ದಾವಣಗೆರೆ: ರಾಜ್ಯ ಸರ್ಕಾರ ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಗೆ (ಜಾತಿ ಜನಗಣತಿ) ನಮ್ಮ ಸ್ಪಷ್ಟ ವಿರೋಧವಿದೆ. ಯಾವುದೇ ಕಾರಣಕ್ಕೂ ವರದಿಗೆ ಬೆಂಬಲ ನೀಡುವುದಿಲ್ಲ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ವಿನೋಬನಗರದ ಶ್ರೀಶೈಲ ಪೀಠದಲ್ಲಿ ದೊಡ್ಡ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಗುರು ಚರಂತಪ್ಪಜ್ಜ ಸ್ವಾಮೀಜಿ ಅವರ 21ನೇ ಸ್ಮರಣೋತ್ಸವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ‘ಚರಂತಾರ್ಯ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಜಾತಿ ಜನಗಣತಿ ಸಂದರ್ಭದಲ್ಲಿ ನಮ್ಮನ್ನು ಯಾರೊಬ್ಬರು ಸಂಪರ್ಕಿಸಿಲ್ಲ. ಸಮಾಜದ ಹಲವರಿಗೆ ಇಂತಹ ಅನುಭವ ಆಗಿದೆ. ಇದರಿಂದ ವಸ್ತುನಿಷ್ಠ ವರದಿಯನ್ನು ಸಿದ್ಧಪಡಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ತಳೆದಿರುವ ನಿಲುವಿಗೆ ನಮ್ಮ ಬೆಂಬಲವಿದೆ’ ಎಂದು ಹೇಳಿದರು.
‘ಜಾತಿ ಜನಗಣತಿ ವಸ್ತುನಿಷ್ಠವಾಗಿ ನಡೆದಿದ್ದರೆ ನಾವು ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಪೂರ್ವಾಗ್ರಹಕ್ಕೆ ಒಳಗಾಗದೇ ಸರ್ಕಾರ ಪ್ರಾಮಾಣಿಕವಾಗಿ ವರ್ತಿಸಬೇಕಿತ್ತು. ಮರು ಜಾತಿ ಜನಗಣತಿ ಮಾಡಿದರೆ ಮಾತ್ರವೇ ಒಪ್ಪಲು ಸಾಧ್ಯ’ ಎಂದರು.
‘ವೀರಶೈವ ಲಿಂಗಾಯತ ಸಮುದಾಯದ ಪರವಾಗಿ ಧ್ವನಿ ಎತ್ತುವ ವಿಚಾರದಲ್ಲಿ ಶಾಮನೂರು ಶಿವಶಂಕರಪ್ಪ ಮಾದರಿಯಾಗಿದ್ದಾರೆ. ಸಮುದಾಯದ ಹಿತಾಸಕ್ತಿ ಕಾಪಾಡುವ ಸಂದರ್ಭದಲ್ಲಿ ಪದವಿ ಹಾಗೂ ಪಕ್ಷವನ್ನು ಅವರು ಪರಿಗಣಿಸುವುದಿಲ್ಲ. ಸಮುದಾಯದ ಎಲ್ಲ ಜನಪ್ರತಿನಿಧಿಗಳು ಇಂತಹ ಗುಣ ಬೆಳೆಸಿಕೊಳ್ಳಬೇಕು’ ಎಂದ ಸಲಹೆ ನೀಡಿದರು.
‘ಸರ್ಕಾರದ ಕಾರ್ಯವನ್ನು ಕರ್ನಾಟಕದಲ್ಲಿ ಮಠಗಳು ಮಾಡಿವೆ. ಶಿಕ್ಷಣ, ಹಸಿವು ನೀಗಿಸುವ ಪ್ರಯತ್ನಕ್ಕೆ ಸರ್ಕಾರ ಕೈಹಾಕವುದಕ್ಕೂ ಮುನ್ನವೇ ಮಠಗಳು ಅನ್ನ ಮತ್ತು ಅಕ್ಷರ ದಾಸೋಹದಲ್ಲಿ ತೊಡಗಿಕೊಂಡಿದ್ದವು. ಭಕ್ತರ ಮನಸು ಹಾಗೂ ಜೀವನವನ್ನು ವಿಕಾಸಗೊಳಿಸಿವೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯಪಟ್ಟರು.
ಎಚ್.ಎಂ.ಗುರುಬಸವರಾಜಯ್ಯ ಸಂಪಾದಿಸಿದ ‘ಭವ್ಯ ಬೆಳಕು’ ಕೃತಿಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ಲೋಕಾರ್ಪಣೆ ಮಾಡಿದರು. ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಯರಗುಂಟೆಯ ಪರಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಎಂ.ಎಂ.ಶಿವಪ್ರಕಾಶ್, ಸಾಹಿತಿ ಪ್ರೊ.ಎಚ್.ವಿ.ಭಿಕ್ಷಾವರ್ತಿಮಠ, ಎಸ್.ವಿ.ಪಾಟೀಲ್ ಗುಂಡೂರು, ದೇವೇಂದ್ರ ಕುಮಾರ್ ಪತ್ತಾರ್ ಹಾಜರಿದ್ದರು.
ಚರಂತಾರ್ಯ ಶ್ರೀ’ ಪ್ರಶಸ್ತಿ ಪಡೆದಿರುವುದಕ್ಕೆ ಸಂತಸವಾಗಿದೆ. ಸಮಾಜ ಸಂಘಟಿಸುವ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ..ಶಾಮನೂರು ಶಿವಶಂಕರಪ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.