
ಹರಿಹರ: ಕಳೆದ ವರ್ಷ ಸುರಿದ ಸಮೃದ್ಧ ಮುಂಗಾರು ತಾಲ್ಲೂಕಿನಲ್ಲಿ ಭತ್ತದ ಹುಲ್ಲಿನ ಮೇವಿನ ಭರಪೂರ ಲಭ್ಯತೆಗೆ ಕಾರಣವಾಗಿದ್ದು, ಹೈನುಗಾರಿಕೆಗೆ ಬಲ ನೀಡಿದೆ.
ತುಂಗಭದ್ರಾ ನದಿ, ಭದ್ರಾ ಕಾಲುವೆ, ದೇವರಬೆಳೆಕೆರೆ ಪಿಕ್ ಅಪ್ ಕಾಲುವೆ ಜಾಲದಿಂದಾಗಿ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ ಶೇ 90ರಷ್ಟು ನೀರಾವರಿ ಪ್ರದೇಶ ಹೊಂದಿರುವ ಖ್ಯಾತಿ ತಾಲ್ಲೂಕಿಗಿದೆ. ಈ ಎಲ್ಲಾ ನೀರಿನ ಲಭ್ಯತೆಯ ಜೊತೆಗೆ ಕಳೆದ ಬಾರಿಯ ಸಮೃದ್ಧ ಮಳೆಯೂ ತಾಲ್ಲೂಕಿನಲ್ಲಿ ಯಾವುದೇ ಕಂಟಕವಿಲ್ಲದೆ ಭತ್ತದ ಉತ್ತಮ ಇಳುವರಿಗೆ ಕಾರಣವಾಗಿದೆ. ಇದರ ಪರಿಣಾಮ ಭರಪೂರ ಭತ್ತದ ಹುಲ್ಲಿನ ಮೇವು ಲಭ್ಯವಾಗಿದೆ.
24 ಲಕ್ಷ ಕೆ.ಜಿ. ಮೇವು ಲಭ್ಯ: ವಿವಿಧ ನೀರಾವರಿ ಮೂಲಗಳಿಂದಾಗಿ ಕಳೆದ ಬಾರಿಯ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 60,000 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಒಂದು ಎಕರೆ ಬೆಳೆಯಲ್ಲಿ ತಲಾ 35ರಿಂದ 40 ಕೆ.ಜಿ. ಭಾರದ 35ರಿಂದ 40 ಹುಲ್ಲಿನ ರೋಲ್ ಸಿಗುತ್ತವೆ.
ಹೀಗೆ 60,000 ಎಕರೆಯಲ್ಲಿ ಅಂದಾಜು 24 ಲಕ್ಷ ಕೆ.ಜಿ.ಯಷ್ಟು ಹುಲ್ಲಿನ ಮೇವಿನ ಉತ್ಪನ್ನವಾಗಿದೆ ಎನ್ನಲಾಗಿದೆ. ದನಕರುಗಳನ್ನು ಸಾಕಿದ ರೈತರು ತಮಗೆ ಅಗತ್ಯ ಇರುವಷ್ಟು ಹುಲ್ಲನ್ನು ಇಟ್ಟುಕೊಂಡು ಉಳಿದ ಹುಲ್ಲನ್ನು ಇತರೆಡೆಯ ರೈತರಿಗೆ ಮಾರಾಟ ಮಾಡುವ ಕಾರ್ಯವೂ ಭರದಿಂದ ಸಾಗಿದೆ.
ಜಮೀನಿಲ್ಲದೆ ಕೇವಲ ಹೈನುಗಾರಿಕೆ ಮಾಡುವವರು ಹುಲ್ಲಿನ ಖರೀದಿ ಪ್ರಕ್ರಿಯೆ ನಡೆಸಿದ್ದಾರೆ. ಹುಲ್ಲು ಸಾಗಣೆಗೆ ಏಜೆಂಟರೂ ಹುಟ್ಟಿಕೊಂಡಿದ್ದಾರೆ.
ತಾಲ್ಲೂಕಿನಾದ್ಯಂತ ಹಾಗೂ ಅಡಿಕೆ ನಾಡು ಎನಿಸಿರುವ ಚನ್ನಗಿರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಹುಲ್ಲಿನ ಸಾಗಣೆ ನಡೆದಿದೆ. ಒಂದು ಟ್ರಾಕ್ಟರ್ ಎಂಜಿನ್ನಿಗೆ ಎರಡು ಟ್ರಾಲಿಗಳನ್ನು ಜೋಡಿಸಿ ಮೇವು ಸಾಗಣೆ ಮಾಡುವ ದ್ರಶ್ಯ ಸಾಮಾನ್ಯವಾಗಿದೆ.
ಹರಿಹರ ತಾಲ್ಲೂಕಿನಲ್ಲಿ ಒಟ್ಟು 40,000 ದನಕರುಗಳಿವೆ. ಭತ್ತದ ಹುಲ್ಲಿನ ಸಮೃದ್ಧ ಲಭ್ಯತೆಯು ತಾಲ್ಲೂಕಿನ ಹೈನುಗಾರಿಕೆಗೂ ಬಲ ನೀಡಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಒಂದು ಹುಲ್ಲಿನ ರೋಲ್ ಗೆ ₹ 200ರಿಂದ ₹ 240ರವರೆಗೆ ಮಾರಾಟವಾಗುತ್ತಿದ್ದು ರೈತರಿಗೆ ಅಲ್ಪ ಪ್ರಮಾಣದಲ್ಲಿ ಆರ್ಥಿಕ ಬಲ ಒದಗಿದೆ–ಕುಂದೂರು ಮಂಜಪ್ಪ ರೈತ ಹೊಳೆಸಿರಿಗೆರೆ
ಮಳೆಯ ಕೊರತೆ ಕಾಲುವೆಯಲ್ಲಿ ನೀರಿನ ಹರಿವು ಇರದಿದ್ದರೆ ರೈತರು ಮೇವಿನ ಬೀಜಕ್ಕೆ ಮುಗಿ ಬೀಳುತ್ತಿದ್ದರು ಈ ಬಾರಿ ಉತ್ತಮ ಮಳೆ ಬೆಳೆಯಿಂದಾಗಿ ಮೇವಿನ ಬೀಜಕ್ಕೆ ಬೇಡಿಕೆ ಇಳಿದಿದೆ.–ತಿಪ್ಪೇಸ್ವಾಮಿ, ಪಶು ಪಾಲನ ಇಲಾಖೆ ಮುಖ್ಯ ವೈದ್ಯಾಧಿಕಾರಿ
ನೀರಿನ ಲಭ್ಯತೆಯ ಜೊತೆಗೆ ಭತ್ತದ ಕೊಯ್ಲಿನ ಅವಧಿಯಲ್ಲಿ ಮಳೆ ಕಾಟ ಇಲ್ಲದ್ದರಿಂದ ಭತ್ತದ ಮೇವು ಹಾಳಾಗದೆ ಪೂರ್ಣ ಪ್ರಮಾಣದಲ್ಲಿ ರೈತರ ಕೈಗೆ ತಲುಪಿದೆ–ನಟರಾಜ್, ಸಹಾಯಕ ಕ್ರಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.