ಪ್ರಾತಿನಿಧಿಕ ಚಿತ್ರ
ದಾವಣಗೆರೆ: ಜಿಲ್ಲೆಯಲ್ಲಿ 2021 ರಿಂದ 2025 ರವರೆಗೆ 497 ಮಕ್ಕಳು ಕಾಣೆಯಾದ ಪ್ರಕರಣ ದಾಖಲಾಗಿದ್ದು, 478 ಮಕ್ಕಳು ಪತ್ತೆಯಾಗಿವೆ. ಇನ್ನೂ 19 ಪ್ರಕರಣಗಳು ಬಾಕಿ ಉಳಿದಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೂಚಿಸಿದರು.
ನಗರದ ಜಿಲ್ಲಾ ಪೊಲೀಸ್ ಭವನದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಣೆಯಾದ ಮಕ್ಕಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚನ್ನಗಿರಿ, ಹೊನ್ನಾಳಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ಬಾಕಿ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
‘ಮಕ್ಕಳು ಆರೋಗ್ಯವಂತರಾಗಿರುವುದರ ಜೊತೆಗೆ ಸುರಕ್ಷಿತವಾಗಿರಬೇಕು. ಕಾಣೆಯಾದ ಮಕ್ಕಳನ್ನು ಶೀಘ್ರ ಪತ್ತೆ ಮಾಡಬೇಕು. ಪೋಕ್ಸೊ ಕಾಯ್ದೆಯ ಭೀತಿಯಿಂದ ಜನರು ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸುತ್ತೇವೆ’ ಎಂಬ ಭರವಸೆ ನೀಡಿದರು.
‘ಮಕ್ಕಳಿಗೆ ನ್ಯಾಯ ಕೊಡಿಸುವ ಪ್ರವೃತ್ತಿಯನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕು. ಕಾಣೆಯಾದ ಮಕ್ಕಳ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಯಾರೊಬ್ಬರು ಮಾಡಬಾರದು. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಪತ್ತೆ ಹಚ್ಚಲು ಸಾಧ್ಯವಾಗದ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಬೇಕು’ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣನವರ್, ‘ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರ ಸಹಾಯ ಪಡೆದರೆ ಕಾಣೆಯಾದ ಮಕ್ಕಳ ಬಗ್ಗೆ ಮಾಹಿತಿ ಪಡೆಯಬಹುದು. ಮಕ್ಕಳು ಎಲ್ಲಿ ಹೋಗಿರಬಹುದು ಎಂಬ ಮಾಹಿತಿಯನ್ನು ಪಾಲಕರು ತಿಳಿಸಿದರೆ ಅನುಕೂಲ’ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ, ಡಿವೈಎಸ್‍ಪಿ ಶರಣಬಸಪ್ಪ, ಮಕ್ಕಳ ರಕ್ಷಣಾಧಿಕಾರಿ ಟಿ.ಎನ್.ಕವಿತಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.