಾಗನೂರು ವಿಜಯಕುಮಾರ್‌ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌   

ದಾವಣಗೆರೆ: ಎರಡು ತಿಂಗಳಿನಿಂದ ಜಾನುವಾರುಗಳಲ್ಲಿ ಹರಡುತ್ತ ರೈತರ ಆತಂಕ ಹೆಚ್ಚಿಸಿರುವ ಚರ್ಮ ಗಂಟು ರೋಗ (ಲಂಪಿ ಸ್ಕಿನ್‌ ಡಿಸೀಸ್‌) ಎರಡು ವರ್ಷಗಳ ಹಿಂದೆಯೇ ಜಿಲ್ಲೆಯ ಕೆಲವು ರಾಸುಳಲ್ಲಿ ಕಾಣಿಸಿಕೊಂಡಿತ್ತು ಎಂಬ ಸಂಗತಿ ಬಯಲಾಗಿದೆ.

‘ಈಗ ಹೇಳುತ್ತಿರುವ ಚರ್ಮ ಗಂಟು ರೋಗದ ಮಾದರಿಯ ಕಾಯಿಲೆ ಎರಡು ವರ್ಷಗಳ ಹಿಂದೆಯೇ ನಮ್ಮ ಆಕಳಲ್ಲಿ ಕಾಣಿಸಿಕೊಂಡಿತ್ತು. ಪಶು ವೈದ್ಯರಲ್ಲಿಗೆ ತೆರಳಿ ಸೂಕ್ತ ಚಿಕಿತ್ಸೆ ಕೊಡಿಸಿದಾಗ ಗುಣವಾಗಿತ್ತು’ ಎಂದು ದಾವಣಗೆರೆ ತಾಲ್ಲೂಕಿನ ನಾಗನೂರು ಗ್ರಾಮದ ರೈತ ಸಹೋದರರಾದ ಅರುಣಕುಮಾರ್‌, ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಹೋದರರು ನಾಲ್ಕು ಆಕಳು, ನಾಲ್ಕು ಕರು, ಎರಡು ಎಮ್ಮೆಗಳನ್ನು ಸಾಕಿದ್ದು, ಎರಡು ವರ್ಷಗಳ ಹಿಂದೆ ಚರ್ಮಗಂಟು ರೋಗ ಕಾಣಿಸಿಕೊಂಡು, ನಂತರ ಗುಣಮುಖವಾದ ಆಕಳೂ ಅದರಲ್ಲಿ ಸೇರಿದೆ.

ADVERTISEMENT

‘ಈಗಲೂ ನಮ್ಮ ಜಾನುವಾರುಗಳಿಗೆ ನಾವೇ ದುಡ್ಡು ಖರ್ಚು ಮಾಡಿ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಿಸಲು ತಯಾರಿದ್ದೇವೆ. ಆದರೆ, ನಾವೇ ಬಂದು ಹಾಕುತ್ತೇವೆ ಎಂದು ಹಾಲಿನ ಡೇರಿಯವರು ಹೇಳಿದ್ದಾರೆ’ ಎಂದು ರೈತ ಸಹೋದರರು ವಿವರಿಸಿದರು.

ಮಿಟ್ಲಕಟ್ಟೆಯಲ್ಲಿ ಮಾಹಿತಿ ಇಲ್ಲ: ‘ಅಕ್ಕಪಕ್ಕದ ಹಳ್ಳಿಗಳಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ನಮ್ಮ ಆಕಳುಗಳಲ್ಲಿ ಕಾಣಿಸಿಕೊಂಡಿಲ್ಲ. ಲಸಿಕೆ ಬಗ್ಗೆ, ರೋಗದ ಬಗ್ಗೆ ನಮಗೆ ಈವರೆಗೆ ಯಾರೂ ಮಾಹಿತಿ ನೀಡಿಲ್ಲ’ ಎಂದು ಹರಿಹರ ತಾಲ್ಲೂಕು ಮಿಟ್ಲಕಟ್ಟೆಯ ಹನುಮಂತಪ್ಪ ಮತ್ತು ಪ್ರಭಾಕರ ಅಸಮಾಧಾನ ವ್ಯಕ್ತಪಡಿಸಿದರು.

2 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದು ನಿಜ: ‘2020ರಲ್ಲಿಯೇ ಬಹಳಷ್ಟು ಜಾನುವಾರುಗಳಲ್ಲಿ ಚರ್ಮಗಂಟು ರೋಗ ಬಂದು ಹೋಗಿತ್ತು. ಆದರೆ, ಆಗ ಯಾವುದೇ ಜೀವಾಪಾಯ ಉಂಟಾಗಿರಲಿಲ್ಲ. ಈ ಬಾರಿ ಕಂಡುಬಂದಿರುವ ವೈರಾಣುವಿನಲ್ಲಿ ತೀವ್ರತೆ ಹೆಚ್ಚಿದೆ. ಇದು ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜಾನುವರುಗಳಿಗೆ ಅಪಾಯವನ್ನುಂಟು ಮಾಡುತ್ತಿದೆ’ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ್‌ ಸುಂಕದ ತಿಳಿಸಿದರು.

ಒಮ್ಮೆ ಚರ್ಮಗಂಟು ರೋಗ ಬಂದು ಗುಣಮುಖವಾದ ಜಾನುವಾರುಗಳ ದೇಹದಲ್ಲಿ ಆ ರೋಗದ ನಿರೋಧಕ ಶಕ್ತಿ ಬೆಳೆದಿರುತ್ತದೆ. ಅಂಥ ರಾಸುಗಳಿಗೆ ಮತ್ತೆ ಅಪಾಯ ಇರುವುದಿಲ್ಲ ಎಂದು ವಿವರಿಸಿದರು.

71,907 ಜಾನುವಾರಿಗೆ ಲಸಿಕೆ ಪೂರ್ಣ
ಜಿಲ್ಲೆಗೆ ಇಲ್ಲಿವರೆಗೆ ಒಟ್ಟು 1.03 ಲಕ್ಷ ಡೋಸ್‌ ಲಸಿಕೆ ಬಂದಿದ್ದು, ಅದರಲ್ಲಿ 71,907 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಲಸಿಕೆ ನೀಡುವ ಕಾರ್ಯ ಮುಂದುವರಿದಿದೆ. ಜಿಲ್ಲೆಯ ಎಲ್ಲ 151 ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಅ.28ರಂದು ಮತ್ತೆ 50 ಸಾವಿರ ಡೋಸ್‌ ಲಸಿಕೆ ಬರಲಿದೆ. ಇದಲ್ಲದೇ ಕೆಎಂಎಫ್‌ನವರು ಪ್ರತ್ಯೇಕವಾಗಿ ಲಸಿಕೆ ತರಿಸಿ ಹಾಕುತ್ತಿದ್ದಾರೆ ಎಂದು ಡಾ. ಚಂದ್ರಶೇಖರ್‌ ಸುಂಕದ ತಿಳಿಸಿದರು.

ಇಲ್ಲಿವರೆಗೆ ಜಿಲ್ಲೆಯಲ್ಲಿ 166 ಜಾನುವರುಗಳು ಮೃತಪಟ್ಟಿವೆ. ಉಳಿದವುಗಳು ಚೇತರಿಸಿಕೊಂಡಿವೆ ಎಂದರು.

*
ನಮ್ಮ ಒಂದು ಆಕಳಿಗೆ ಎರಡು ವರ್ಷಗಳ ಹಿಂದೆ ವಿಪರೀತ ಜ್ವರ ಬಂದು ಜರ್ಮ ಗಂಟು ಕಟ್ಟಿದ್ದಲ್ಲದೇ ಕೀವು ಸೋರಿತ್ತು. ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಚಿಕಿತ್ಸೆ ನೀಡಿದ ಮೇಲೆ ಚೇತರಿಸಿಕೊಂಡಿತ್ತು.
–ಅರುಣಕುಮಾರ್‌, ರೈತ, ನಾಗನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.