ADVERTISEMENT

ಚನ್ನಗಿರಿ: ತಾಲ್ಲೂಕಿನಾದ್ಯಂತ ಉತ್ತಮ ಮಳೆ; ಕೃಷಿ ಚಟುವಟಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 24 ಮೇ 2023, 16:16 IST
Last Updated 24 ಮೇ 2023, 16:16 IST
ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದ ಹೊಲದಲ್ಲಿ ರೈತರೊಬ್ಬರು ಬುಧವಾರ ಟ್ರ್ಯಾಕ್ಟರ್ ಮೂಲಕ ಭೂಮಿ ಉಳುಮೆ ಮಾಡುತ್ತಿರುವುದು.
ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದ ಹೊಲದಲ್ಲಿ ರೈತರೊಬ್ಬರು ಬುಧವಾರ ಟ್ರ್ಯಾಕ್ಟರ್ ಮೂಲಕ ಭೂಮಿ ಉಳುಮೆ ಮಾಡುತ್ತಿರುವುದು.   

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಆರಂಭಗೊಂಡಿದೆ.

ಮಳೆ ಬಿದ್ದ ಗ್ರಾಮಗಳಲ್ಲಿ ರೈತರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕಾಗಿ ಭೂಮಿ ಉಳುಮೆ ಮಾಡುವ ಕಾರ್ಯ ಆರಂಭಿಸಿದ್ದಾರೆ. ಕಳೆದ ಸಾಲಿನಲ್ಲಿ ಮೇ ತಿಂಗಳ ಹೊತ್ತಿಗೆ ನಾಲ್ಕೈದು ಬಾರಿ ಮುಂಗಾರು ಪೂರ್ವ ಮಳೆಯಾಗಿತ್ತು. ಆದರೆ ಈ ಸಾಲಿನಲ್ಲಿ ಮೇ ತಿಂಗಳ ಕೊನೆಯ ವಾರದಲ್ಲಿ ಮುಂಗಾರು ಪೂರ್ವ ಮಳೆ ಬೀಳಲು ಆರಂಭಿಸಿದೆ. ಹೀಗಾಗಿ ರೈತರು ಇದುವರೆಗೂ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಭೂಮಿ ಉಳುಮೆ ಮಾಡಲು ಸಾಧ್ಯವಾಗಿರಲಿಲ್ಲ. ಎರಡು ಮೂರು ದಿನಗಳಿಂದ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಆರಂಭಗೊಂಡಿದೆ. ರೈತರು ಟ್ರ್ಯಾಕ್ಟರ್ ಹಾಗೂ ಎತ್ತುಗಳ ಸಹಾಯದಿಂದ ಭೂಮಿ ಉಳುಮೆ ಮಾಡಲು ಮುಂದಾಗಿದ್ದಾರೆ.

‘ಮೇ ತಿಂಗಳಲ್ಲಿ 109.9 ಮಿ.ಮೀ. ವಾಡಿಕೆ ಮಳೆಯಾಗಬೇಕಿದೆ. ಇದುವರೆಗೆ 60 ಮಿ.ಮೀ. ಮಳೆಯಾಗಿದೆ. ತಾಲ್ಲೂಕಿನಲ್ಲಿ 38 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 21.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 220 ಹೆಕ್ಟೇರ್ ಹತ್ತಿ, 500 ಹೆಕ್ಟೇರ್ ರಾಗಿ, 9,500 ಹೆಕ್ಟೇರ್ ಭತ್ತ, 115 ಹೆಕ್ಟೇರ್ ತೊಗರಿ, 50 ಹೆಕ್ಟೇರ್ ಪ್ರದೇಶದಲ್ಲಿ ಸಿರಿ ಧಾನ್ಯಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ. ಹಾಗೆಯೇ ರೈತರ ಬಿತ್ತನೆ ಕಾರ್ಯಕ್ಕೆ ಅಗತ್ಯವಾದ ರಸಗೊಬ್ಬರ ಖಾಸಗಿ ಹಾಗೂ ಸಹಕಾರ ಸಂಘಗಳಲ್ಲಿ ದಾಸ್ತಾನು ಮಾಡಲಾಗಿದೆ. ಇನ್ನೊಂದು ವಾರದೊಳಗೆ ರಿಯಾಯಿತಿ ದರದ ಬೀಜ ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್. ಅರುಣ್ ಕುಮಾರ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.