ಒಕ್ಕಲಿಗ ಮುದ್ದಣ್ಣ
ಜೋಳದಹಾಳೆಂಬ ಗ್ರಾಮಕ್ಕೆ ಸೇರಿದ ಶಿವಶರಣರು ಬೇಸಾಯ ವೃತ್ತಿಯಿಂದ ಬದುಕುಸಾಗಿಸಿದವರು. ಬಸವ ಕಲ್ಯಾಣದಲ್ಲಿ ಜಂಗಮ ದಾಸೋಹ ನಡೆಸುವುದು ಇವರ ನಿತ್ಯ ಕಾಯಕ. ರಾಜ ಕೇಳಿದ ಹೆಚ್ಚಿನ ತೆರಿಗೆಯನ್ನು ಕೊಡದೆ ಆ ಹಣವನ್ನು ದಾಸೋಹಕ್ಕಾಗಿ ವಿನಿಯೋಗಿಸುತ್ತಾರೆ. ‘ಕಾಮಭೀಮ ಜೀವಧನದೊಡೆಯ’ ಅಂಕಿತದಲ್ಲಿ ರಚಿಸಿದ 12 ವಚನಗಳು ದೊರೆತಿವೆ. ಒಕ್ಕಲುತನ ವೃತ್ತಿಯ ಪರಿಭಾಷೆ, ಮುಗ್ಧ ಭಕ್ತಿ, ಸರಳ-ಪ್ರಾಸಾದಿಕ ಶೈಲಿಯಲ್ಲಿ ಅವುಗಳು ಇವೆ.
12ನೆ ಶತಮಾನದ 770 ಅಮರ ಗಣಂಗಳಲ್ಲಿ ಕಾಯಕ ನಿಷ್ಠ ಅದ್ವಿತೀಯ ದಾಸೋಹ ಶ್ರೇಷ್ಟರಲ್ಲಿ ಒಕ್ಕಲಿಗರ ಮುದ್ದಣ್ಣನವರು ಅಧ್ವಿತಿಯರು.
ಘಟಕ್ಕೆ ಒಕ್ಕಲುತನ ಮುಖ್ಯ. ಮಾನವನ ಸಹಜ ಹಸಿವು ತಣಿಸಲು ಆಹಾರ ಮುಖ್ಯ. ಅದೇ ರೀತಿ ನಾವು ನಮ್ಮ ನಿಜವಾದ ಭವಬಂದನದಿಂದ ಬೇರಾಗಲು ಅಂತರಂಗದ ಒಕ್ಕಲುತನ ಮುಖ್ಯ.
ಇವೆರಡು ಬಹಿರಂಗ ಕಾಯಕ ದಾಸೋಹವಾದರೆ, ಅಂತರಂಗದ ಕಾಯಕ (ಸೋಹಂ) ಮುಕ್ತಿಗೆ ಒಳಗಣ ಲಿಂಗಯ್ಯನೊಲುಮೆಗೆ ಎಂಬುದನ್ನು ಸಾರಿ ತೋರಿದ ಮಹಾ ಶಿವ ಶರಣ ಒಕ್ಕಲಿಗರ ಮುದ್ದಣ್ಣ.
ಅಲ್ಲಿನ ಶರಣರೆಲ್ಲರು ಒಂದೊಂದು ಕಾಯಕದ ಮೂಲ ಗುರುತಿಸಿಕೊಂಡವರು. ಬಸವ ಕಲ್ಯಾಣದ ಶಿವಸಧನಕ್ಕೆ ಕಾರಣವಾದರು.
‘ಕಾಮಭೀಮ ಜೀವಧನದೊಡೆಯ‘ ಎಂಬ ಅಂಕಿತದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ. ಕಾಯಕ ನಿಷ್ಟೆ ಹಾಗೂ ದಾಸೋಹ ಭಾವವನ್ನು ಕಲ್ಯಾಣಕ್ಕೆ ಇಂದಿಗೂ ಪ್ರಸ್ತುತವಾಗುವಂತೆ ಮಾಡಿದರು. ‘ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ’ ಎಂಬ ನಿಲುವನ್ನು ತೋರಿದ ಒಕ್ಕಲಿಗರ ಮುದ್ದಣ್ಣ ಶಿವ ಶರಣರ ಸ್ಮರಣೋತ್ಸವ ನಾವೆಲ್ಲರೂ ಮತ್ತೆ ಹಸಿವು ಮುಕ್ತ ಭಾರತಕ್ಕಾಗಿ ಶ್ರಮಿಸಬೇಕು. ದಾಸೋಹ ಪ್ರಜ್ಞೆಯನ್ನು ಕಾಯ್ದು ಕೊಳ್ಳಬೇಕೆಂಬುದೇ ಇಲ್ಲಿನ ಆಶಯ.
"ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ.
ಇಂತೀ ನಾಲ್ಕರ ಮಧ್ಯದ ಮನೆಗೆ
ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ,
ಮಾಂಸದ ಗೋಡೆ, ಚರ್ಮದ ಹೊದಿಕೆ,
ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದು ಚಿತ್ರದ ಮನೆ ನೋಡಯ್ಯಾ.
ಆ ಮನೆಗೊಂಬತ್ತು ಬಾಗಿಲು, ಇಡಾ ಪಿಂಗಳವೆಂಬ ಗಾಳಿಯ ಬಾದಳ,
ಮೃದು ಕಠಿಣವೆಂಬವೆರಡು ಅಗುಳಿಯ ಭೇದ ನೋಡಾ,
ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಚ್ಚಿ,
ದಿವಾರಾತ್ರಿಯೆಂಬ ಅರುಹು ಮರಹಿನ ಉಭಯವ ಕದಕಿತ್ತು ನೋಡಯ್ಯಾ.
ಮನೆ ನಷ್ಟವಾಗಿ ಹೋದಡೆಯೂ
ಮನೆಯೊಡೆಯ ಮರಳಿ ಮತ್ತೊಂದು ಮನೆಗೆ ಒಪ್ಪುದು ತಪ್ಪದು ನೋಡಯ್ಯಾ
ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ,ಕಾಮಭೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.
ಕೇವಲ ಪ್ರಾಪಂಚಿಕ ವಿಷಯ ವಾಸನೆಗೆ ಹರಿವ ಅರಿವನ್ನು, ಕಾಯಕದಲ್ಲಿ ತೋರಿಸಿ ಅಸಂಖ್ಯಾತ ಪ್ರಮಥಗಣಂಗಳ ಶರಣ ಸಮೂಹದಲ್ಲಿ , ದಾಸೋಹದ ಘನವನ್ನು ಎತ್ತಿ ಇಡಿದದ್ದಲ್ಲದೆ ಅದನ್ನು
ಭಕ್ತಿ ಶ್ರದ್ಧೆಯ ಮೂಲಕ ಶರೀರದ ಹಸಿವಿನ ಮೂಲವನ್ನುಡುಕಿ, ಅದಕ್ಕೆ ಜ್ಞಾನವೆಂಬ ದಾಸೋಹಗೈದ ಮಹಾ ಶರಣರ ಸ್ಮರಣೆಯ ನಮ್ಮೆಲ್ಲರನ್ನೂ ಮತ್ತೊಮ್ಮೆ ಬಸವಣ್ಣ ನವರ ಕಲ್ಯಾಣದ ಘನತೆಯನ್ನು ತೋರುತ್ತದೆ.
ಶ್ರೀ ಬಸವಾಕ್ಷ ಸ್ವಾಮಿಗಳು, ಶ್ರೀ ವಿರಕ್ತ ಮಠ, ದಾವಣಗೆರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.