ಶಾಸಕ ಬಿ.ಪಿ. ಹರೀಶ್
ದಾವಣಗೆರೆ: ರಾಜ್ಯ ಮಟ್ಟದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಪ್ರಸ್ತಾಪಿಸಿದ ರಾಜಕೀಯ ವಿಚಾರಗಳಿಗೆ ಪ್ರೇಕ್ಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಪರ್ಧಾ ವಿಜೇತರ ಪ್ರಶಸ್ತಿ ಪ್ರಧಾನಕ್ಕೂ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ವಾಗ್ವಾದಕ್ಕೆ ಕಾರ್ಯಕ್ರಮ ವೇದಿಕೆಯಾಯಿತು.
ನಗರದ ಬಿಐಟಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಸೋಮವಾರ ಸಮಾರೋಪ ಸಮಾರಂಭದ ಏರ್ಪಡಿಸಲಾಗಿತ್ತು. ಎರಡು ದಿನ ಏಳು ವಿಭಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆಗೂ ಮುನ್ನ ವೇದಿಕೆಯಲ್ಲಿದ್ದ ಗಣ್ಯರ ಭಾಷಣ ಉತ್ಸವಕ್ಕೆ ರಾಜಕೀಯ ಬಣ್ಣ ಬೆರೆಸಿತು.
‘ಪ್ರತಿ ವರ್ಷ ದಸರಾ ಮೆರವಣಿಗೆಯನ್ನು ತಾಲ್ಲೂಕು ಕೇಂದ್ರಗಳಲ್ಲಿ ಕೂಡ ಆಯೋಜನೆ ಮಾಡಲಾಗುತ್ತದೆ. ಕನಿಷ್ಠ 8 ಕಲಾತಂಡಗಳಿಗೆ ಅವಕಾಶ ಸಿಗುತ್ತಿತ್ತು. ಆದರೆ, 2024ರಲ್ಲಿ ನಡೆದ ದಸರಾ ಮಹೋತ್ಸವದಲ್ಲಿ 2 ಕಲಾತಂಡಗಳಿಗೆ ಮಾತ್ರ ಅವಕಾಶ ಸಿಕ್ಕಿತು. ಕಲೆ, ಸಂಸ್ಕೃತಿ ಕಾರ್ಯಕ್ಕೂ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ. ಬಡ ಕಲಾವಿದರು ಬದುಕುವುದು ಕಷ್ಟ ಆಗಿದೆ’ ಎಂದು ಶಾಸಕ ಬಿ.ಪಿ.ಹರೀಶ್ ಅಸಮಾಧಾನ ಹೊರಹಾಕಿದರು.
‘ಒಂದೂವರೆ ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ರಾಜ್ಯದಲ್ಲಿ ನಡೆದಿಲ್ಲ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶ ಕಲ್ಪಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಸರ್ಕಾರ, ಬಸ್ ಸಂಖ್ಯೆ ಕಡಿಮೆ ಮಾಡಿದೆ. ಚುನಾವಣಾ ರಾಜಕಾರಣದ ಜೊತೆಗೆ ಅಭಿವೃದ್ಧಿಗೂ ಒತ್ತುನೀಡಬೇಕು. ಇಲ್ಲವಾದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಎದುರು ಮುಖ ಮುಚ್ಚಿಕೊಂಡು ಹೋಗಬೇಕಾಗುತ್ತದೆ’ ಎಂದು ಆರೋಪಿಸಿದರು.
‘ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕರು ರಾಜಕೀಯ ಮಾತನಾಡಬಾರದು’ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು. ಯುವ ಕಾಂಗ್ರೆಸ್ ಮುಖಂಡರು ವೇದಿಕೆ ಬಳಿ ಜಮಾಯಿಸಿದರು. ವೇದಿಕೆಯ ಮೇಲೆ ಇದ್ದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಎದ್ದುನಿಂತು ಆಕ್ಷೇಪಿಸಿದರು. ಮೇಯರ್ ಕೆ.ಚಮನ್ ಸಾಬ್ ಪೋಡಿಯಂ ಬಳಿಗೆ ತೆರಳಿ ಭಾಷಣ ನಿಲ್ಲಿಸುವಂತೆ ಆಗ್ರಹಿಸಿದರು.
ಇದರಿಂದ ಕೆರಳಿದ ಶಾಸಕ ಹರೀಶ್, ‘ಭಾಷಣಕ್ಕೆ ಅಡ್ಡಿಪಡಿಸಿದರೆ ಸರಿ ಇರುವುದಿಲ್ಲ’ ಎಂದು ಆಕ್ರೋಶಭರಿತರಾದರು. ಮಧ್ಯಪ್ರವೇಶ ಮಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್ ಶಾಸಕರ ಮನವೊಲಿಸಲು ಪ್ರಯತ್ನಿಸಿದರು.
ವೇದಿಕೆಯಲ್ಲಿದ್ದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮೌನವಾಗಿದ್ದರು.
ನೋವುಂಡ ದೇಶಕ್ಕೆ ಔಷಧ ನೀಡಿದ್ದು ಅಂಬೇಡ್ಕರ್. ದೇಶ ಕಟ್ಟಕಟ್ಟಲು ಪ್ರೀತಿ ಹಂಚೋಣ, ದ್ವೇಷ ಅಲ್ಲ.ಸಾಂಸ್ಕೃತಿಕ ಕಾರ್ಯಕ್ರಮ ರಾಜಕೀಯಕ್ಕೆ ವೇದಿಕೆ ಆಗಬಾರದಿತ್ತು.- ಕೆ.ಚಮನ್ ಸಾಬ್, ಮೇಯರ್, ದಾವಣಗೆರೆ
‘ಕಲಾತಂಡಗಳಿಗೆ ನೀಡುವ ಪ್ರೋತ್ಸಾಹ ಧನ ತೀರಾ ಕಡಿಮೆ ಇದೆ. ಕಲಾವಿದರ ಪ್ರಯಾಣ ವೆಚ್ಚಕ್ಕೂ ಇದು ಸಾಲದು. ವಿಜೇತ ತಂಡಗಳಿಗೆ ಕನಿಷ್ಠ ₹1 ಲಕ್ಷ ಬಹುಮಾನ ನೀಡಿದರೆ ಅನುಕೂಲ. ಈ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುವೆ. ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ಮಾಡುವೆ’ ಎಂದು ಮಾಯಕೊಂಡ ಕಾಂಗ್ರೆಸ್ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು. ಇದಕ್ಕೆ ಕಲಾವಿದರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು.
‘ಯುವಜನೋತ್ಸವದಲ್ಲಿ ದುಂದು ವೆಚ್ಚ ಹೆಚ್ಚು ಆಗಿದೆ. ಇದನ್ನು ಕಡಿಮೆ ಮಾಡಿದರೆ ಕಲಾವಿದರಿಗೆ ನೆರವು ನೀಡಲು ಸಾಧ್ಯ. ಕಲಾವಿದರಲ್ಲಿ ಬಹುತೇಕರು ಬಡವರೇ ಇದ್ದಾರೆ. ಅವರ ಜೀವನದ ಬಗ್ಗೆ ಕೂಡ ಗಮನ ಹರಿಸಬೇಕಿದೆ’ ಎಂದರು.
ಈ ಮಾತುಗಳಿಗೆ ಬೆಂಬಲ ಸೂಚಿಸುತ್ತ ಮಾತು ಆರಂಭ ಮಾಡಿದ ಹರಿಹರ ಶಾಸಕ ಬಿ.ಪಿ.ಹರೀಶ್ ಭಾಷಣ ರಾಜಕೀಯಕ್ಕೆ ನೀತಿಗಳತ್ತ ಹೊರಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.