
ದಾವಣಗೆರೆಯ ಡೆಂಟಲ್ ಕಾಲೇಜು ರಸ್ತೆಯಲ್ಲಿ ಕಂಡು ಬಂದ ಡೆಲಿವರಿ ಬಾಯ್
–ಪ್ರಜಾವಾಣಿ ಚಿತ್ರ
ದಾವಣಗೆರೆ: ಈಚಿನ ವರ್ಷಗಳಲ್ಲಿ ಆನ್‌ಲೈನ್ ವಹಿವಾಟು ತನ್ನ ಹರವು ವಿಸ್ತರಿಸಿಕೊಳ್ಳುತ್ತಿದೆ. ಅದರಲ್ಲೂ ಹತ್ತೇ ನಿಮಿಷದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುವ ‘ಕ್ವಿಕ್ ಕಾಮರ್ಸ್’ ಉದ್ಯಮವು ದಾವಣಗೆರೆಯಂತಹ ಎರಡನೇ ಹಂತದ ನಗರಗಳಲ್ಲಿ ಯಶಸ್ವಿಯಾಗುತ್ತಿದೆ. ತಮ್ಮ ದಿನಬಳಕೆಯ ವಸ್ತುಗಳಿಗೆ ಸಾಂಪ್ರದಾಯಿಕ ಕಿರಾಣಿ ಅಂಗಡಿಗಳನ್ನು ನೆಚ್ಚಿಕೊಂಡಿದ್ದ ಜನರು ನಿಧಾನವಾಗಿ ಆನ್‌ಲೈನ್ ಶಾಪಿಂಗ್‌ಗೆ ತೆರೆದುಕೊಳ್ಳುತ್ತಿದ್ದಾರೆ.
ನಗರದ ಗ್ರಾಹಕರನ್ನು ಗುರಿಯಾಗಿಸಿಕೊಂಡು, ಕಳೆದೊಂದು ವರ್ಷದಿಂದ ಕ್ವಿಕ್ ಕಾಮರ್ಸ್ ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿವೆ. ಜೆಪ್ಟೊ, ಜಿಯೊ ಮಾರ್ಟ್, ಸ್ವಿಗ್ಗಿ ಇನ್‌ಸ್ಟಾ ಮಾರ್ಟ್ ಹಾಗೂ ಬ್ಲಿಂಕ್ ಇಟ್ ಪ್ರಮುಖ ಸಂಸ್ಥೆಗಳು. ಬಿಗ್ ಬ್ಯಾಸ್ಕೆಟ್ ಕಾರ್ಯಾಚರಣೆ ಆರಂಭಿಸಿ ಒಂದು ವಾರ ಕಳೆದಿದೆ. ಬಹುತೇಕ ಕಂಪನಿಗಳ ಗ್ರಾಹಕರು ಯುವಜನತೆ ಎಂಬುದು ವಿಶೇಷ.
ಸಮಯ ಹಾಗೂ ಹಣ ಉಳಿತಾಯವೇ ಆನ್‌ಲೈನ್ ಶಾಪಿಂಗ್‌ನತ್ತ ಯುವಜನರು ಆಕರ್ಷಿತರಾಗಲು ಪ್ರಮುಖ ಕಾರಣ. ದುಡಿಯುವ ದಂಪತಿ, ಅಂಗಡಿಗೆ ಹೋಗಿ ಬರಲು ಪುರುಸೊತ್ತು ಇಲ್ಲದವರು, ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು, ವಯಸ್ಸಿನ ಕಾರಣಕ್ಕೆ ಅಂಗಡಿಗೆ ಹೋಗಿಬರಲು ಆಗದವರು ಇವುಗಳ ಕಾಯಂ ಗ್ರಾಹಕರಾಗಿದ್ದಾರೆ.
ಕ್ವಿಕ್ ಕಾಮರ್ಸ್ ಕಂಪನಿಗಳು ನೀಡುವ ‘ಡಿಸ್ಕೌಂಟ್ ಆಫರ್’ ಬಹುಜನರನ್ನು ಸೆಳೆಯುತ್ತಿವೆ. ಹಬ್ಬದ ವೇಳೆ ಸ್ಪರ್ಧೆಗೆ ಬಿದ್ದಂತೆ ಆಫರ್‌ಗಳನ್ನು ಕಂಪನಿಗಳು ಘೋಷಿಸುತ್ತವೆ. ಕಾಸ್ಮೆಟಿಕ್ಸ್, ಪೇಸ್ಟ್, ಶಾಂಪೂ ರೀತಿಯ ಲೇಬಲ್ಡ್ ವಸ್ತುಗಳು ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪ್ಯಾಕೇಜ್ಡ್ ವಸ್ತುಗಳು ಆನ್‌ಲೈನ್ ತಾಣಗಳಲ್ಲಿ ಕಡಿಮೆ ದರಕ್ಕೆ ಸಿಗುವುದರಿಂದ ಜನರು ಇವುಗಳತ್ತ ಆಕರ್ಷಿತರಾಗುತ್ತಿದ್ದಾರೆ.
ಬೆಂಗಳೂರಿನಂತಹ ಮಹಾ ನಗರದಲ್ಲಿ ಖ್ಯಾತಿ ಗಳಿಸಿರುವ ಫ್ಲಿಪ್‌ಕಾರ್ಟ್ ರೀತಿಯ ಇ–ಕಾಮರ್ಸ್ ತಾಣಗಳು ದಾವಣಗೆರೆಯಂತಹ ಎರಡನೇ ಹಂತದ ನಗರಗಳನ್ನು ಪ್ರವೇಶಿಸಲು ಹಾತೊರೆಯುತ್ತಿವೆ. ಐಪಿಒ ಮೂಲಕ ಹಣ ಒಟ್ಟುಗೂಡಿಸಿ ತಮ್ಮ ವ್ಯಾಪಾರವನ್ನು ಸಣ್ಣ ನಗರಗಳಿಗೂ ವಿಸ್ತರಿಸಿಕೊಳ್ಳುವ ದಿನಗಳು ದೂರಿವಿಲ್ಲ ಎನ್ನುತ್ತಾರೆ ದಾವಣಗೆರೆಯ ಕ್ವಿಕ್ ಕಾಮರ್ಸ್ ಸಂಸ್ಥೆಯೊಂದರ ವ್ಯವಸ್ಥಾಪಕ.
ದೊಡ್ಡ ನಗರಗಳಲ್ಲಿ ಶ್ರೀಮಂತರು ಹಾಗೂ ಮೇಲ್ಮಧ್ಯಮ ವರ್ಗದವರು ಇವುಗಳ ಗ್ರಾಹಕರಾಗಿದ್ದರು. ಈಚಿನ ದಿನಗಳಲ್ಲಿ ಮಧ್ಯಮವರ್ಗದ ದೊಡ್ಡ ಸಮೂಹ ಹಾಗೂ ಕೆಳಮಧ್ಯಮ ವರ್ಗದವರೂ ಇವುಗಳತ್ತ ವಾಲುತ್ತಿರುವುದು, ಆನ್‌ಲೈನ್ ವಹಿವಾಟಿಗೆ ಇರುವ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ.
ಆಫ್‌ಲೈನ್ ಇದ್ದಾಗ ಕಳ್ಳತನದ ಪ್ರಕರಣಗಳು ಅಧಿಕವಾಗಿದ್ದವು. ಇದರ ಗೊಡವೆ ಬೇಡ ಎಂದು ಆನ್‌ಲೈನ್‌ಗೆ ಬದಲಿಸಲಾಗಿದೆ. ಈಗ ಖರ್ಚೂ ಕಡಿಮೆಯಾಗಿದೆದಾಕ್ಷಾಯಿಣಿ, ಕ್ವಿಕ್ ಕಾಮರ್ಸ್ ಕಂಪನಿಯೊಂದರ ಸಿಬ್ಬಂದಿ
ಒಂದು ವರ್ಷದಿಂದ ಕ್ವಿಕ್ ಕಾಮರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬೆಳಿಗ್ಗೆ 6 ಗಂಟೆಗೆ ಶುರುವಾಗುವ ಕೆಲಸ ರಾತ್ರಿ 11ರವರೆಗೂ ಇರುತ್ತದೆ. ದಿನಕ್ಕೆ ₹1500 ರವರೆಗೂ ಸಂಪಾದಿಸುತ್ತೇನೆಝಬಿ, ಕ್ವಿಕ್ ಕಾಮರ್ಸ್ ಕಂಪನಿಯೊಂದರ ಡೆಲಿವರಿ ಬಾಯ್
ನಿಜಲಿಂಗಪ್ಪ ಬಡಾವಣೆಯ ನಮ್ಮ ಮಾರ್ವಲೆಸ್ ಸಲೂನ್‌ಗೆ ತಕ್ಷಣ ಕೀಬೋರ್ಡ್ ಬೇಕಿತ್ತು. ಅಂಗಡಿಗೆ ಹೋಗಲು ಸಮಯ ಇರಲಿಲ್ಲ. ಬ್ಲಿಂಕ್‌ಇಟ್‌ನಲ್ಲಿ ಆರ್ಡರ್ ಮಾಡಿದ 10 ನಿಮಿಷಕ್ಕೆ ಬಂದು ತಲುಪಿತುಆಕಾಶ್, ಕ್ವಿಕ್ ಕಾಮರ್ಸ್ ಗ್ರಾಹಕ
ಹತ್ತೇ ನಿಮಿಷದಲ್ಲಿ ಡೆಲಿವರಿ!
ನಗರದಲ್ಲಿ ನೆಲೆ ಕಂಡುಕೊಂಡು ಅದನ್ನು ವಿಸ್ತರಿಸಿಕೊಂಡಿರುವ ಕ್ವಿಕ್ ಕಾಮರ್ಸ್ ಕಂಪನಿಗಳು ತಮ್ಮ ವೇಗದ ಸೇವೆಯಿಂದ ಜನರಿಗೆ ಹತ್ತಿರವಾಗಿವೆ. ಆರ್ಡರ್ ಮಾಡಿದ ಹತ್ತೇ ನಿಮಿಷದಲ್ಲಿ ಮನೆಗೆ ವಸ್ತುಗಳನ್ನು ತಂದುಕೊಡುತ್ತಿರುವ ಕಾರಣಕ್ಕೆ ಜನರಿಗೆ ಹೊರಗೆ ಹೋಗಿ ಬರುವ ತಲೆಬಿಸಿ ಇಲ್ಲದಂತಾಗಿದೆ. ಕನಿಷ್ಠ ₹100 ಮೊತ್ತದ ವಸ್ತು ಖರೀದಿಸಿದರೆ ಮನೆ ಬಾಗಿಲಿಗೆ ಉಚಿತ ಡೆಲಿವರಿ ಮಾಡಲಾಗುತ್ತದೆ. ಗ್ರಾಹಕರು ಡೆಲಿವರಿ ಶುಲ್ಕವನ್ನು ಹೆಚ್ಚುವರಿಯಾಗಿ ಭರಿಸಬೇಕಾದ ಅಗತ್ಯ ಇಲ್ಲ. ಮೇಲಾಗಿ ಆನ್‌ಲೈನ್ ತಾಣಗಳಿಗೆ ಸಮಯದ ಮಿತಿ ಇಲ್ಲ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕಂಪನಿಯು ದಿನದ 24 ಗಂಟೆಯೂ ಆರ್ಡರ್ ಸ್ವೀಕರಿಸುತ್ತದೆ. ಹೀಗಾಗಿ ಸರಿರಾತ್ರಿಯಲ್ಲೂ ವಸ್ತುಗಳನ್ನು ತರಿಸಿಕೊಳ್ಳುವ ಅವಕಾಶ ಇದೆ. ಡೆಲಿವರಿ ಮಾಡುವ ಸಿಬ್ಬಂದಿಗೆ ಮೊದಲ ಒಂದು ಕಿಲೋ ಮೀಟರ್‌ಗೆ ₹12 ನೀಡಲಾಗುತ್ತದೆ. ನಂತರದ ಪ್ರತೀ ಕಿಲೋ ಮೀಟರ್‌ಗೆ ₹5ರಿಂದ ₹8ರವರೆಗೆ ಪಾವತಿಸಲಾಗುತ್ತದೆ. ವಾರಕ್ಕೊಮ್ಮೆ ವೇತನ ಪಾವತಿಸುವ ವ್ಯವಸ್ಥೆ ಇದೆ ಎನ್ನುತ್ತಾರೆ ಸಂಸ್ಥೆಯೊಂದರ ಸಿಬ್ಬಂದಿ.
ಸ್ವಿಗ್ಗಿ ಇನ್‌ಸ್ಟಾಮಾರ್ಟ್: ಆಹಾರ ಪೂರೈಕೆಯಲ್ಲಿ ಜನಪ್ರಿಯವಾಗಿರುವ ಸ್ವಿಗ್ಗಿ ಸಂಸ್ಥೆಯು ತನ್ನ ಇನ್‌ಸ್ಟಾಮಾರ್ಟ್ ಶಾಖೆಯನ್ನು ಇದೇ ಜನವರಿಯಲ್ಲಿ ನಗರಕ್ಕೆ ಪರಿಚಯಿಸಿದೆ. ಹದಡಿ ರಸ್ತೆಯಲ್ಲಿರುವ ಮಳಿಗೆಯು ಈಗ ನಿತ್ಯವೂ 700 ಆರ್ಡರ್‌ಗಳನ್ನು ನಿರ್ವಹಿಸುತ್ತಿದೆ. ಎಲೆಕ್ಟ್ರಾನಿಕ್ ಉಪಕರಣಗಳೂ ಇಲ್ಲಿ ಲಭ್ಯ ಇವೆ. ಸದ್ಯದಲ್ಲೇ ರಿಂಗ್ ರಸ್ತೆಯಲ್ಲಿ ಮತ್ತೊಂದು ಮಳಿಗೆ ತೆರೆಯುವ ಯೋಜನೆ ಹಾಕಿಕೊಳ್ಳಲಾಗಿದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದ್ದು ಮಧ್ಯರಾತ್ರಿಯೂ 15 ರಿಂದ 20 ಆರ್ಡರ್‌ಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ನಿರ್ವಾಹಕ ಅನಿಲ್ ಕುಮಾರ್ ಹೇಳುತ್ತಾರೆ.
ಜೆಪ್ಟೊ: ದಾವಣಗೆರೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಅಡಿ ಇಟ್ಟ ಜೆಪ್ಟೊ ಕ್ವಿಕ್ ಕಾಮರ್ಸ್ ಸಂಸ್ಥೆಯು ದಿನಕ್ಕೆ ಅಂದಾಜು 1200 ಆರ್ಡರ್‌ಗಳನ್ನು ಸ್ವೀಕರಿಸುತ್ತಿದೆ. ಬಹುತೇಕರು ದಿನಸಿ ಹಾಗೂ ಹೈನು ಪದಾರ್ಥಗಳಿಗೆ ಜೆಪ್ಟೊ ಸಂಸ್ಥೆಯನ್ನು ಅವಲಂಬಿಸಿದ್ದಾರೆ. ಬೆಳಿಗ್ಗೆ 6ರಿಂದ ರಾತ್ರಿ 2ಗಂಟೆಯವರೆಗೂ ಶಾಪಿಂಗ್ ಚಾಲ್ತಿಯಲ್ಲಿರುತ್ತದೆ. 60ಕ್ಕೂ ಹೆಚ್ಚು ಡೆಲಿವರಿ ಬಾಯ್‌ಗಳು ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಮಳಿಗೆಯ ವ್ಯವಸ್ಥಾಪಕ ಕೊಟ್ರೇಶ್. ಸದ್ಯದಲ್ಲೇ ಹರಿಹರ ಸಮೀಪ ಪ್ರತ್ಯೇಕ ಗೋದಾಮು ನಿರ್ಮಿಸಲು ಸಂಸ್ಥೆ ಸಿದ್ಧತೆ ನಡೆಸಿದೆ.
ಬ್ಲಿಂಕ್ ಇಟ್: ಇದೇ ಜನವರಿಯಲ್ಲಿ ನಗರದಲ್ಲಿ 200 ಆರ್ಡರ್ ಮೂಲಕ ಕಾರ್ಯಾಚರಣೆ ಆರಂಭಿಸಿದ ಬ್ಲಿಂಕ್ ಇಟ್ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈಗ ದಿನವೊಂದಕ್ಕೆ ಸರಿ ಸುಮಾರು 1500 ಆರ್ಡರ್‌ಗಳನ್ನು ಸ್ವೀಕರಿಸುತ್ತಿದೆ. ಇಲ್ಲಿಯೂ ದಿನಸಿಗೆ ಜನರು ಬ್ಲಿಂಕ್ ಇಟ್ ಅನ್ನು ಆಯ್ದುಕೊಳ್ಳುತ್ತಿದ್ದಾರೆ. ಬೆಳಿಗ್ಗೆ 6ರಿಂದ ದಿನದ ಕೆಲಸ ಶುರು ಮಾಡುವ 40–50 ಹುಡುಗರು ಡೆಲಿವರಿ ಬಾಯ್ ಆಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎನ್ನುತ್ತಾರೆ ಮಳಿಗೆಯ ವ್ಯವಸ್ಥಾಪಕ ಶಶಿಕಾಂತ್.
ಜಿಯೊ ಮಾರ್ಟ್: ಆನ್‌ಲೈನ್ ಹಾಗೂ ಆಫ್‌ಲೈನ್ ಎರಡರಲ್ಲಿಯೂ ಹೆಸರು ಮಾಡಿರುವ ಜಿಯೊ ಮಾರ್ಟ್ ದಾವಣಗೆರೆಯಲ್ಲಿ ಸದ್ಯ ನಾಲ್ಕು ಶಾಖೆಗಳನ್ನು ಹೊಂದಿದೆ. ಪಿಬಿ ರಸ್ತೆ ಎಂಸಿಸಿ ‘ಬಿ’ ಬ್ಲಾಕ್ ರಾಮ್ ಆ್ಯಂಡ್ ಕೋ ವೃತ್ತ ಅರುಣಾ ಥಿಯೇಟರ್ ಸಮೀಪ ಮಳಿಗೆ ಇವೆ. ರಾಮ್ ಆ್ಯಂಡ್ ಕೋ ವೃತ್ತದ ಸಮೀಪದ ಶಾಖೆ ಈ ಮೊದಲು ಸೂಪರ್ ಮಾರ್ಕೆಟ್ ಆಗಿತ್ತು. ಆದರೆ ಗ್ರಾಹಕರ ಸಂಖ್ಯೆ ಕುಸಿದಿದ್ದರಿಂದ ವಹಿವಾಟನ್ನು ಆನ್‌ಲೈನ್‌ಗೆ ಪರಿವರ್ತಿಸಲಾಗಿದೆ. ಇಲ್ಲಿ ದಿನವೊಂದಕ್ಕೆ 250 ಆರ್ಡರ್‌ಗಳನ್ನು ಡೆಲಿವರಿ ಮಾಡಲಾಗುತ್ತಿದೆ. ಎಲ್ಲ ನಾಲ್ಕೂ ಶಾಖೆಗಳಿಂದ ದಿನವೊಂದಕ್ಕೆ ಸರಾಸರಿ 2000 ಆರ್ಡರ್ ಸ್ವೀಕೃತವಾಗುತ್ತಿವೆ ಎನ್ನುತ್ತಾರೆ ಸಿಬ್ಬಂದಿ.
ಕಿರಾಣಿ ಅಂಗಡಿಗಳ ಮೇಲೆ ಪ್ರಹಾರ
ಕ್ವಿಕ್ ಕಾಮರ್ಸ್ ತಾಣಗಳು ನಗರಕ್ಕೆ ಲಗ್ಗೆಯಿಟ್ಟಿದ್ದು ಸಾಂಪ್ರದಾಯಿಕ ಕಿರಾಣಿ ವಹಿವಾಟಿನ ಮೇಲೆ ಶೇ 20ರಷ್ಟು ಹೊಡೆತ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಕೆಲವು ಮುಚ್ಚಿಹೋಗಿವೆ. ಕ್ವಿಕ್ ಕಾಮರ್ಸ್ ಕಂಪನಿಗಳ ತೀವ್ರ ಸ್ಪರ್ಧೆಯ ಜೊತೆಗೆ ಕೆಲಸಗಾರರ ಕೊರತೆ ಬಾಡಿಗೆ ವಿದ್ಯುತ್ ಶುಲ್ಕ ಹಾಗೂ ಹೊಸ ತಲೆಮಾರು ವ್ಯಾಪಾರಕ್ಕೆ ಹಿಂದೇಟು ಹಾಕುತ್ತಿರುವುದು ಸಾಂಪ್ರದಾಯಿಕ ಕಿರಾಣಿ ಅಂಗಡಿಗಳ ಸಂಖ್ಯೆ ಕುಸಿಯಲು ಕಾರಣವಾಗಿವೆ ಎಂಬುದು ದಾವಣಗೆರೆಯ ರಾಮ್ ಆ್ಯಂಡ್ ಕೋ ಕಿರಾಣಿ ಅಂಗಡಿಯ ಮಾಲೀಕ ಚಂದನ್ ಅವರ ಮಾತು. ನಗರದಲ್ಲಿ 1500ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳಿದ್ದರೂ ವ್ಯಾಪಾರಕ್ಕೆ ಹೊಸ ತಲೆಮಾರಿನ ಜನರು ಬರುತ್ತಿಲ್ಲ. ಹೊಸ ಅಂಗಡಿಗಳೂ ಸ್ಪರ್ಧೆ ತಾಳಿಕೊಳ್ಳದೇ ಬಾಗಿಲು ಹಾಕುತ್ತಿವೆ. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ನಿರಂತರವಾಗಿ ಕೆಲಸ ಮಾಡಲು ಯುವ ಸಮುದಾಯ ಸಿದ್ಧವಿಲ್ಲ. ರಜೆ ಅಥವಾ ವಾರಾಂತ್ಯದ ರಜೆ ಸೌಲಭ್ಯ ಇಲ್ಲಿಲ್ಲ. ಹೀಗಾಗಿ ಸಾಫ್ಟ್‌ವೇರ್ ಮೊದಲಾದ ಉದ್ಯೋಗಗಳತ್ತ ಕಿರಾಣಿ ಅಂಗಡಿ ಮಾಲೀಕರ ಮಕ್ಕಳು ಹೊರಳುತ್ತಿದ್ದಾರೆ ಎನ್ನುತ್ತಾರೆ ಅವರು.
‘ಎಷ್ಟೇ ಕ್ವಿಕ್ ಕಾಮರ್ಸ್ ಕಂಪನಿಗಳು ಬಂದರೂ ಸಾಂಪ್ರದಾಯಿಕ ಗ್ರಾಹಕರು ನಮ್ಮ ಕೈಬಿಟ್ಟಿಲ್ಲ’ ಎನ್ನುತ್ತಾರೆ ಶಾಮನೂರು ಶಾಪೆ ಮಳಿಗೆಯ ಮಾಲೀಕ ಹನುಮಂತಪ್ಪ. ‘ಅಂಗಡಿಗೆ ಬಂದು ಖರೀದಿಸಿದರೇ ಗ್ರಾಹಕರಿಗೆ ಸಮಾಧಾನ. ವಸ್ತುವಿನ ಗುಣಮಟ್ಟವನ್ನು ಖುದ್ದು ಪರೀಕ್ಷಿಸಿ ಖರೀದಿಸಲು ಇಲ್ಲಿ ಅವಕಾಶವಿದೆ ಎಂಬ ಕಾರಣಕ್ಕೆ ಕಿರಾಣಿ ಅಂಗಡಿ ಮೇಲೆ ಅವಲಂಬಿತರಾಗಿದ್ದಾರೆ. ನಮ್ಮ ಗ್ರಾಹಕರು ಎಲ್ಲೂ ಹೋಗಿಲ್ಲ’ ಎಂಬುದು ಅವರ ವಿಶ್ವಾಸದ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.