ADVERTISEMENT

ಲಿಂಗಾಯತ ಸಮಾಜ ನಿಂದನೆ: ಕಾಂಗ್ರೆಸ್‌ನಿಂದ ವೈ.ರಾಮಪ್ಪನ ಉಚ್ಚಾಟಿಸಲು ಒತ್ತಾಯ

ನೇರ್ಲಗಿ ಘಟನೆ ಗ್ರಾಮಕ್ಕೆ ಸೀಮಿತ: ಜಿ.ಪಂ. ಸದಸ್ಯ ಬಸವರಾಜ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 14:01 IST
Last Updated 26 ಏಪ್ರಿಲ್ 2019, 14:01 IST
ಕೆ.ಎಸ್. ಬಸವರಾಜ್
ಕೆ.ಎಸ್. ಬಸವರಾಜ್   

ದಾವಣಗೆರೆ: ವೀರಶೈವ ಲಿಂಗಾಯತ ಸಮಾಜದವರನ್ನು ನಿಂದಿಸಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವರಾಜ್‌ ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ರಾಮಪ್ಪ ವಿರುದ್ಧ ಹರಿಹಾಯ್ದ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಯೂ ಆಗಿರುವ ಬಸವರಾಜ್‌, ‘ನಿಂದಿಸಿ ಮತ ಕೇಳುವುದು ಕಾಂಗ್ರೆಸ್‌ ಸಂಸ್ಕೃತಿಯಲ್ಲ. ಪ್ರೀತಿ– ವಿಶ್ವಾಸ, ಸಹಬಾಳ್ವೆಯಿಂದ ಮತ ಕೇಳಬೇಕು. ಮತದಾರರು ನೀಡುವ ಫಲವನ್ನು ನಾವು ಉಣ್ಣಬೇಕು. ಕಾಂಗ್ರೆಸ್‌ ಎಲ್ಲಾ ಜಾತಿ, ಧರ್ಮಗಳನ್ನು ಒಳಗೊಂಡ ಪಕ್ಷವಾಗಿದೆ. ರಾಮಪ್ಪ ಅವರ ಹೇಳಿಕೆಯಿಂದ ಪಕ್ಷದ ನಾಯಕರಿಗೆ ಮುಜುಗರ ಉಂಟಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಾತಿ ನಿಂದಿಸಿ ಮತ ಕೇಳುವಂತೆ ಕೆಪಿಸಿಸಿ ಅಧ್ಯಕ್ಷರು ಇವರಿಗೆ ಸೂಚನೆ ನೀಡಿದ್ದಾರಾ? ಚುನಾವಣೆಯ ಜಿಲ್ಲಾ ಉಸ್ತುವಾರಿ ಮಲ್ಲಿಕಾರ್ಜುನ ಅಥವಾ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಅವರು ಈ ರೀತಿ ವರ್ತಿಸುವಂತೆ ತಿಳಿಸಿದ್ದಾರಾ? ಡಬಲ್‌ ಡಿಗ್ರಿ ಮಾಡಿರುವ ರಾಮಪ್ಪ ಅವರಿಗೆ ಜನರೊಂದಿಗೆ ಹೇಗೆ ಮಾತನಾಡಬೇಕು ಎಂಬ ತಿಳಿವಳಿಕೆ ಇಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಮಾಯಕೊಂಡ ಕ್ಷೇತ್ರದ ನೇರ್ಲಗಿ ಗ್ರಾಮದಲ್ಲಿ ಬಿಜೆಪಿಗೆ ಹೆಚ್ಚು ಮತ ಬೀಳುತ್ತಿದ್ದವು. ಆದರೆ, ನಾನು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದಾಗ ಎಲ್ಲಾ ಸಮುದಾಯದ ಮತದಾರರ ಮನವೊಲಿಸಿ ಗೆದ್ದಿದ್ದೇನೆ. ತಮಗೆ, ತಮ್ಮ ಸಂಬಂಧಿಗಳಿಗೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಈ ರೀತಿ ವರ್ತಿಸಿದರೆ ಅದು ಸರ್ವಾಧಿಕಾರ ಆಗಲಿದೆ. ಜನರ ವಿಶ್ವಾಸದಿಂದ ಗ್ರಾಮವನ್ನು ಗೆಲ್ಲಬೇಕು’ ಎಂದು ಅಭಿಪ್ರಾಯಪಟ್ಟರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡದ ಕಾಂಗ್ರೆಸ್‌ ಟಿಕೆಟ್‌ ನನಗೆ ನೀಡಿದಾಗ ರಾಮಪ್ಪ ಹಾಗೂ ಮಾಜಿ ಶಾಸಕ ಶಿವಮೂರ್ತಿ ಅವರು ಬಿಜೆಪಿ ಪರ ಕೆಲಸ ಮಾಡಿದರು. ಇದರ ಪರಿಣಾಮ ಅತ್ಯಲ್ಪ ಮತಗಳ ಅಂತರದಿಂದ ನಾನು ಸೋತಿದ್ದೇನೆ. ದಲಿತನಾಗಿದ್ದ ನನ್ನನ್ನು ಸೋಲಿಸುವಾಗ ಇವರ ತತ್ವ ಸಿದ್ಧಾಂತ ಎಲ್ಲಿಗೆ ಹೋಗಿತ್ತು’ ಎಂದು ಪ್ರಶ್ನಿಸಿದರು.

‘ನೇರ್ಲಗಿಯ ವಿಚಾರ ಗ್ರಾಮಕ್ಕೆ ಸೀಮಿತವಾಗಿರುವ ಸಂಘರ್ಷ. ಇದಕ್ಕೆ ಜಾತಿಯ ಬಣ್ಣ ಕಟ್ಟಬಾರದು. ಜಿಲ್ಲೆಯ ಮಟ್ಟಕ್ಕೆ ನೇರ್ಲಗಿ ಗ್ರಾಮಸ್ಥರು ರಾಮಪ್ಪ ಅವರನ್ನು ತಿರಸ್ಕರಿಸಿದ್ದರಿಂದ ಅವರು ಹತಾಶರಾಗಿ ಈ ರೀತಿ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ನೇರ್ಲಗಿ ಘಟನೆ ಬಗ್ಗೆ ಕೆಪಿಸಿಸಿ ಮುಖಂಡರಿಗೆ ವರದಿ ನೀಡಲಾಗುವುದು. ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಒತ್ತಾಯಿಸಲಾಗುವುದು’ ಎಂದು ಬಸವರಾಜ್‌ ಹೇಳಿದರು.

‘ರಾಮಪ್ಪ ಅವರು ಹಾಕಿರುವ ಅಟ್ರಾಸಿಟಿ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ನಿಜವಾಗಿಯೂ ಜಾತಿ ನಿಂದನೆ ನಡೆದಿದ್ದರೆ ಆರೋಪಿಗೆ ಶಿಕ್ಷೆ ನೀಡಲಿ. ಈ ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದರೆ ರಾಮಪ್ಪ ಅವರನ್ನು ಜೈಲಿಗೆ ಹಾಕಬೇಕು’ ಎಂದು ಬಸವರಾಜ್‌ ಒತ್ತಾಯಿಸಿದರು.

ಕಾಂಗ್ರೆಸ್‌ನ ಎಸ್‌.ಸಿ. ವಿಭಾಗದ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಪ್ಪ, ಹರೀಶ್‌, ಹೊನ್ನೂರು ಪ್ರಕಾಶ್‌, ನಾಗರಾಜ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.