ದಾವಣಗೆರೆ ಜಿಲ್ಲೆಯ ಕಡರನಾಯ್ಕನಹಳ್ಳಿ ಸಮೀಪದ ಕಮಲಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಭತ್ತದ ಬೆಳೆ ಚಾಪೆ ಹಾಸಿರುವುದು
ಪ್ರಜಾವಾಣಿ ಚಿತ್ರ
ದಾವಣಗೆರೆ: ರಾಜ್ಯದಾದ್ಯಂತ ಏಪ್ರಿಲ್‌ನಿಂದಲೇ ಆರಂಭವಾಗಿರುವ ವರುಣನ ಆರ್ಭಟಕ್ಕೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಆದರೆ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಕೊಡಿಸಲು ನೈಸರ್ಗಿಕ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಅಡ್ಡಿಯಾಗಿದೆ.
ದಾವಣಗೆರೆ ಜಿಲ್ಲೆಯಲ್ಲೇ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದೆ. ಆದರೆ, ಸರ್ಕಾರದ ಸಮೀಕ್ಷೆಯಲ್ಲಿ, ‘55 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆ ನಷ್ಟವಾಗಿದೆ’ ಎಂದು ದಾಖಲಿಸಲಾಗಿದೆ.
ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಬಿತ್ತನೆ ಮಾಡಲಾದ ಸಂಪೂರ್ಣ ಭೂಪ್ರದೇಶದಲ್ಲಿ ಶೇ 33ಕ್ಕಿಂತ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಗೀಡಾಗಿದ್ದರೆ ಮಾತ್ರ ಪರಿಹಾರ ವಿತರಣೆಗೆ ಅವಕಾಶ ಇದೆ. ಈ ನಿಯಮದಿಂದ ಶೇ 33ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬೆಳೆ ಹಾನಿಯಾದ ರೈತರಿಗೆ ಸರ್ಕಾರದಿಂದ ಪರಿಹಾರ ಪಡೆಯಲು ಅವಕಾಶವಿಲ್ಲ. ಇದರಿಂದಾಗಿ ಅನ್ನದಾತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಅಡಿಕೆ, ಬಾಳೆ, ತೆಂಗು, ಮಾವು, ಪಪ್ಪಾಯ, ದಾಳಿಂಬೆ ಬೆಳೆಗಳ ಪೈಕಿ ಬಾಳೆ, ಅಡಿಕೆ ಹಾಗೂ ಪಪ್ಪಾಯ ಬೆಳೆಗೆ ಗಾಳಿ ಮತ್ತು ಮಳೆಯಿಂದ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ಆಲಿಕಲ್ಲು ಮಳೆಯಿಂದ ಮಾವಿನ ಫಸಲಿಗೆ ಧಕ್ಕೆಯಾಗಿದೆ. ಮೇಲ್ನೋಟಕ್ಕೆ ಹಾನಿಯು ಶೇ 33ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಂಡರೂ ದಿನಗಳು ಕಳೆದಂತೆ ಮಳೆಯ ಪ್ರಭಾವ ಸಂಪೂರ್ಣ ಫಸಲನ್ನೇ ಆಪೋಷನ ತೆಗೆದುಕೊಳ್ಳುತ್ತದೆ. ಆದರೆ, ಸಮೀಕ್ಷೆ ವೇಳೆ ಕಡಿಮೆ ಪ್ರಮಾಣದ ಹಾನಿ ಕಂಡುಬರುವುದರಿಂದ ಪರಿಹಾರ ನೀಡಲಾಗದು ಎಂಬುದು ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಹೇಳಿಕೆ.
‘ಎನ್‌ಡಿಆರ್‌ಎಫ್‌ನ ಮಾರ್ಗಸೂಚಿಯೇ ಅವೈಜ್ಞಾನಿಕವಾಗಿದೆ. ಪ್ರಮಾಣ ಎಷ್ಟೇ ಆದರೂ ಹಾನಿ ಹಾನಿಯೇ. ಮಾನದಂಡವನ್ನು ಬದಲಿಸಿ ಕಡಿಮೆ ಪ್ರಮಾಣದಲ್ಲಿ ಬೆಳೆ ಹಾನಿಯಾದರೂ ಪರಿಹಾರ ವಿತರಿಸಬೇಕು’ ಎಂದು ರೈತ ಬಿ.ಎಂ.ಸತೀಶ್ ಆಗ್ರಹಿಸಿದ್ದಾರೆ.
‘ಜೋರು ಮಳೆಯಿಂದಾಗಿ ಕಟಾವಿನ ಹಂತಕ್ಕೆ ಬಂದಿರುವ ಭತ್ತದ ಬೆಳೆ ನೆಲಕಚ್ಚಿದೆ. ಜಿಲ್ಲೆಯಲ್ಲಿ ಅಂದಾಜು 15 ಸಾವಿರದಿಂದ 20 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಭತ್ತದ ಬೆಳೆ ಹಾನಿಗೀಡಾಗಿದೆ. ಕೃಷಿ ಇಲಾಖೆ ಸಿಬ್ಬಂದಿ ಸಮೀಕ್ಷೆ ಕೈಗೊಂಡಿಲ್ಲ. ನಷ್ಟದ ನಿಖರ ಅಂಕಿ–ಅಂಶ ದಾಖಲಿಸುತ್ತಿಲ್ಲ’ ಎಂದು ಅವರು ದೂರಿದರು.
‘8 ಎಕರೆಯಲ್ಲಿ ಬೆಳೆದ ಭತ್ತದ ಪೈಕಿ 1 ಎಕರೆಯಷ್ಟು ಬೆಳೆ ಮಳೆಯಿಂದ ಹಾನಿಗೀಡಾಗಿದೆ. ಆದರೆ, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಒಂದೆಡೆ ಭತ್ತದ ದರ ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಹೀಗಿರುವಾಗ ಪರಿಹಾರವೂ ದೊರೆಯುವುದಿಲ್ಲ ಎಂದಾದರೆ ಮತ್ತಷ್ಟು ನಷ್ಟವಾಗಲಿದೆ’ ಎಂದು ದಾವಣಗೆರೆ ತಾಲ್ಲೂಕಿನ ಕೊಳೇನಹಳ್ಳಿ ಗ್ರಾಮದ ಹಾಲಸಿದ್ದಪ್ಪ, ನಾಗರಸನಹಳ್ಳಿಯ ವೆಂಕಟಸುಬ್ಬರಾವ್ ತಿಳಿಸಿದರು.
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ದೇವರಬೆಳಕೆರೆ ಸಮೀಪದ ರೈತರೊಬ್ಬರ ಜಮೀನಿನಲ್ಲಿ ಭತ್ತದ ಬೆಳೆ ಚಾಪೆ ಹಾಸಿರುವುದು
ಕನಿಷ್ಠ ಶೇ 33ರಷ್ಟು ಹಾನಿಯಾದರೆ ಮಾತ್ರ ಪರಿಹಾರ ನೀಡಬೇಕೆಂಬ ಮಾನದಂಡದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಎನ್‌ಡಿಆರ್‌ಎಫ್ ಎಸ್‌ಡಿಆರ್‌ಎಫ್ ಮಾನದಂಡ ಬದಲಾವಣೆಗೆ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.– ತೇಜಸ್ವಿ ಪಟೇಲ್, ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.