ADVERTISEMENT

ದಾವಣಗೆರೆ: ಕೊರೊನಾ ವಿರುದ್ಧ ಸಮರದ ಮುಂಚೂಣಿಯಲ್ಲಿ ರೆಡ್‌ಕ್ರಾಸ್‌

ನಿತ್ಯ ಜಾಗೃತಿ, ಆಹಾರ ಪೂರೈಕೆ, ಮಾಸ್ಕ್‌–ಸ್ಯಾನಿಟೈಸರ್‌ ವಿತರಣೆಯಲ್ಲಿ ತೊಡಗಿರುವ ಕೊರೊನಾ ವಾರಿಯರ್ಸ್‌

ಬಾಲಕೃಷ್ಣ ಪಿ.ಎಚ್‌
Published 8 ಏಪ್ರಿಲ್ 2020, 2:29 IST
Last Updated 8 ಏಪ್ರಿಲ್ 2020, 2:29 IST
ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರೆಡ್‌ಕ್ರಾಸ್‌ ಸದಸ್ಯರು
ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರೆಡ್‌ಕ್ರಾಸ್‌ ಸದಸ್ಯರು   

ದಾವಣಗೆರೆ: ಲಾಕ್‌ಡೌನ್‌ ಘೋಷಣೆಯಾದ ಕ್ಷಣದಿಂದ ಈವರೆಗೆ ನಿರಂತರವಾಗಿ ಕೊರೊನಾ ವಿರುದ್ಧದ ಜಾಗೃತಿಯಲ್ಲಿ, ಜನರ ಸೇವೆಯಲ್ಲಿ ತೊಡಗಿಸಿಕೊಂಡವರು ಇಲ್ಲಿನ ರೆಡ್‌ಕ್ರಾಸ್‌ ಮತ್ತು ಲೈಫ್‌ಲೈನ್‌ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದ 42 ಮಂದಿ ಸದಸ್ಯರು. ಅವರನ್ನು ಕೊರೊನಾ ವಾರಿಯರ್ಸ್‌ ಎಂದೇ ಸರ್ಕಾರ ಗುರುತಿಸಿದೆ.

ಇನ್ನು 21 ದಿನಗಳ ಕಾಲ ಲಾಕ್‌ಡೌನ್ ಎಂದು ಮಾರ್ಚ್‌ 24ರಂದು ಪ್ರಧಾನಿ ಘೋಷಿಸಿದ ಮರುದಿನ ಬೆಳಿಗ್ಗೆ ಮೂರು ಧ್ವನಿವರ್ಧಕಗಳನ್ನು ಹಿಡಿದುಕೊಂಡು ನಗರದ ವಿವಿಧೆಡೆ ಸಂಚರಿಸಿ ಕೊರೊನಾ ಬಗ್ಗೆ ವಹಿಸಬೇಕಾದ ಮುಂಜಾಗರೂಕತೆಯ ಬಗ್ಗೆ ಮಾಹಿತಿ ನೀಡತೊಡಗಿದರು. ಕರಪತ್ರಗಳನ್ನು ಹಂಚತೊಡಗಿದರು. ಪ್ರತಿದಿನ ಬೆಳಿಗ್ಗೆ 6ರಿಂದ 11ರವರೆಗೆ ಈ ಕಾರ್ಯ ನಡೆಯುತ್ತಿದೆ. ಮಾರ್ಚ್‌ 28ರಿಂದ ಬಡವರಿಗೆ, ನಿರ್ಗತಿಕರಿಗೆ, ಹೊರರಾಜ್ಯಗಳಿಂದ ಬಂದು ಊಟಕ್ಕಾಗಿ ಪರದಾಡುತ್ತಿದ್ದ ಕಾರ್ಮಿಕರಿಗೆ ಆಹಾರ ಒದಗಿಸತೊಡಗಿದರು. ಪ್ರತಿದಿನ 1000 ಪ್ಯಾಕೆಟ್‌ ಆಹಾರಗಳು ವಿತರಣೆಯಾಗುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲೇ ಇರುವ ಎಸ್‌ಒಜಿ ಕಾಲೊನಿ, ರಾಮನಗರ ಮುಂತಾದ ದೂರದ ಊರುಗಳಿಗೆ ತರಕಾರಿ ತಲುಪುತ್ತಿರಲಿಲ್ಲ. ತರಕಾರಿ ಹೋಲ್‌ಸೇಲ್ ಅಂಗಡಿಯವರು ನೀಡಿದ ಉಚಿತ ತರಕಾರಿಯನ್ನು ಇಂಥ ಪ್ರದೇಶಗಳಿಗೆ ತಲುಪಿಸುವ ಕೆಲಸವನ್ನು ರೆಡ್‌ಕ್ರಾಸ್‌ ಮಾಡುತ್ತಿದೆ.

ADVERTISEMENT

ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಸೋಮವಾರ ಕಟ್ಟಡ ಕಾರ್ಮಿಕರಿಗೆ ಸೋಪು, ಮಾಸ್ಕ್‌, ಸ್ಯಾನಿಟೈಜರ್‌ ಇರುವ 10 ಸಾವಿರ ಕಿಟ್‌ಗಳನ್ನು ವಿತರಿಸುವ ಕಾರ್ಯ ಆರಂಭಿಸಿದ್ದಾರೆ. ರೆಡ್‌ಕ್ರಾಸ್‌ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮಹಾಂತೇಶ ಬಿಳಗಿ ಇದಕ್ಕೆ ಚಾಲನೆ ನೀಡಿದ್ದಾರೆ.

ರೆಡ್‌ಕ್ರಾಸ್‌ ಜಿಲ್ಲಾ ಸಂಸ್ಥೆಯ ಚೇರ್‌ಮನ್‌ ಡಾ.ಎ.ಎಂ. ಶಿವಕುಮಾರ್‌ ನೇತೃತ್ವದ ಈ ತಂಡದಲ್ಲಿ ಸಂಸ್ಥೆ ಕಾರ್ಯದರ್ಶಿ ಅನಿಲ್ ಬಾರಂಗಳ್, ಪದಾಧಿಕಾರಿಗಳಾದ ಡಿ.ಎಸ್.ಸಾಗರ್, ಗೌಡರ ಚನ್ನಬಸಪ್ಪ, ಡಿ.ಎಸ್.ಸಿದ್ದಣ್ಣ, ಆನಂದ ಜ್ಯೋತಿ, ಆರ್.ಟಿ. ಅರುಣಕುಮಾರ, ಶೇಷಾಚಲ, ಮಾಧವ ಪದಕಿ, ಎಂ.ಜಿ. ಶ್ರೀಕಾಂತ್, ಇನಾಯತ್‌ವುಲ್ಲಾ, ಶ್ರೀಕಾಂತ ಬಗರೆ, ಮೋಹನ ಕುಮಾರ, ಗೋಪಾಲ ಗೌಡರು, ರಂಜಿತ್, ವಿಜಯ ಮುಂತಾದವರು ಇರುವ ತಂಡ ಈ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ತರಕಾರಿಯಮ್ಮನ ಸ್ಫೂರ್ತಿ
‘ಎಪಿಎಂಸಿ ಯಾರ್ಡ್‌ಗಳಲ್ಲಿ, ಮಾರುಕಟ್ಟೆಯಲ್ಲಿ ಜಾಗೃತಿ ಮೂಡಿಸುತ್ತಿದ್ದೆವು. ತಲೆಯಲ್ಲಿ ಹೊತ್ತು ತರಕಾರಿ ಮಾರಾಟ ಮಾಡುವ ಮಹಿಳೆಯೆಯೊಬ್ಬರು ಅಲ್ಲಿ ನಮ್ಮನ್ನು ನಿತ್ಯ ನೋಡುತ್ತಿದ್ದರು. ಕೊರೊನಾ ಬಗ್ಗೆ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಒಂದು ದಿನ ಮೆಚ್ಚುಗೆ ವ್ಯಕ್ತಪಡಿಸಿ ಬೇರೆನೆಲ್ಲ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಬಡವರಿಗೆ ಊಟ ಒದಗಿಸುತ್ತಿದ್ದೇವೆ ಎಂದು ನಾವು ಉತ್ತರ ನೀಡಿದಾಗ ಆಕೆ ಅಲ್ಲೇ ತನ್ನ ಬುಟ್ಟಿಯಲ್ಲಿದ್ದ ತರಕಾರಿಯಲ್ಲಿ ಅರ್ಧವನ್ನು ಉಚಿತವಾಗಿ ನೀಡಿ ಬಳಸಿಕೊಳ್ಳಿ ಎಂದು ತಿಳಿಸಿದರು. ಇದನ್ನು ನೋಡಿ ಸ್ಫೂರ್ತಿ ಪಡೆದ ಅಲ್ಲಿನ ತರಕಾರಿ ಹೋಲ್‌ಸೇಲ್‌ ಅಂಗಡಿಯವರು ಕೂಡ ಉಚಿತವಾಗಿ ತರಕಾರಿ ನೀಡಲು ಮುಂದಾದರು’ ಎಂದು ರೆಡ್‌ಕ್ರಾಸ್‌ ಚೇರ್‌ಮನ್‌ ಡಾ.ಎ.ಎಂ. ಶಿವಕುಮಾರ್‌ ‘ಪ್ರಜಾವಾಣಿ’ಗೆ ವಿವರಿಸಿದರು.

‘ಕೂಡಲೇ ನಮ್ಮ ತಂಡದ ಶ್ರೀಕಾಂತ್‌ ಮತ್ತು ಇನಾಯತ್‌ ದಾನಿಗಳನ್ನು ಮಾತನಾಡಿಸಿ ಮೂರು ವ್ಯಾನ್‌ಗಳ ವ್ಯವಸ್ಥೆ ಮಾಡಿದರು. ಈಗ ಆ ಮೂರು ವಾಹನಗಳಲ್ಲಿ ತರಕಾರಿಗಳನ್ನು ಒಯ್ದು ತರಕಾರಿ ಸಿಗದ ವಾರ್ಡ್‌ಗಳಿಗೆ ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.