ADVERTISEMENT

ಹರಿಹರ| ರಾಮಾಯಣ ಇಂದಿಗೂ ಪ್ರೇರಣಾದಾಯಕ ಗ್ರಂಥ: ಶಾಸಕ ಬಿ.ಪಿ. ಹರೀಶ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:31 IST
Last Updated 8 ಅಕ್ಟೋಬರ್ 2025, 5:31 IST
ಹರಿಹರದಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ನಿಮಿತ್ತ ಆಯೋಜಿಸಿದ್ದ ಮೆರವಣಿಗೆಯಲ್ಲಿ ಶಾಸಕ ಬಿ.ಪಿ.ಹರೀಶ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹಾಗೂ ಗಣ್ಯರು ಭಾಗವಹಿಸಿದ್ದರು
ಹರಿಹರದಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ನಿಮಿತ್ತ ಆಯೋಜಿಸಿದ್ದ ಮೆರವಣಿಗೆಯಲ್ಲಿ ಶಾಸಕ ಬಿ.ಪಿ.ಹರೀಶ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹಾಗೂ ಗಣ್ಯರು ಭಾಗವಹಿಸಿದ್ದರು   

ಹರಿಹರ: ವಾಲ್ಮೀಕಿ ರಚಿಸಿದ ರಾಮಾಯಣವು ಭಾರತೀಯರಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಿತು ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯ ಪಟ್ಟರು.

ನಗರದ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆ ರಚಿಸಿದ ಶ್ರೇಷ್ಠ ಗ್ರಂಥ ರಾಮಾಯಣ ಇಂದಿಗೂ ಪ್ರೇರಣಾದಾಯಕ ಗ್ರಂಥವಾಗಿ ಉಳಿದಿದೆ ಎಂದರು.

ADVERTISEMENT

ಹಿಂದುಳಿದ ವರ್ಗಕ್ಕೆ ಸೇರಿದ್ದರೂ ತಮ್ಮ ಜ್ಞಾನದ ಮೂಲಕ ವಾಲ್ಮೀಕಿ ಇಂದು ಜಗತ್ತಿನ ಗಮನ ತಮ್ಮತ್ತ ಸೆಳೆದಿದ್ದಾರೆ. ವಿದ್ಯೆ ಮತ್ತು ಜ್ಞಾನಕ್ಕೆ ಮಾತ್ರ ಆ ಶಕ್ತಿಯಿದ್ದು, ಇಂದಿನ ಯುವ ಜನತೆಯೂ ವಿದ್ಯೆಗೆ ಮಹತ್ವ ನೀಡಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹೇಳಿದರು.

ವಾಲ್ಮೀಕಿಯವರ ರಾಮಾಯಣವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಅರ್ಥಪೂರ್ಣವಾಗುತ್ತದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹೇಳಿದರು.

ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಮಾತನಾಡಿದರು. ಎಚ್.ಕೃಷ್ಣಪ್ಪ ಉಪನ್ಯಾಸ ನೀಡಿದರು. 

ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮತ್ತು ಯುವ ಮುಖಂಡ ಮಾರುತಿ ಬೇಡರ್ ಅವರು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮುದಾಯದ 12 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದರು. 

ಕಾರ್ಯಕ್ರಮದಲ್ಲಿ ತಾಪಂ ಇಒ ಸುಮಲತಾ ಎಸ್.ಪಿ., ಬಿಇಒ ದುರ್ಗಪ್ಪ ಡಿ., ಪೌರಾಯುಕ್ತ ನಾಗಣ್ಣ, ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆರ್.ಎಫ್. ದೇಸಾಯಿ, ವಿವಿಧ ಇಲಾಖೆ ಅಧಿಕಾರಿಗಳಾದ ಹನುಮಂತಪ್ಪ, ಅಬ್ದುಲ್ ಖಾದರ್, ಪ್ರಿಯಾ ದರ್ಶಿನಿ, ನಗರಸಭೆ ಸದಸ್ಯ ದಿವಾಕರ ಬಾಬು, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.