
ಭಾಯಾಗಡ್ (ನ್ಯಾಮತಿ): ಸಂತ ಸೇವಾಲಾಲರ ಜನ್ಮಸ್ಥಾನ ಭಾಯಾಗಡ್‌ನಲ್ಲಿ ಫೆ.13, 14 ಮತ್ತು 15ರಂದು ನಡೆಯಲಿರುವ ಸಂತ ಸೇವಾಲಾಲರ 287ನೇ ಜಯಂತ್ಯುತ್ಸವದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಮತ್ತು ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷ ರುದ್ರಪ್ಪ ಲಮಾಣಿ ಮನವಿ ಮಾಡಿದರು.
ಗುರುವಾರ ಇಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾಡಳಿತದ ಸಹಕಾರದೊಂದಿಗೆ ಮೂರು ದಿನ ನಡೆಯುವ ಜಾತ್ರೆಗೆ ಸಮುದಾಯದವರ ಸಹಕಾರ ಅಗತ್ಯ. ಫೆ. 14ರಂದು ಸಚಿವರು, ಶಾಸಕರು, ಗಣ್ಯರು ಆಗಮಿಸಲಿದ್ದಾರೆ. 15ರಂದು ಬೋಗ್ ಕಾರ್ಯಕ್ರಮ ಇರುತ್ತದೆ. ಜಾತ್ರೆಯಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಆಗಬೇಕು ಎಂದು ಸೂಚಿಸಿದರು.
‘ಸೇವಾಲಾಲರ ಜಯಂತ್ಯುತ್ಸವ ಸರ್ಕಾರದ ಕಾರ್ಯಕ್ರಮವಲ್ಲ. ಸಮುದಾಯದವರು ಆಚರಿಸುವ ಜಾತ್ರೆ. ಇದಕ್ಕೆ ಸಮುದಾಯದ ಎಲ್ಲರ ಸಹಕಾರ ಮುಖ್ಯ. ಜಿಲ್ಲಾಡಳಿತವು ಕಾನೂನು, ಸುವ್ಯವಸ್ಥೆಯನ್ನು ನಿರ್ವಹಿಸುತ್ತದೆ. ನಾವು ಅಧಿಕಾರಿಗಳಾಗಿ ಅಷ್ಟೇ ಅಲ್ಲದೇ ಭಕ್ತರಾಗಿಯೂ ಸೇವೆ ಸಲ್ಲಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ಮೂರು ದಿನದ ಜಯಂತ್ಯುತ್ಸವದಲ್ಲಿ ನೀರು, ಊಟ, ಬೆಳಕು, ಸಾರಿಗೆ, ಆರೋಗ್ಯ, ಶೌಚಾಲಯ ಹಾಗೂ ಹೆಲಿಪ್ಯಾಡ್ ನಿರ್ಮಾಣ ಕೆಲಸಗಳನ್ನು ಸಂಬಂಧಪಟ್ಟವರು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.
‘ಜಾತ್ರೆಗೆ ಸಂಬಂಧಿಸಿದಂತೆ ಶುಕ್ರವಾರದಿಂದಲೇ ಕೆಲಸ ಆರಂಭಿಸಬೇಕು. ಯಾವುದೇ ಇಲಾಖೆಗಳು ಗೊಂದಲ ಮಾಡಿಕೊಳ್ಳದೇ ಪರಸ್ಪರ ಸಹಕಾರದಿಂದ ಕೆಲಸ ನಿರ್ವಹಿಸಬೇಕು’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಜಿ.ಶಾಂತನಗೌಡ ಸೂಚಿಸಿದರು.
‘ಮುಂದಿನ ದಿನಗಳಲ್ಲಿ ಚಿನ್ನಿಕಟ್ಟೆ, ಹಳೆಜೋಗ, ಸೂರಗೊಂಡನಕೊಪ್ಪದಿಂದ ಭಾಯಾಗಡ್ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಕೆರೆ ತುಂಬುವ ಯೋಜನೆಯನ್ನು ಆದಷ್ಟು ಬೇಗನೆ ಅನುಷ್ಠಾನ ಮಾಡಲಾಗುವುದು’ ಎಂದರು.
ಮಹಾಮಠ ಸಮಿತಿಯ ಪ್ರಧಾನ ಧರ್ಮದರ್ಶಿ ಬಿ.ಹೀರಾನಾಯ್ಕ, ಅಧ್ಯಕ್ಷ ಎನ್.ಹನುಮಂತನಾಯ್ಕ, ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣಕುಮಾರ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಎಸಿ ಎಚ್.ಬಿ.ಚನ್ನಪ್ಪ, ತಹಶೀಲ್ದಾರ್ ಎಂ.ಪಿ.ಕವಿರಾಜ, ತಾ.ಪಂ. ಇಒ ಎಚ್.ವಿ.ರಾಘವೇಂದ್ರ, ನಿರ್ದೇಶಕ ಎಲ್.ಈಶ್ವರನಾಯ್ಕ, ಸುರೇಂದ್ರನಾಯ್ಕ, ಖಜಾಂಚಿ ಕೆ.ಟಿ.ನಾಗರಾಜ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.