ದಾವಣಗೆರೆ: ಶೋಷಿತ ಸಮುದಾಯಗಳ ಬಗೆಗೆ ರಾಜ್ಯ ಸರ್ಕಾರಕ್ಕೆ ನೈಜ ಕಾಳಜಿ ಇದ್ದರೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣವನ್ನು ಮರುಪರಿಶೀಲಿಸಬೇಕು. ಬಂಜಾರ (ಲಂಬಾಣಿ) ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಆಗ್ರಹಿಸಿದರು.
‘ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. 101 ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಬಂಜಾರ ಸೇರಿದಂತೆ ಹಲವು ಜಾತಿಗಳಿಗೆ ಇದರಿಂದ ಅನ್ಯಾಯವಾಗಿದೆ. ಇದನ್ನು ಸರಿಪಡಿಸದೇ ಇದ್ದರೆ ಸೆ.10ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
‘ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶವಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ವರ್ಗೀಕರಣ ಮಾಡಿ ಸಂವಿಧಾನದ ಆಶಯಗಳಿಗೆ ಅಪಚಾರ ಮಾಡಿದೆ. ವಲಸೆ ಪ್ರವೃತ್ತಿ ಹೊಂದಿದ ಸಮುದಾಯದ ನೈಜ ಜನಸಂಖ್ಯೆಯನ್ನು ಪರಿಗಣಿಸದೇ ಅನ್ಯಾಯ ಮಾಡಲಾಗಿದೆ. ಕೂಡಲೇ ಈ ಆದೇಶವನ್ನು ಹಿಂಪಡೆದು ಸಮಗ್ರ ಅಧ್ಯಾಯನ ಮಾಡಬೇಕು. ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಒಳಮೀಸಲಾತಿ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
‘ಸದಾಶಿವ ಆಯೋಗದ ವರದಿಯಲ್ಲಿ ಬಂಜಾರ ಸಮುದಾಯದ ಜನಸಂಖ್ಯೆಯನ್ನು 11 ಲಕ್ಷ ಎಂಬುದಾಗಿ ಉಲ್ಲೇಖಿಸಲಾಗಿತ್ತು. ನಾಗಮೋಹನದಾಸ್ ಆಯೋಗದ ವರದಿಯಲ್ಲಿ 14 ಲಕ್ಷ ಎಂಬ ಉಲ್ಲೇಖವಿದೆ. ತಾಂಡ ಅಭಿವೃದ್ಧಿ ನಿಗಮ ದಶಕದ ಹಿಂದೆ ನಡೆಸಿದ ಸಮೀಕ್ಷೆಯಲ್ಲಿ ಸಮುದಾಯದ ಜನಸಂಖ್ಯೆ 17 ಲಕ್ಷ ಇತ್ತು. ಈಗ ಅಂದಾಜು 20ರಿಂದ 25 ಲಕ್ಷ ಜನಸಂಖ್ಯೆ ಇದೆ’ ಎಂದು ಮಾಜಿ ಶಾಸಕ ಬಸವರಾಜ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
‘ಬಿಜೆಪಿ ಅಧಿಕಾರವಧಿಯಲ್ಲಿ ಮಾಡಿದ ವರ್ಗೀಕರಣದಲ್ಲಿ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ಶೇ 4.5ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿತ್ತು. ಈಗ ಸ್ಪೃಶ್ಯ ಜಾತಿಗಳ ಹೆಸರಿನಲ್ಲಿ ಸೃಷ್ಟಿಸಿದ 3ನೇ ಗುಂಪಿನ 63 ಜಾತಿಗಳಿಗೆ ಶೇ 5ರಷ್ಟು ಮೀಸಲಾತಿ ಹಂಚಿಕೆ ಮಾಡಿ ಅನ್ಯಾಯ ಮಾಡಲಾಗಿದೆ. ಇದನ್ನು ವಿರೋಧಿಸಿ ಸೆ.6ರಂದು ದಾವಣಗೆರೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.
ಬಂಜಾರ ಸಮುದಾಯದ ಮುಖಂಡರಾದ ಕೆ.ಆರ್. ಮಲ್ಲೇಶ ನಾಯ್ಕ, ಶಿವಪ್ರಕಾಶ್, ಚಂದ್ರನಾಯ್ಕ, ತಾರೇಶ ನಾಯ್ಕ, ಮಂಜಾ ನಾಯ್ಕ ಹಾಜರಿದ್ದರು.
ನಾಗಮೋಹನದಾಸ್ ಆಯೋಗದ ವರದಿಯಲ್ಲಿ ಬಂಜಾರ ಸಮುದಾಯದ ಜನಸಂಖ್ಯೆಯ ಮಾಹಿತಿ ತಪ್ಪಾಗಿದೆ. ಸರ್ಕಾರ ಮರುಪರಿಶೀಲಿಸದೇ ಇದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ.ಸರ್ದಾರ್ ಸೇವಾಲಾಲ್ , ಬಂಜಾರ ಗುರುಪೀಠ ಸ್ವಾಮೀಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.