ADVERTISEMENT

ದಾವಣಗೆರೆ: ಸೇವಾಲಾಲ್‌ ಜಾತ್ರೆ ಸಿದ್ಧತೆಗೆ ರುದ್ರಪ್ಪ ಲಮಾಣಿ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 10:33 IST
Last Updated 20 ಜನವರಿ 2025, 10:33 IST
<div class="paragraphs"><p>ರುದ್ರಪ್ಪ ಲಮಾಣಿ</p></div>

ರುದ್ರಪ್ಪ ಲಮಾಣಿ

   

ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಭಾಯಾಗಡದಲ್ಲಿ ಸಂತ ಸೇವಾಲಾಲ್ ಅವರ 286ನೇ ಜನ್ಮ ದಿನಾಚರಣೆ ಪ್ರಯುಕ್ತ ಫೆ.13ರಿಂದ 15ರವರೆಗೆ ಹಮ್ಮಿಕೊಂಡಿರುವ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ADVERTISEMENT

‘ಜಾತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತವೇ ವಹಿಸಿಕೊಂಡರೆ ಅನುಕೂಲ. ಊಟ, ವಸತಿ, ನೀರು ಹಾಗೂ ಸಾರಿಗೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಕ್ಷೇತ್ರದಲ್ಲಿ ಶಾಶ್ವತ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆಲೋಚಿಸಬೇಕು’ ಎಂದು ಹೇಳಿದರು.

‘ಚಿಕ್ಕ ಲೋಪಗಳನ್ನು ಹೊರತುಪಡಿಸಿ ಪ್ರತಿ ವರ್ಷವೂ ಜಾತ್ರಾ ಮಹೋತ್ಸವ ಚೆನ್ನಾಗಿ ನಡೆದಿದೆ. ಮೂರು ದಿನ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಬೇಕು. ಊಟಕ್ಕೆ ಸಂಬಂಧಿಸಿದ ತೀರ್ಮಾನವನ್ನು ಜಿಲ್ಲಾಧಿಕಾರಿ ಕೈಗೊಳ್ಳಲಿ’ ಎಂದು ಹೇಳಿದರು.

‘ನೀರಿಗೆ 50 ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿಕೊಂಡರೆ ಒಳಿತು. ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಸಲಹೆ ಪಡೆದು ಸ್ಥಳಗಳನ್ನು ಗುರುತಿಸಿ ನೀರಿನ ಸೌಲಭ್ಯ ಕಲ್ಪಿಸಬೇಕು. ಫೆ.14ರಂದು ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದ್ದು, ಅಧಿಕಾರಿಗಳು ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಕೈಗೊಳ್ಳಬೇಕು’ ಎಂದರು.

‘ರಾಜ್ಯಮಟ್ಟದ ಯುವಜನ ಮೇಳವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಜಾತ್ರಾ ಮಹೋತ್ಸವಕ್ಕೂ ಇದೇ ರೀತಿಯ ಸಿದ್ಧತೆ ಕೈಗೊಳ್ಳಲು ಸನ್ನದ್ಧರಾಗಿದ್ದೇವೆ. 50ಕ್ಕೂ ಹೆಚ್ಚು ಸ್ವಯಂ ಸೇವಕರ ಅಗತ್ಯವಿದೆ. ಕೆಲಸ ಮಾಡುವ ಉತ್ಸಾಹ ಹಾಗೂ ಬದ್ಧತೆ ಇರುವ ಸಮುದಾಯದ ಸ್ವಯಂ ಸೇವಕರನ್ನು ನೀಡಿ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮನವಿ ಮಾಡಿದರು.

‘ಊಟ ಸೇರಿ ಇತರ ಕಾರ್ಯಕ್ಕೆ ತಾತ್ಕಾಲಿಕ ಟೆಂಡರ್‌ ಕರೆಯಲಾಗುತ್ತದೆ. ಗುತ್ತಿಗೆದಾರರಿಗೆ ಹೊಣೆಗಾರಿಕೆ ನಿಗದಿಪಡಿಸಿ ಮೇಲ್ವಿಚಾರಣೆ ನಡೆಸಲು ಸಹಕಾರಿಯಾಗಲಿದೆ. ಅಡುಗೆ ತಯಾರಿಸುವ ಸ್ಥಳ ಸೇರಿ ಹಲವೆಡೆ ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಮಾಡಲಾಗುವುದು. ಶ್ರೀಕ್ಷೇತ್ರದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ರೂಪುರೇಷ ಸಿದ್ಧಪಡಿಸಲಾಗುವುದು’ ಎಂದು ಸಭೆಗೆ ಮಾಹಿತಿ ನೀಡಿದರು.

ಮೇಯರ್‌ ಕೆ.ಚಮನ್‌ ಸಾಬ್‌, ಶಾಸಕ ಬಸವರಾಜು ವಿ.ಶಿವಗಂಗಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್‌ ಬಿ.ಇಟ್ನಾಳ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್‌.ಲೋಕೇಶ್‌ ಹಾಜರಿದ್ದರು.

ಪೊಲೀಸ್‌ ಹೊರಠಾಣೆ ಸ್ಥಾಪನೆ

ಜಾತ್ರಾ ಮಹೋತ್ಸವದ ಅಂಗವಾಗಿ ಭಾಯಾಗಡದಲ್ಲಿ ಪೊಲೀಸ್‌ ಹೊರಠಾಣೆ ಸ್ಥಾಪಿಸಿ, ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ರೂಪಿಸಲಾಗುವುದು. 200 ಮೀಟರ್‌ ದೂರದಲ್ಲಿ ವಾಹನ ಪಾರ್ಕಿಂಗ್‌ಗೆ ಸ್ಥಳ ಗುರುತಿಸಲಾಗಿದೆ. ವಿದ್ಯುತ್‌ ಚಾಲಿತ ವಾಹನದ ವ್ಯವಸ್ಥೆ ಕಲ್ಪಿಸಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ತಿಳಿಸಿದರು.

‘ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ ಸ್ಥಳದಲ್ಲಿ ಮೊಕ್ಕಾಂ ಹೂಡಲಿದೆ. ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಊಟಕ್ಕೆ ಹೆಚ್ಚುವರಿ ಕೌಂಟರ್‌ ಇದ್ದರೆ ಜನದಟ್ಟಣೆ ನಿಯಂತ್ರಣ ಸಾಧ್ಯ. ತಾಜ್ಯ ವಿಲೇವಾರಿಗೂ ಒತ್ತು ನೀಡಬೇಕಿದೆ’ ಎಂದು ಹೇಳಿದರು.

ಲಕ್ಷಾಂತರ ಭಕ್ತರು ಬರುವುದರಿಂದ ಊಟ, ನೀರು ಹಾಗೂ ಶೌಚಾಲಯಕ್ಕೆ ಸರಿಯಾದ ಸಿದ್ಧತೆ ಮಾಡಿಕೊಳ್ಳಬೇಕು. ಗುತ್ತಿಗೆದಾರರಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು.
-ಜಯದೇವ ನಾಯ್ಕ, ಅಧ್ಯಕ್ಷ
ಮಾಲಾಧಾರಿಗಳು ಸಾತ್ವಿಕ ಆಹಾರ ಮಾತ್ರ ಸ್ವೀಕರಿಸುತ್ತಾರೆ. ಅವರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಆಗಬೇಕು. ಶೌಚಾಲಯಕ್ಕೆ ನಿರ್ಮಿಸಿದ ಕಟ್ಟಡಗಳ ಲೋಪ ಸರಿಪಡಿಸಬೇಕ
-ಹೀರಾಲಾಲ್‌, ನಿವೃತ್ತ ಕೆಎಎಸ್‌ ಅಧಿಕಾರಿ
ಬಂಜಾರ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಈ ಜಾತ್ರೆಯನ್ನು ಅಂತರರಾಷ್ಟ್ರೀಯ ಉತ್ಸವವಾಗಿ ಪರಿಗಣಿಸಬೇಕು. ಕುಂಭಮೇಳದಂತೆ ಸಿದ್ಧತೆ ಕೈಗೊಳ್ಳಬೇಕು.
-ಶಿವಮೂರ್ತಿ ನಾಯ್ಕ, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.