ADVERTISEMENT

ಬಟ್ಟೆಗಳಿಗಿಂತ ಬದುಕು ಮುಖ್ಯ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 6:29 IST
Last Updated 18 ಫೆಬ್ರುವರಿ 2022, 6:29 IST
   

ದಾವಣಗೆರೆ: ನಾವು ತೊಡುವ ಬಟ್ಟೆಗಳಿಗಿಂತ ಬದುಕು ಮುಖ್ಯ. ಜಾತಿ ಮನೋಭಾವವನ್ನು ತಳ್ಳಿಹಾಕಿ ಮನುಕುಲ ಒಂದು ಎನ್ನುವ ಭಾವನೆ ಮೂಡಿಸಬೇಕಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಹರ್ಡೇಕರ್ ಮಂಜಪ್ಪ ವೃತ್ತದಲ್ಲಿ ಶುಕ್ರವಾರ ನಡೆದ ಹರ್ಡೇಕರ್ ಮಂಜಪ್ಪ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿದ್ದ ಅವರು ಹಿಜಾಬ್–ಕೇಸರಿ ಶಾಲು ವಿವಾದ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

’ಇವತ್ತಿನ ದಿನಮಾನಗಳಲ್ಲಿ ಸಾಮರಸ್ಯ ಕದಡುವಂತಹ ಅನೇಕ ಕಹಿ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಅದರಲ್ಲೂ ವಿದ್ಯಾರ್ಥಿ ವರ್ಗವನ್ನು ಗಮನದಲ್ಲಿಟ್ಟುಕೊಂಡು ಅವರಲ್ಲಿ ಜಾತಿಯ ಮನೋಭಾವನೆಯನ್ನು ಬಿತ್ತುತ್ತಿರುವುದು ತುಂಬ ದುರದೃಷ್ಟಕರ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ನಾವು ತೊಡುವ ಬಟ್ಟೆಗಳು ಖಾಕಿ, ಕಾವಿ, ಖಾದಿಯಾಗಿರಬಹುದು. ಬಟ್ಟೆಗಳಿಗಿಂತ ಬದುಕು ಬಹಳ ಮುಖ್ಯ. ಹಾಗಾಗಿಯೇ ಶರಣರು ಹೇಳಿರುವಂತೆ ಇವನಾರವ, ಇವನಾರವ ಎನ್ನದೇ, ಇವ ನಮ್ಮವ ಇವ ನಮ್ಮವ ಎಂಬಂತೆ ಎಲ್ಲರನ್ನೂ ಅಪ್ಪಿಕೊಳ್ಳಬೇಕು. ಒಪ್ಪಿಕೊಳ್ಳಬೇಕು. ಇಂತಹ ಸಂದೇಶವನ್ನು ಎಲ್ಲಾ ಮಕ್ಕಳು, ಸಾರ್ವಜನಿಕರು, ರಾಜಕೀಯ ನೇತಾರರಲ್ಲಿ ನಾವು ಬೆಳೆಸಿದರೆ ಸಮಾಜದಲ್ಲಿರುವ ಅನಿಷ್ಠಗಳನ್ನು ಹೋಗಲಾಡಿಸಲು ಸಾಧ್ಯ. ಅಂತಹ ಧೀಶಕ್ತಿಯನ್ನು ಶರಣರು ಎಲ್ಲರಿಗೂ ಕರುಣಿಸಲಿ ಎಂದು ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.