
ಮಲೇಬೆನ್ನೂರು: ‘ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ– 25ರ ಡಾಂಬರೀಕರಣ ಕಾಮಗಾರಿ ಭರದಿಂದ ಸಾಗಿದ್ದು, ಕಳಪೆಯಿಂದ ಕೂಡಿದೆ’ ಎಂದು ರೈತ ಸಂಘದ ಹೊಳೆಸಿರಿಗೆರೆ ಫಾಲಾಕ್ಷಪ್ಪ ಆರೋಪಿಸಿದರು.
‘₹ 3 ಕೋಟಿ ವೆಚ್ಚದ ಕಾಮಗಾರಿ ಗುತ್ತಿಗೆದಾರರ ಉಸ್ತುವಾರಿಯಲ್ಲಿ ಸಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಕಾಮಗಾರಿ ಗುಣಮಟ್ಟ ಅನುಮಾನದಿಂದ ಕೂಡಿದೆ. ಡಾಂಬರ್ ಕಾಂಕ್ರೀಟ್ ಮಿಶ್ರಣ ದೂರದ ಸಂತೇಬೆನ್ನೂರಿನ ಪ್ಲಾಂಟ್‌ನಿಂದ ಬರುವ ವೇಳೆಗೆ 130 ಡಿಗ್ರಿ ತಾಪಮಾನ ಇರುವುದಿಲ್ಲ. ಇದರಿಂದ ಮಿಶ್ರಣದ ಗುಣಮಟ್ಟ ಕುಸಿಯುವುದು ಖಚಿತ’ ಎಂದು ದೂರಿದರು.
ಸ್ಥಳದಲ್ಲಿದ್ದ ಗುತ್ತಿಗೆದಾರರ ಎಂಜಿನಿಯರ್ ಚೇತನ್, ‘ಸದ್ಯ ಗುಂಡಿ ಹಾಗೂ ಡಿವೈಡರ್ ಇದ್ದ ಸ್ಥಳಗಳ ಡಾಂಬರೀಕರಣವನ್ನು ವಾಹನಗಳ ಭರಾಟೆ ನಡುವೆಯೇ ಮಾಡುತ್ತಿದ್ದೇವೆ. ಗುಣಮಟ್ಟ ಕಾಪಾಡುವುದು ನಮ್ಮ ಜವಾಬ್ದಾರಿ’ ಎಂದು ಸ್ಪಷ್ಟನೆ ನೀಡಿದರು.
‘ಕೆಲಸದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಭಾರಿ ಗಾತ್ರದ ಗುಂಡಿ ಇದ್ದವು. ವೆಟ್ ಮಿಕ್ಸ್ ಹರಡಿ ತಟ್ಟಣೆ ಮಾಡಿ ಗುಂಡಿ ಭರ್ತಿ ಮಾಡಲಾಗಿದೆ. ಮೇಲ್ಪದರ ಸಂಪೂರ್ಣ 11 ಮೀಟರ್ ಅಗಲದ ಡಾಂಬರೀಕರಣ ಮಾಡುವಾಗ ಇನ್ನೂ ಹೆಚ್ಚಿನ ಗುಣಮಟ್ಟ ಕಾಪಾಡಲಾಗುವುದು’ ಎಂದರು.
ಪುರಸಭೆ ಸದಸ್ಯ ನಯಾಜ್, ಶಾ ಅಬ್ರಾರ್, ಕಾಂಗ್ರೆಸ್ ಮುಖಂಡ ರುಸ್ತುಂ ಅಲಿ, ‘ಕಾಮಗಾರಿಯಲ್ಲಿ ಲೋಪದೋಷ ಬೇಡ. ಗುಣಮಟ್ಟ ಕಾಪಾಡಿ’ ಎಂದು ಪರಿಶೀಲನೆ ನಡೆಸಿ ತಾಕೀತು ಮಾಡಿದರು.
ರಸ್ತೆಯುದ್ದಕ್ಕೂ ಇರುವ ದೂಳನ್ನು ತೆಗೆಯಲು ಬ್ಲೋಯರ್ ಬಳಸುತ್ತಿದ್ದು, ನಾಗರಿಕರು, ಬೇಕರಿ, ಹಣ್ಣು– ಹೂ ಮಾರಾಟ ಮಾಡುವ ಅಂಗಡಿ, ಹೋಟೆಲ್ ಮಾಲೀಕರು ಹೊಸ ವರ್ಷದ ಸಂಭ್ರಮಕ್ಕೆ ದೂಳಿನ ಮಜ್ಜನ ಅಡ್ಡಿಯಾಗಿದೆ ಎಂದು ಬಾಗಿಲು ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.